ಕೊರೊನಾ 2ನೇ ಅಲೆ ಅಬ್ಬರದಿಂದ ಸಾವಿರಾರು ಮಂದಿ ಸಾವಿನ ಮನೆ ಸೇರಿದ್ದಾರೆ. ಸದ್ಯ ದೇಶಾದ್ಯಂತ ಸೋಂಕಿನ ಪ್ರಮಾಣ ದಿನೇ ದಿನೇ ತಗ್ಗುತ್ತಿರುವುದು ಸಮಾಧಾನಕಾರ ಸಂಗತಿ. ಆದರೆ ಸಾವಿನ ವಿಚಾರದಲ್ಲಿ ಇದೇ ಸಮಾಧಾನ ಸಿಗುತ್ತಿಲ್ಲ. ರಾಜ್ಯದಲ್ಲಂತೂ ಕೊರೊನಾಕ್ಕೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ಹೊಸ ಸಂಶೋಧನೆ ವಿಶೇಷ ಅಂಶವೊಂದನ್ನು ಹೊರ ಹಾಕಿದೆ. ಜೆಎಎಂಎ ನೆಟ್ವರ್ಕ್ ನಡೆಸಿರುವ ಅಧ್ಯಯನದ ಪ್ರಕಾರ ಸೋಂಕಿಗೆ ತುತ್ತಾದವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿದ್ದಾರಂತೆ. ಮಹಿಳೆಯರಿಗೆ ಹೋಲಿಸಿದರೆ ಪುರುಷ ಸೋಂಕಿತರು ಹೆಚ್ಚಾಗಿ ಕೊರೋನಾಗೆ ಬಲಿಯಾಗಿದ್ದಾರಂತೆ.
ಸೋಂಕಿಗೆ ತುತ್ತಾಗಿಯೂ ಮಹಿಳೆಯರು ಚೇತರಿಸಿಕೊಂಡಿದ್ದಾರೆ. ಆದರೆ ಸೋಂಕಿಗೆ ತುತ್ತಾದ ಹೆಚ್ಚಿನ ಸಂಖ್ಯೆ ಪುರುಷರು ಮೃತಪಟ್ಟಿದ್ದಾರೆ. ಇದಕ್ಕೆ ಟೆಸ್ಟೋಸ್ಟೆರಾನ್ (testosterone) ಹಾರ್ಮೋನ್ ಕಾರಣವಿರಬಹುದು ಎಂದು ಅಧ್ಯಯನದಲ್ಲಿ ಶಂಕಿಸಲಾಗಿದೆ. ಡೆಡ್ಲಿ ವೈರಸ್ನಿಂದ ದೇಹದ ಯಾವುದೇ ಹಾರ್ಮೋನ್ ಮೇಲೆ ಪರಿಣಾಮ ಆಗದಿದ್ದರೂ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಇದನ್ನೂ ಓದಿ: ದಾಂಪತ್ಯದ ರಸಘಳಿಗೆಗೆ ಮತ್ತಷ್ಟು ಜೀವ ತುಂಬುತ್ತದೆ ಕೊಹಿನೂರ್ ಪಾನ್.. ಆದರೆ ಒಂದು ಕಂಡೀಷನ್!
ದೆಹಲಿಯ ಭರ್ನೇಶ್ ಜುವೀಷ್ ಆಸ್ಪತ್ರೆಯ 90 ಪುರುಷ ಸೋಂಕಿತರು, 62 ಮಹಿಳಾ ಸೋಂಕಿತರಿಂದ ಸ್ಯಾಂಪಲ್ಗಳನ್ನು ಪಡೆದು ಅಧ್ಯಯನ ಮಾಡಲಾಗಿದೆ. ಮಹಿಳಾ ಸೋಂಕಿತರ ಹಾಮೋರ್ನ್ನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ಪುರುಷರ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹಾರ್ಮೋನ್ ವ್ಯತ್ಯಾಸದಿಂದಲೇ ಹೆಚ್ಚಿನ ಪುರುಷ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೊರೊನಾ ಸೋಂಕು ಪುರುಷರ ಹಾರ್ಮೋನ್ ಮೇಲೆ ಪರಿಣಾಮ ಬೀರಿದೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
ಇನ್ನು ವೈದ್ಯಕೀಯ ಲೋಕದ ಹಲವು ಸಂಶೋಧನೆಗಳೂ ಮಹಿಳೆಯರಲ್ಲಿ ರೋಗಗಳನ್ನು ಸಹಿಸುವ ಶಕ್ತಿ ಹೆಚ್ಚಿರುತ್ತದೆ ಅಂತಲೇ ಹೇಳುತ್ತವೆ. ಬೇರೆ ಕಾಯಿಲೆಗಳ ಅಧ್ಯಯನದಲ್ಲೂ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಕಾಯಿಲೆಗಳಿಂದ ಗುಣಮುಖರಾಗುವ ಸಾಮರ್ಥ್ಯವಿರುತ್ತದೆ ಎಂದೇ ಸಾಬೀತಾಗಿದೆ. ಜೊತೆಗೆ ಅವಧಿ ಪೂರ್ವ ಮಕ್ಕಳು ಹುಟ್ಟಿದ್ದರೆ ಶಿಶು ಗಂಡಾದರೆ ಬದುಕುವ ಸಾಧ್ಯತೆಗಳು ಕಡಿಮೆ. ಆದರೆ ಅವಧಿ ಪೂರ್ವ ಜನಿಸಿದ ಹೆಣ್ಣು ಶಿಶು ಬದುಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಷ್ಟಿಲ್ಲದೇ ಹೇಳುತ್ತಾರಾ ಹೆಣ್ಣು ಎಲ್ಲವನ್ನೂ ಹೆದರಿಸುವ ಧೈರ್ಯ, ಸಾಮರ್ಥ್ಯವುಳ್ಳವಳು ಅಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