HOME » NEWS » Coronavirus-latest-news » COMMUNITY FEAR AROUND FOR A CHANCE RH

ಭಾಗ 2 | ಎಚ್ಚರ! ಸಮೂಹ ಸನ್ನಿ ಅವಕಾಶಕ್ಕಾಗಿ ಸುತ್ತಾಡುತ್ತಿರಬಹುದು…!

ಆ ಹಳ್ಳಿಯ ಆರೋಗ್ಯವಂತ ಹೆಣ್ಣು ಮಕ್ಕಳಿಬ್ಬರು ಒಂದು ದಿನ ಇದ್ದಕ್ಕಿದ್ದಂತೆ ಅಪಸ್ಮಾರ (ಫಿಟ್ಸ್)ದ ಲಕ್ಷಣಗಳು ಎನ್ನುವ ರೀತಿಯಲ್ಲಿ ಮೈಕೈ ಬಿಗಿತ-ಸೆಳೆತದೊಂದಿಗೆ ಚೀರಾಡುತ್ತಾ ಸಂಕಟ ಪಡುತ್ತಿದ್ದದ್ದು ಕಂಡುಬಂತು. ಗ್ರಾಮದ ಜನ ತಿಳಿದಿದ್ದೆಲ್ಲ ಚಿಕಿತ್ಸೆಗಳನ್ನೂ ಪ್ರಯತ್ನಿಸಿದರಾದರೂ ಹೆಣ್ಣುಮಕ್ಕಳ ಶರೀರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಂಪನಗಳು ಇಳಿಯಲಿಲ್ಲ, ಬದಲಾಗಲಿಲ್ಲ.

news18-kannada
Updated:April 28, 2020, 9:16 AM IST
ಭಾಗ 2 | ಎಚ್ಚರ! ಸಮೂಹ ಸನ್ನಿ ಅವಕಾಶಕ್ಕಾಗಿ ಸುತ್ತಾಡುತ್ತಿರಬಹುದು…!
ಡಾ. ಅ.ಶ್ರೀಧರ.
  • Share this:
ಇವತ್ತಿನ ಸನ್ನಿವೇಶದಲ್ಲಿ ಕೋವಿಡ್-19 ಇಡೀ ವಿಶ್ವವನ್ನೇ ಆವರಿಸಿದೆ ಎನ್ನುವ ಮಾತು, ವಿವರಣೆಗಳು ದಿನದುದ್ದಕ್ಕೂ ದೃಶ್ಯಾವಳಿ, ವಿಧವಿಧವಾದ ವರ್ಣರಂಜಿತ ಅಂಕಿ-ಅಂಶಗಳು ತುಂಬಿರುವ ನಕ್ಷೆಗಳ ಸಹಿತವಾಗಿ ಜನಗಮನ ಸೆಳೆಯುತ್ತಿದೆ.

ಸೆಳೆತಕ್ಕೆ ಪ್ರಮುಖ ಕಾರಣ ರೋಗದ ಬಗ್ಗೆ ಹರಡುತ್ತಿರುವ ಮಾಹಿತಿಗಳು ಎನ್ನುವುದಕ್ಕಿಂತಲೂ ರೋಗ ನಿರ್ವಹಣೆಯ ಪ್ರಯತ್ನದಲ್ಲಿ ಜಾರಿಯಾಗುತ್ತಿರುವ ನಿಯಮ, ಕಾನೂನು ಮತ್ತು ಸರಕಾರಗಳು ಅನುಸರಿಸುತ್ತಿರುವ ಬಲಪ್ರಯೋಗದ ವಿಧಾನಗಳು. ಪ್ರಜೆಗಳಿಂದಲೇ ಆಯ್ಕೆಯಾದ ಪ್ರಭುಗಳು ಪ್ರದರ್ಶಿಸುತ್ತಿರುವ ಭಾವಭರಿತ ದರ್ಪ, ಅರೆಬೆಂದ ಆಲೋಚನೆಗಳು, ಮತ್ತು ಜನರ ಸಂಕಷ್ವಕ್ಕೆ ನೇರವಾಗಿ ಸ್ಪಂದಿಸಲಾಗದೆ ತೆರೆಮರೆಯಲ್ಲಿ ಅವಿತು ಮಾಡುತ್ತಿರುವ ಘೋಷಣೆಗಳು ಆಳುವವರಲ್ಲಿಯೂ ಮನೋದೌರ್ಬಲತೆ ಕಾಡಿಸುತ್ತಿದೆ ಎಂದೆನಿಸುತ್ತದೆ.

