HOME » NEWS » Coronavirus-latest-news » CONGRESS LEADER INVOLVED IN ILLEGAL RATION RICE TRANSPORTATION GNR GNR

ಅಕ್ಕಿ ದೋಖಾ ಭಾಗ-3: ಅಕ್ಕಿ ಅಕ್ರಮ ಸಾಗಣೆಗೆ ರಾಜಕೀಯ ನಂಟು; ಸಿಕ್ಕಿಬಿದ್ದ ಕಾಂಗ್ರೆಸ್​ ಮುಖಂಡ

ಇದು ಕೊಪ್ಪಳ ಜಿಲ್ಲೆ ಮಾತ್ರವಲ್ಲ, ಗದಗ ಜಿಲ್ಲೆಯಲ್ಲೂ ಕಾಂಗ್ರೆಸ್ನ ಕೆಲ ಮುಖಂಡರ ಕೈವಾಡವೂ ಅಕ್ಕಿಯ ಅಕ್ರಮ ಸಾಗಣೆಯಲ್ಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯ ಆಡಳಿತ ಹಿಡಿಯುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಹಲವು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಇದೂ ಸಹ ಒಂದು ಎಂಬುದು ಶೋಚನೀಯ ಸಂಗತಿ.

news18-kannada
Updated:May 16, 2020, 12:05 PM IST
ಅಕ್ಕಿ ದೋಖಾ ಭಾಗ-3: ಅಕ್ಕಿ ಅಕ್ರಮ ಸಾಗಣೆಗೆ ರಾಜಕೀಯ ನಂಟು; ಸಿಕ್ಕಿಬಿದ್ದ ಕಾಂಗ್ರೆಸ್​ ಮುಖಂಡ
ಪಡಿತರ ಅಕ್ಕಿ
  • Share this:
ಕೊಪ್ಪಳ(ಮೇ.16): ಸರ್ಕಾರದ ಯೋಜನೆಗಳ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವವರ ಕೃತ್ಯವನ್ನು ನ್ಯೂಸ್ 18 ಕನ್ನಡ ಬಯಲು ಮಾಡಿತ್ತು. ನ್ಯೂಸ್ 18 ಕನ್ನಡದ ಸರಣಿ ವರದಿಗಳಿಂದ ಎಚ್ಚೆತ್ತುಕೊಂಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ಆರಂಭಿಸಿದೆ. ಈ ಅಕ್ರಮ ದಂಧೆಗೆ ರಾಜಕೀಯದ ನಂಟು ಸಹ ಇದೆ ಎನ್ನುವುದು ನಿಜಕ್ಕೂ ಹುಬ್ಬೇರಿಸುವ ಸಂಗತಿ. ಅಕ್ಕಿ ರಾಜಕೀಯ ಸುತ್ತಮುತ್ತಲಿನ ವಿಷಯ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಈ ಸರಣಿಯದ್ದು..

ಕೊಪ್ಪಳದಲ್ಲಿ ಮೇ 12ರಿಂದ ಸತತವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ನಾರಾಯಣರಡ್ಡಿ ಮತ್ತು ಕನಕರಡ್ಡಿ ದಾಳಿ ನಡೆಸುತ್ತಿದ್ದಾರೆ. ಮೇ 14ರ ರಾತ್ರಿ ಕುಷ್ಟಗಿ ತಾಲೂಕಿನ ತಾವರಗೇರಾದ ಎಪಿಎಂಸಿಯ ಸಾಯಿ ಟ್ರೇಡರ್ಸ್ ಮೇಲೆ ದಾಳಿ ನಡೆಸಿ ಸುಮಾರು 375 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ದಾಳಿಯ ನಂತರ ಪ್ರಕರಣ ದಾಖಲಿಸುವಾಗ ಸಾಯಿ ಟ್ರೇಡರ್ಸ್ ವೀರಭದ್ರಪ್ಪ ನಾಲತವಾಡ ಅವರಿಗೆ ಸಂಬಂಧಿಸಿದೆ ಎಂಬುದು ಬೆಳಕಿಗೆ ಬಂದಿದೆ.

