ಬೆಂಗಳೂರು: ಸರ್ಕಾರ ಬರಿ ಸುಳ್ಳು ಹೇಳಿಕೊಂಡೇ ಕಾಲಹರಣ ಮಾಡ್ತಿದೆ. ವ್ಯಾಕ್ಸಿನ್ ಬಂದಿಲ್ಲ, ಬೆಡ್ ಸಿಗುತ್ತಿಲ್ಲ. ಲಾಕ್ ಡೌನ್ ಮಾಡಿದರೂ ಸೋಂಕು ಕಡಿಮೆಯಾಗ್ತಿಲ್ಲ. ಸಾವು ನೋವಿನ ಪ್ರಮಾಣ ಹೆಚ್ಚಾಗುತ್ತಿದೆ. ಸರ್ಕಾರ ಸಾವಿನ ಲೆಕ್ಕವನ್ನು ಸರಿಯಾಗಿ ಕೊಡ್ತಿಲ್ಲ. ಈ ವಿಚಾರವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆದಿಢೀರ್ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಿ.ಡಬ್ಲ್ಯು.ಸಿ. ಸದಸ್ಯ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಭೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಂಎಲ್ಸಿ ಬಿ.ಕೆ. ಹರಿಪ್ರಸಾದ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಶಾಸಕಿ ಸೌಮ್ಯರೆಡ್ಡಿ, ಭೈರತಿ ಸುರೇಶ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಡಿಕೆ ಶಿವಕುಮಾರ್ ಮಾತನಾಡಿ, ಕರ್ನಾಟಕ ಜನರ ರಕ್ಷಣೆಗೆ ಇಂದು ಕೋಟ್೯ಗಳು ಬಂದಿವೆ. ರಾಜ್ಯಕ್ಕೆ ಇಂದು ಆಕ್ಸಿಜನ್ ಬಂದಿದೆ ಅಂದರೆ ಅದಕ್ಕೆ ನಮ್ಮ ನ್ಯಾಯಾಲಯಗಳು ಕಾರಣ. ನ್ಯಾಯಾಲಯ ಇಂದು ಜನರ ರಕ್ಷಣಗೆ ಬಂದಿವೆ. ಅದಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕು. ರಾಜ್ಯದ ಜನತೆ ಪರವಾಗಿ ಸುಪ್ರೀಂಕೋರ್ಟ್ ಧನ್ಯವಾದಗಳು ಸಲ್ಲಿಸುತ್ತೇವೆ. ಸರ್ಕಾರಗಳು ನಡೆದುಕೊಳ್ಳುವ ರೀತಿ ನೋಡಿ, ಜನರ ಧ್ವನಿಯಾಗಿ ಕೋರ್ಟ್ ನಿಂತಿದೆ. ಹಾಗಾಗಿ ಆರೂವರೆ ಕೋಟಿ ಜನರ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.
ಇದನ್ನು ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಕೈ ನಾಯಕರ ಸಭೆ; ಲಸಿಕೆ, ಸಾವಿನ ವಿಚಾರದಲ್ಲಿ ಸರ್ಕಾರ ಎಲ್ಲವನ್ನು ಮುಚ್ಚಿಡುತ್ತಿದೆ ಎಂದು ಆಕ್ರೋಶ
ಲಸಿಕೆ ಕೊಡಲು ಆಗದೆ, ಕಾಟಾಚಾರಕ್ಕೆ ಒಂದನೇ ತಾರೀಖು ಪ್ರಾರಂಭ ಮಾಡಿದ್ದಾರೆ. ಲಸಿಕೆ ಸಿಗದೆ ಇರುವುದು ನೋಡ್ತಾ ಇದ್ದೇವೆ. ಆಸ್ಪತ್ರೆಗೆ ಹೋಗಿ ತೊಂದರೆ ಅನುಭವಿಸುತ್ತಿದ್ದಾರೆ. ಲಸಿಕೆ ನೀಡುವ ವಿಚಾರದಲ್ಲಿ ಫಸ್ಟ್ ಡೋಸ್ ಸರಿಯಾಗಿ ಸಿಕ್ಕಿಲ್ಲ. ಕೋವಿಡ್ ಲಸಿಕೆ ಪೂರೈಕೆ ಆಗ್ತಿಲ್ಲ. ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಸಿಗ್ತಿಲ್ಲ. ಆನ್ ಲೈನ್ ನಲ್ಲಿ ಅಪ್ಲಿಕೇಶನ್ ತೆರೆಯುತ್ತಿಲ್ಲ. ಜನ ಆಸ್ಪತ್ರೆಗೆ ಹೋಗಿ ವಾಪಸ್ ಬರ್ತಿದ್ದಾರೆ. ಎರಡನೇ ಅಲೆ ತಡೆಯೋಕೆಸರ್ಕಾರಕ್ಕೆ ಆಗ್ತಿಲ್ಲ. ಚಾಮರಾಜನಗರದಲ್ಲಿ 24 ಜನ ಸಾವನ್ನಪ್ಪಿದರು. ರಾಜ್ಯದ ಹಲವು ಕಡೆ ಸಾವು ನೋವು ಹೆಚ್ಚಾಗ್ತಿದೆ. ಇದು ಕೊಲೆಗಡುಕ ಸರ್ಕಾರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಳ್ಳೋಕೆ ಆಗ್ತಿಲ್ಲ. ನೊಟೀಸ್ ಕೊಡಿಸಿ ಹೆದರಿಸುತ್ತಿದ್ದಾರೆ. ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಜನರನ್ನು ಕೊಲೆ ಮಾಡುವ ಸಂಚನ್ನು ಸರ್ಕಾರ ಮಾಡ್ತಿದೆ. ಇದರ ಸಂಪೂರ್ಣ ಹೊಣೆ ಸರ್ಕಾರದವರೇ ಹೊರಬೇಕು. ಇಷ್ಟು ಬೈದರೂ ಸರ್ಕಾರ ಎಚ್ಚೆತ್ತುಕೊಳ್ತಿಲ್ಲ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋರ್ಟ್ ನಿಮಗೆ ಛೀಮಾರಿ ಹಾಕುತ್ತಿದೆ. ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಈ ಸಂಕಷ್ಟ ಸಂದರ್ಭದಲ್ಲಿ ಬಡಜನರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