ಸಂದಿಗ್ಧ ಪರಿಸ್ಥಿತಿಗೆ ಸಮಯೋಚಿತವಾದ ಪರಿಹಾರಗಳನ್ನು ಕುಂಡುಕೊಳ್ಳಲಾಗದೇ ಸಮೂಹ ಸನ್ನಿಯ ವಾತಾವರಣದ ಸೃಷ್ಟಿಗೂ ಇದೇ ಸಕಾರಣ . ಈ ಸಮಯದಲ್ಲಿ ಜನತೆಯ ಬವಣೆಗಳು ಎಂತಹದ್ದು, ಹೇಗಾಯಿತು, ತಮ್ಮ ಮಟ್ಟಿಗೆ ಉಪಯುಕ್ತ ಪರಿಹಾರ ಯಾವುದಿರಬೇಕು ಎನ್ನುವುದನ್ನು ಆಲೋಚಿಸುವುದಕ್ಕೂ ಸಾಧ್ಯವಾಗಿರದಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಒಬ್ಬರಿಂದೊಬ್ಬರಿಗೆ ವ್ಯಾಧಿ ಹರಡುವುದಕ್ಕೂ ಮುಂಚಿತವಾಗಿಯೇ ಸಾಮೂಹಿಕ ಅಸಹಾಯಕತೆ ಮತ್ತು ಭೀತಿಯು ಸೋಂಕಿಗಿಂತಲೂ ತೀವ್ರವಾಗಿ ವ್ಯಾಪಿಸುತ್ತಿದ್ದು, ತೀವ್ರ ಸಮೂಹ ಸನ್ನಿ ಎನ್ನುವಂತಹ ಸಮುದಾಯದ ಮಾನಸಿಕತೆ ಕಾಣಿಸಿಕೊಳ್ಳುತ್ತಿದೆ. ಕೆಲವರಲ್ಲಿದು ಸಾಮಾನ್ಯ ಸ್ವರೂಪದ ಆತಂಕ, ತಲ್ಲಣದ ಸ್ಥಿತಿಯಂತಿದ್ದು ದಿನದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಆಲೋಚಿಸುವ ಸಾಮರ್ಥ್ಯವನ್ನೇ ಕಸಿದುಕೊಂಡಿರುವಂತಹ ಅನುಭವವಾಗುತ್ತಿರುತ್ತದೆ. ಇದರಿಂದ ಪಾರಾಗುವ ಪ್ರಯತ್ನಗಳಲ್ಲಿ ಮನಸನ್ನು ಬೇರೊಂದು ವಿಷಯದ ಕಡೆ ಹರಿಯುವಂತೆ ಪ್ರಯತ್ನಿಸಿದಾಗ ಎದುರಾಗುವ ವಿಷಯಗಳೂ ಕೂಡ-ಜನರಿಂದ ತುಂಬಿರುತ್ತಿದ್ದ ರಸ್ತೆಗಳು ಬೀಕೋ ಎನ್ನುವುದೇ- ಮೊದಲು ಮನಸಿಗೆ ಬಂದುಬಿಡುವುದು.