ವೀರಭದ್ರಪ್ಪ ನಾಲತವಾಡ್ ಕಾಂಗ್ರೆಸ್ ಮುಖಂಡ. ಹಾಗೂ ವ್ಯಾಪಾರಿ. ಆದರೆ ಸರ್ಕಾರದ ಯೋಜನೆಗಳ, ಅದೂ ಬಡವರಿಗೆ ತಲುಪಲಿ ಎನ್ನುವ ಕಾರಣಕ್ಕಾಗಿ ಉಚಿತವಾಗಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಪ್ರಕರಣದಿಂದ ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸುವಂತಾಗಿದೆ.

ಕೆಲ ವ್ಯಾಪಾರಿಗಳು ತಮ್ಮ ವ್ಯವಹಾರಕ್ಕೆ ಯಾವುದೇ ಧಕ್ಕೆ ಬರದಿರಲೆಂದು ಒಂದೊಂದು ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಹೊಸತೇನಲ್ಲ. ವ್ಯಾಪಾರದ ಜೊತೆಗೆ ರಾಜಕೀಯವಾಗಿ ಬೆಳೆಯಬೇಕೆಂಬ ಆಕಾಂಕ್ಷೆ ಹೊಂದುವುದು. ಜನಬೆಂಬಲ ಸಿಗದಿದ್ದಾಗ ಅಧಿಕಾರದಲ್ಲಿರುವ ಪಕ್ಷದ ಜೊತೆಗಿರುವುದು. ಈ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ರಾಜಕೀಯಕ್ಕೆ ಸಂಬಂಧಿಸಿದ ಯಾರೂ ಹೊರತಲ್ಲ.

ಇದನ್ನೂ ಓದಿ: ಅಕ್ಕಿ ದೋಖಾ ಭಾಗ-2 : ಕೊಪ್ಪಳ ಡಿಸಿ ಪತ್ರಕ್ಕೆ ಬೆಂಡಾದ ಗದಗ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳು

ಇದು ಕೊಪ್ಪಳ ಜಿಲ್ಲೆ ಮಾತ್ರವಲ್ಲ, ಗದಗ ಜಿಲ್ಲೆಯಲ್ಲೂ ಕಾಂಗ್ರೆಸ್ನ ಕೆಲ ಮುಖಂಡರ ಕೈವಾಡವೂ ಅಕ್ಕಿಯ ಅಕ್ರಮ ಸಾಗಣೆಯಲ್ಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯ ಆಡಳಿತ ಹಿಡಿಯುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಹಲವು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಇದೂ ಸಹ ಒಂದು ಎಂಬುದು ಶೋಚನೀಯ ಸಂಗತಿ.

ಹಾಗೆಯೇ ಕಲಬುರಗಿಯಲ್ಲಿ ಕೆಲ ದಿನಗಳ ಹಿಂದೆ ಎಪಿಎಂಸಿ ಆವರಣ ಹಾಗೂ ತಾಜನಗರದ ಫಿಲ್ಟರ್ ಬೆಡ್ ಏರಿಯಾದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಸುಮಾರು 1,100 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದು ಸರಕಾರಕ್ಕೆ ವರದಿ ನೀಡಿದ್ದಾರೆ.ವಶಕ್ಕೆ ಪಡೆದ ಅಕ್ಕಿ ಏನು ಮಾಡುತ್ತಾರೆ?

ವಿವಿಧೆಡೆ ದಾಳಿ ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಅಕ್ಕಿಯನ್ನು ಏನು ಮಾಡುತ್ತಾರೆ ಎಂಬ ಕುತೂಹಲ ಬಹಳ ಜನರಿಗೆ ಇದ್ದೇ ಇರುತ್ತೆ. ದಾಳಿಯಲ್ಲಿ ವಶಕ್ಕೆ ಪಡೆದ ಅಕ್ಕಿಯು ಪಡಿತರ ಗುಣಮಟ್ಟದಲ್ಲಿದ್ದರೆ ಅದನ್ನು ಮತ್ತೇ ಭಾರತ ಉಗ್ರಾಣ ನಿಗಮಕ್ಕೆ ಸಾಗಿಸಿ ಮುಂದಿನ ತಿಂಗಳು ಸರಕಾರದಿಂದ ಪೂರೈಕೆಯಾಗಬೇಕಾದ ಅಕ್ಕಿಯಲ್ಲಿ ಇಷ್ಟನ್ನು ಕಡಿತ ಮಾಡಿಕೊಂಡು ದಾಸ್ತಾನು ಮಾಡಿಕೊಳ್ಳಬಹುದು. ಒಂದು ವೇಳೆ ವಶಪಡಿಸಿಕೊಂಡ ಅಕ್ಕಿ ಪಿಡಿಎಸ್ ಅಲ್ಲದಿದ್ದರೆ (ಯೋಗ್ಯವಲ್ಲದ ಮಿಶ್ರಣದಿಂದ ಕೂಡಿದ್ದರೆ) ಅದನ್ನು ಹರಾಜು ಮಾಡಿ ಅದರಿಂದ ಬರುವ ಹಣವನ್ನು ಕೋರ್ಟ್ ಕೇಸ್ ಇತ್ಯರ್ಥವಾಗುವವರೆಗೂ ಕಾಯ್ದಿಡಲಾಗುವುದು. ಸರ್ಕಾರ ಪರ ತೀರ್ಪು ಬಂದರೆ ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆರೋಪಿಗಳ ವಾದಕ್ಕೆ ಜಯ ಸಿಕ್ಕರೆ ಆ ಹಣವನ್ನು ಅವರಿಗೆ ಹಂಚಿಕೆ ಮಾಡಲಾಗುತ್ತದೆ.

"ಅಕ್ರಮ ಯಾವುದೇ ಇರಲಿ ಬೆಂಬಲಿಸಲ್ಲ. ಅದು ಅಕ್ಕಿಯದ್ದೇ ಆಗಿರಲಿ, ಮತ್ತೇ ಬೇರೆ ಯಾವುದೇ ಆಗಿರಲಿ. ಅಕ್ಕಿಯ ಅಕ್ರಮ ಸಾಗಣೆ ವಿಷಯ ಕುರಿತು ಗಮನಿಸಿದ್ದೇನೆ. ಇದು ವ್ಯಾಪಾರಿಗಳಿಗೆ ಸರಕಾರಕ್ಕೆ ಸಂಬಂಧಿಸಿದ್ದು ಎಂದು ಮಾತ್ರ ಎಣಿಸಿದ್ದೆ. ಇದರಲ್ಲಿ ರಾಜಕೀಯ ಪಕ್ಷಗಳ ನಂಟು ಇದೆ ಎಂಬುದು ನಿಜಕ್ಕೂ ಆಶ್ಚರ್ಯ ತಂದಿದೆ. ಅಕ್ರಮ ಮಾಡಿದವರು ಕಾಂಗ್ರೆಸ್ನವರೇ ಆಗಿರಲಿ, ಬಿಜೆಪಿಯವರೇ ಆಗಿರಲಿ, ನನ್ನ ಸಹೋದರನೇ ಆಗಿರಲಿ. ತಪ್ಪು ತಪ್ಪೇ. ಕಾನೂನು ಕ್ರಮ ಆಗಲೇಬೇಕು."

-ಶಿವರಾಜ ತಂಗಡಗಿ, ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ


(ವಿಶೇಷ ವರದಿ: ಬಸವರಾಜ ಕರುಗಲ್)
First published: May 16, 2020, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading