news18-kannada Updated:May 26, 2020, 12:13 PM IST
ರಾಹುಲ್ ಗಾಂಧಿ
ನವದೆಹಲಿ(ಮೇ.26): ಕೈಯಲ್ಲಿ ಕೆಲಸ ಮತ್ತು ಕಾಸು ಎರಡೂ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ, ಹಸಿವಿನಿಂದ ಸಾಯುತ್ತಿರುವ ಬಡವರಿಗೆ ಹಣ ನೀಡಿ ಎಂದು ಕಾಂಗ್ರೆಸ್ ನಾಯಕರೂ ಆದ ಸಂಸದ ರಾಹುಲ್ ಗಾಂಧಿ ಅವರು ಪದೇ ಪದೇ ಕೇಂದ್ರ ಸರ್ಕಾರವನ್ನು ಕೇಳಿಕೊಂಡರು. ಕೇಂದ್ರ ಸರ್ಕಾರದ ಮನ ಕರಗದ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಸ್ವತಃ ಬಡವರಿಗೆ ಹಣ ನೀಡಲು ಮುಂದಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 'ಗರೀಬಿ ಹಠಾವ್' ಯೋಜನೆ ತಂದು ಬಡವರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಿದ್ದರು. ಇದಲ್ಲದೆ ಕಾಂಗ್ರೆಸ್ ಲಗಾಯತ್ತಿನಿಂದಲೂ ಬಡವರ ಪಕ್ಷ ಎಂದೇ ಕರೆಯಲ್ಪಡುತ್ತದೆ. ಬಡವರ ವಿಷಯದಲ್ಲಿ ಬಂದಿರುವ ವರ್ಚಸ್ಸನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಈಗ ಲಾಕ್ಡೌನ್ ಮತ್ತು ಕೊರೋನಾ ತಂದೊಡ್ಡಿರುವ ದುರ್ದಿನಗಳನ್ನು ನಿಭಾಯಿಸಲು ಬಡವರಿಗೆ ಹಣ ನೀಡಲು ಮುಂದಾಗಿದೆ. ಕಾಂಗ್ರೆಸ್ ವತಿಯಿಂದ ಮೇ 28ರಂದು ದೇಶಾದ್ಯಂತ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ರೂಪಾಯಿ ಹಣ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆನ್ ಲೈನ್ ಮೂಲಕ ಅಭಿಯಾನ ನಡೆಸಲಿರುವ ಕಾಂಗ್ರೆಸ್ ತಾನು ಬಡವರ ಖಾತೆಗಳಿಗೆ ಹಣ ನೀಡಿ ಬಳಿಕ ಕೇಂದ್ರ ಸರಕಾರಕ್ಕೂ ಒತ್ತಾಯಿಸುವ ಯೋಜನೆಯನ್ನು ಹೊಂದಿದೆ.
ಕೊರೋನಾ ಮತ್ತು ಲಾಕ್ಡೌನ್ ಸಂಕಷ್ಟ ಸೃಷ್ಟಿಯಾದಾಗಿನಿಂದಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಕೈಯಲ್ಲಿ ಕೆಲಸ ಮತ್ತು ಕಾಸು ಎರಡೂ ಇಲ್ಲದೆ ಪರಿತಪಿಸುತ್ತಿರುವ ಬಡವರಿಗೆ ಹಣ ನೀಡುವಂತೆ ಪರಿಪರಿಯಾಗಿ ಒತ್ತಾಯಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ಡಾ. ರಘುರಾಮ್ ರಾಜನ್ ಮತ್ತು ಖ್ಯಾತ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ವಿಡಿಯೋ ಸಂವಾದ ಮಾಡಿ ಅವರಿಂದಲೂ ಹೇಳಿಸಿದರು. ಆದರೂ, ಕೇಂದ್ರ ಸರ್ಕಾರ ಬಡವರಿಗೆ ಹಣ ಹಾಕದ ಕಾರಣ ಕಾಂಗ್ರೆಸ್ ಈಗ ಸ್ವತಃ ಬಡವರಿಗೆ ಹಣ ನೀಡುವ ಮತ್ತು ಆ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರಕ್ಕೆ ಬಂದಿದೆ.
ಈ ಮೊದಲು ವಲಸೆ ಕಾರ್ಮಿಕರ ರೈಲು ಪ್ರಯಾಣ ವೆಚ್ಛ ಭರಿಸುವ ವಿಷಯದಲ್ಲೂ ಕಾಂಗ್ರೆಸ್ ಪಕ್ಷ ಹೀಗೆ ಮಾಡಿತ್ತು. ಬಡ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ಹೋಗಲು ಅವರೇ ಹಣ ನೀಡಬೇಕೆಂದು ರೈಲ್ವೆ ಇಲಾಖೆ ಪಟ್ಟು ಹಿಡಿದಿದ್ದಾಗ ಕಾಂಗ್ರೆಸ್ ತಾನು ಹಣ ತುಂಬುವುದಾಗಿ ಘೋಷಿಸಿತ್ತು. ಕಾಂಗ್ರೆಸ್ ನಡೆಯಿಂದ ಕಂಗಾಲಾದ ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಶೇಕಡಾ 75ರಷ್ಟು ಮತ್ತು ರಾಜ್ಯ ಸರ್ಕಾರ ಶೇಕಡಾ 25ರಷ್ಟು ಭರಿಸಿ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುವ ನಿರ್ಧಾರಕ್ಕೆ ಬಂದಿತ್ತು.
ಇದನ್ನೂ ಓದಿ :
ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ
ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸ್ವತಃ ಒಂದು ಸಾವಿರ ಬಸ್ ಕಳಿಸಿದ್ದರು. ಇದರಿಂದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ತೀವ್ರ ಮುಖಭಂಗ ಅನುಭವಿಸಿತ್ತು. ಇದೇ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಪಕ್ಷ ತಾನು ಮೊದಲಿಗೆ ಬಡವರಿಗೆ ಹಣ ನೀಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದೆ.
First published:
May 26, 2020, 12:06 PM IST