ಇನ್ನು ಒಂಟಿಯಾಗಿದ್ದು ವಯಸ್ಕತನದ ಆರಂಭದಲ್ಲಿದ್ದರಂತೂ ಒಂದೇ ಜಾಗದಲ್ಲಿ ಕುಳಿತು ಪದೇ ಪದೇ ಅದೇ ಕೆಲಸ ಮಾಡುತ್ತಿರುವಾಗ ಬರುವ ಭಾವನೆಗಳು ಆಸಕ್ತಿ ಕುಗ್ಗಿಸುವಂತಹದ್ದೇ ಆಗಿರುವುದು. ಇದರ ಜೊತೆಯಲ್ಲಿ ಮೇಲಧಿಕಾರಿಯಿಂದ ಇಲ್ಲಸಲ್ಲದ ಆದೇಶ, ಆವೇಗ ಭರಿತ ಸಲಹೆಗಳಿದ್ದರಂತೂ ಕೆಲಸ ಮಾಡಲೇಬೇಕೆಂಬ ಛಲದ ಪ್ರಯತ್ನಗಳೂ ಬತ್ತಿ ಹೋಗುತ್ತವೆ. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿಯಾದರೂ ಎದುರುತ್ತರ ಕೊಡುವ ಮನಸ್ಸಿದ್ದರೂ ಭವಿಷ್ಯದ ಮುನೋಟವು ಹಿಂಜರಿತವನ್ನೇ ಉತ್ತೇಜಿಸುವುದು. ಈ ಮಾದರಿಯ ಹೊಂದಾಣಿಕೆಯ ಪ್ರಯತ್ನಗಳು ಎಷ್ಟು ದಿನಗಳ ತನಕ ತಾನೆ ಮುಂದುವರೆಯಲು ಸಾಧ್ಯ? ಅಸಾಧ್ಯವೆನ್ನುವುದರ ಅರಿವು ಹೆಚ್ಚಾಗುತ್ತಿರುವಂತೆಯೇ ಇತರರಿಗೂ ಆತಂಕವನ್ನು ಹಚ್ಚುವಂತಹ ಮಾನಸಿಕತೆ ಪ್ರಬಲಗೊಳ್ಳುವುದು. ಈ ಸ್ಥಿತಿಯನ್ನೇ ಸಮೂಹ ಸನ್ನಿ ಅಥವಾ ಮಾಸ್ ಹಿಸ್ಟೀರಿಯಾ ಎನ್ನುವ ಜನಬಳಕೆಯ ಮಾತಿನ ಮೂಲಕ ಕರೆಯುವುದು.

ನನಗೆ ತಿಳಿದ ಅನೇಕರು, ಸಾಮಾನ್ಯವಾಗಿ ಕಣ್ಣೀರಿಡದವರು, ಕೋವಿಡ್-19ರ ಸಮಯದಲ್ಲಿ ವಿನಾ ಕಾರಣ ಪದೇ ಪದೇ ಕಣ್ಣೀರಿಡುವುದಾಗಿ ತಿಳಿಸಿದ್ದಾರೆ. ಬಾಯಿಗೆ ಬಟ್ಟೆ ಕಟ್ಟಿಕೊಂಡು, ಭಾವಗಳೂ ಹೊರಹರಿಯದಂತೆ ಮುಚ್ಚಿಟ್ಟುಕೊಂಡು ಕಳೆಯಬೇಕಾಗಿರುವಾಗ ಕ್ಷಣಗಳೂ ಮುಂಚಲಿಸದೆಯೇ ನಿಂತಿರುವ ಹಾಗೆನಿಸುತ್ತದೆ. ಅದೆಷ್ಟು ಸಲ ಕೈಗಡಿಯಾರ ನೋಡಿಕೊಂಡರೂ ಗೋಚರಿಸುವುದು ನಿಂತಲ್ಲಿಯೇ ನಿಂತ ಗಡಿದಾಟದ ಮುಳ್ಳುಗಳು. ಮನುಷ್ಯ ಕಷ್ಟಕ್ಕೆ ಸಿಕ್ಕಿಕೊಂಡಾಗಲೆಲ್ಲಾ ಆತ್ಮೀಯರು ವ್ಯಕ್ತಪಡಿಸುವ ಮೊದಲ ವರ್ತನೆ ಎಂದರೆ ಬೆನ್ನು ತಟ್ಟುವುದು, ಕೈಕುಲಕುವುದು ಅಥವಾ ಬಳಿಯಲ್ಲಿ ಕುಳಿತು ಸಾಂತ್ವನ ಹೇಳುವುದು. ಈಗಂತೂ ಇವೆಲ್ಲಕ್ಕೂ ನಿಷೇಧ. ಹೀಗಾಗಿ ನಡೆನುಡಿಗಳೆಲ್ಲವೂ ಕ್ಷಣದಲ್ಲಿ ಬದಲಾವಣೆಗೆ ಒಳಗಾಗುತ್ತಿರುವುದು ಸಹ ಮನೋಬಲಗಳನ್ನು ಕುಗ್ಗಿಸುವಂತಹದ್ದೇ ಆಗಿರುವುದು.

ಈ ಸನ್ನಿವೇಶದಲ್ಲಿ ಪರಾವಲಂಬನೆ, ಅತಿಯಾದ ಅಪನಂಬಿಕೆಯ ವರ್ತನೆಗಳು ಹೆಚ್ಚಾಗಿದ್ದು ತಳಮಳ, ಮಾನಸಿಕ ಅಸಮತೋಲನದ ಸ್ಥಿತಿಗೆ ಕಾರಣವಾಗುತ್ತದೆ. ಹೀಗೆ ಬಹುಸಂಖ್ಯೆಯ ಜನರಲ್ಲಿ ಕಾಣಿಸಿಕೊಂಡಾಗ ಅದನ್ನು ಸಮೂಹ ಸನ್ನಿ ಹಿಡಿತತದ ಸೂಚನೆ ಎನ್ನಲಾಗುತ್ತದೆ. ಸಮೂಹ ಸನ್ನಿ ಎನ್ನುವ ಮಾನಸಿಕತೆಯು ನಿನ್ನೆ ಮೊನ್ನೆಯ ಬೆಳವಣಿಗೇನು ಅಲ್ಲ ಎನ್ನುವುಕ್ಕೆ ನಿದರ್ಶನಗಳು ಹೇರಳ.

ಸಮೂಹ ಸನ್ನಿಯನ್ನು ಹೋಲುವ ಅತ್ಯಂತ ಹಳೆಯ ಪ್ರಕರಣವೊಂದೆಂದರೆ 1692 ರಲ್ಲಿ ಅಮೆರಿಕದ ಮ್ಯಸಚ್ಯುಸೆಟ್ಸ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ನಡೆದ ಪ್ರಕರಣ: ಆ ಹಳ್ಳಿಯ ಆರೋಗ್ಯವಂತ ಹೆಣ್ಣು ಮಕ್ಕಳಿಬ್ಬರು ಒಂದು ದಿನ ಇದ್ದಕ್ಕಿದ್ದಂತೆ ಅಪಸ್ಮಾರ (ಫಿಟ್ಸ್)ದ ಲಕ್ಷಣಗಳು ಎನ್ನುವ ರೀತಿಯಲ್ಲಿ ಮೈಕೈ ಬಿಗಿತ-ಸೆಳೆತದೊಂದಿಗೆ ಚೀರಾಡುತ್ತಾ ಸಂಕಟ ಪಡುತ್ತಿದ್ದದ್ದು ಕಂಡುಬಂತು. ಗ್ರಾಮದ ಜನ ತಿಳಿದಿದ್ದೆಲ್ಲ ಚಿಕಿತ್ಸೆಗಳನ್ನೂ ಪ್ರಯತ್ನಿಸಿದರಾದರೂ ಹೆಣ್ಣುಮಕ್ಕಳ ಶರೀರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಂಪನಗಳು ಇಳಿಯಲಿಲ್ಲ, ಬದಲಾಗಲಿಲ್ಲ. ಕೊನೆಗೆ ಗ್ರಾಮದ ಧಾರ್ಮಿಕ ಮುಖಂಡರನ್ನು ಸಲಹೆ ಕೇಳಲಾಯಿತು. ಹುಡುಗಿಯರ ಈ ಸ್ಥಿತಿಗೆ ಮಾಟಗಾರಿಕೆಯೇ ಕಾರಣವೆಂದು ತಿಳಿಸುತ್ತಿದ್ದಂತೆಯೇ ಅದೇ ಗ್ರಾಮದ ಮಹಿಳೆಯಿರಿಬ್ಬರು ಮಾಟಗಾತಿಯೆಂದು ಗುರುತಿಸಿ ಶಿಕ್ಷೆಗೂ ಒಳಪಡಿಸಲಾಯಿತು. ಆದರೇ ಪರಿಸ್ಥಿತಿ ಸುಧಾರಿಸುವ ಬದಲು ಗ್ರಾಮದ ಮತ್ತಷ್ಟು ಹೆಣ್ಣು ಮಕ್ಕಳಲ್ಲಿ ಅಪಸ್ಮಾರದ ಸೆಳೆತದ ಲಕ್ಷಣಗಳು ಕಾಣಿಸಿಕೊಂಡವು. ಕ್ರಮೇಣ ಇದು ಗ್ರಾಮದ ಇನ್ನೂ ಅನೇಕರಲ್ಲಿ ಕಾಣಿಸಿಕೊಂಡಿತು. ಹಾಗೆಯೇ ಮಾಟಗಾತಿಯರ ಸಂಖ್ಯೆ ಕೂಡ ಏರುತ್ತಾ ಹೋಗಿ ನೂರಾರು ಅಮಾಯಕ ಮಹಿಳೆಯರನ್ನು ಮಾಟಗಾತಿಯರೆಂದು ಗುರುತಿಸಿ ಅವರಲ್ಲನೇಕರನ್ನು ನೇಣುಕಂಬಕ್ಕೇರಿಸಲಾಯಿತು. ಕೇವಲ ಎರಡು ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಂಡ ಲಕ್ಷಣಗಳು ಇಡೀ ಸಮುದಾಯದ ಮನಸ್ಸನ್ನು ಆವರಿಸಿ ಹತ್ತಾರು ಅಮಾಯಕ ಮಹಿಳೆಯರ ಪ್ರಾಣವನ್ನೇ ಕಸಿದುಕೊಂಡಿದ್ದು ಸಾಮೂಹಿಕ ಭೀತಿ ಮತ್ತು ಅಪನಂಬಿಕೆಗಳ ಪ್ರಭಾವದಿಂದ ಅಥವಾ ಸಮೂಹ ಸನ್ನಿಗೆ ಒಳಗಾದಾಗ.ಇಂದು ಕೊವಿಡ್-19 ಹುಟ್ಟಿಸಿರುವ ಲಕ್ಷಣಗಳು ಹಲವಾರು ರೀತಿಯಲ್ಲಿ ಮೇಲಿನ ಪ್ರಕರಣದ ಮುನ್ಸೂಚನೆ ಎನ್ನುವ ಹಾಗೆ ತೋರ್ಬರುತ್ತಿರುವಂತೆ ಕಾಣಿಸಿಕೊಳ್ಳುತ್ತಿದೆ. ಈ ದೇಶದ ಬಹುದೊಡ್ಡ ಸಂಖ್ಯೆಯ ಜನರು ಈ ಸ್ಥಿತಿಗೆ ಈಗಾಗಲೇ ಒಳಗಾಗಿರಬಹುದಾದ ಸೂಚನೆಗಳೆಂದರೆ: ರೋಗ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವವರ ಮೇಲೆ ನಡೆಯುತ್ತಿರುವ ಹಲ್ಲೆಗಳು; ರೋಗದ ಕಾರಣದಿಂದ ಮೃತರಾದವರಿಗೆ ಅಂತ್ಯಸಂಸ್ಕಾರ ಮಾಡದಿರುವುದು ಮತ್ತು ಮಾಡಲು ಬಿಡದಿರುವುದು; ಮುಗ್ಧ ಮಕ್ಕಳ ಮನಸ್ಸಿನಲ್ಲಿ ರೋಗದ ಕಾರಣದಿಂದ ಅಂತರ ಕಾಪಾಡಿಕೊಳ್ಳುವ ರೋಗ ನಿಯಂತ್ರಣಾ ನಿಯಮವನ್ನು ಜಾತಿ, ಅಂತಸ್ತುಗಳಿಗೆ ಹತ್ತಿರವಾದ ಪೂರ್ವಗ್ರಹ ಮತ್ತು ರೂಢಿಗತ ವರ್ತನೆಗಳಿಂದ ನೋಡುವುದನ್ನು ಉತ್ತೇಜಿಸುತ್ತಿರುವುದು; ಭಾವುಕತನವನ್ನು ಹೆಚ್ಚಿಸುವಂತಹ ಸರ್ಕಾರದ ಮಾಹಿತಿಗಳು; ಕ್ಷಣಕ್ಷಣಕ್ಕೂ ಹೊರಬರುತ್ತಿರುವ ರೋಗಕ್ಕೆ ಸಂಬಂಧಿಸಿದ ಅಂಕಿಅಂಶಗಳು; ಮತ್ತು ಜನರ ಚಲನವಲನಗಳನ್ನು ತಡೆಯಲು ಹಿಂಸೆ, ಶಿಕ್ಷೆಯನ್ನು ಅನುಸರಿಸುತ್ತಿರುವುದು; ದಿಢೀರನೆ ನಿರ್ಬಂಧಗಳನ್ನು ಹೇರುವುದರ ಪರಿಣಾಮದಿಂದಾಗಿ ಅತಿ ಕೊಳ್ಳುವಿಕೆ, ಭೀತಿಯಿಂದ ದಿನನಿತ್ಯದ ವಸ್ತುಗಳನ್ನು ಅನಗತ್ಯ ಪ್ರಮಾಣದಲ್ಲಿ ಸಂಗ್ರಹಿಸಿಡುವುದು; ಮತ್ತು ಸಾಮಾನ್ಯ ರೀತಿಯ ದೈಹಿಕ ಮುಜುಗರಗಳನ್ನು ರೋಗದ ಮುನ್ಸೂಚನೆ ಎನ್ನುವಂತಹ ಭ್ರಮೆಯ ವರ್ತನೆಗಳು ಸಾಮಾನ್ಯ.

ಸಮೂಹ ಸನ್ನಿಗೆ ಅತಿ ಪ್ರಶಸ್ತವಾಗುವಂತಹ ಸ್ಥಿತಿಗಳ ನಿರ್ಮಾಣದಲ್ಲಿ ಸರ್ಕಾರಗಳ ಪಾತ್ರವೂ ಇರಬಲ್ಲದು. ಸುಳ್ಳು ಸುದ್ಧಿ, ತಪ್ಪು ಮಾಹಿತಿಗಳು ಮತ್ತು ಅಂಧಾಚರಣೆಗಳೇ ಸಾಮೂಹಿಕ ಸನ್ನಿಯ ಪೌಷ್ಠಿಕಾಂಶ. ಜನ ಮಾನಸಿಕ ಬಲ, ಸದೃಢ ನಿಲುವುಗಳನ್ನು ಹೆಚ್ಚಿಸಬಲ್ಲ ಶಕ್ತಿ ಸರಕಾರಗಳಲ್ಲಿ ತುಂಬಿರುವಷ್ಟು ಮಿಕ್ಕಿತರರಲ್ಲಿ ಇರಲಾರದು. ಆರೋಗ್ಯವಂತರಲ್ಲಿಯೂ ಸೋಂಕು ರೋಗದ ಆತಂಕ, ಅಜ್ಞಾನವನ್ನು ಬಲಪಡಿಸಬಲ್ಲಂತಹ ಗುಣ ಈ ಸಮಯದಲ್ಲಿ ಕೆಲವು ಮುಂದಾಳುಗಳಲ್ಲಿ ಉಕ್ಕಿ ಬರುತ್ತಿರುತ್ತದೆ. ಇಂತಹದೊಂದು ಅನಿವಾರ್ಯದ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸುವುದು, ಅತಿ ಸೂಕ್ಷ್ಮವಿಷಯಗಳನ್ನು ತಜ್ಞರ ಸಮಾಲೋಚನೆಗೆ ವಹಿಸುವುದು, ಮತ್ತು ಜನಮನವನ್ನು ತಲುಪುವಂತಹ ಪ್ರಚಾರದ ಕಾರ್ಯಗಳಲ್ಲಿ ಪ್ರತಿಯೊಂದು ವರ್ಗದ ಸಾರ್ವಜನಿಕರನ್ನು ಭಾಗಿಯಾಗಿಸುವುದರ ಮೂಲಕ ಸಮುದಾಯದ ಆರೋಗ್ಯದ ಅರಿವು, ಅಂತಃಶಕ್ತಿಯನ್ನು ಹೆಚ್ಚಿಸಲು ಸಾಧ್ಯ.

ಇದನ್ನು ಓದಿ: ಭಾಗ-1 | ಈ ಮನೋವೈಜ್ಞಾನಿಕ ಸಂಗತಿಗಳು ನಿಮ್ಮ ಮನೋಶಕ್ತಿಯಲ್ಲಿ ಬದಲಾವಣೆಗಳನ್ನು ತರಬಲ್ಲದು

ಕೊವಿಡ್-19ನಷ್ಟೇ ಭಯಂಕರ ಸ್ವರೂಪವನ್ನು ಸಮೂಹ ಸನ್ನಿಯೂ ಹೊರತರಬಲ್ಲದ್ದಾಗಿದ್ದು ಇದರ ದುಷ್ಪರಿಣಾಮಗಳು ನಿಯಂತ್ರಿಸಲಾಗದ ಸಾಮಾಜಿಕ ವೈಷಮ್ಯ, ಅಸಹಕಾರ ಮತ್ತು ಆಕ್ರೋಶದ ವರ್ತನೆಗಳನ್ನು ಕ್ರಮೇಣ ಹೊರತರಬಲ್ಲದು. ವೈರಾಣುಗಳು ಜನಿಸುವುದೇ ಹರಡುವುದಕ್ಕಾಗಿ, ಆದರೇ ಸಮೂಹ ಸನ್ನಿಯು ಜನಿಸುವುದು ಅತಿ ಆತಂಕ, ಅತಿಭೀತಿಯ ಸನ್ನಿವೇಶಗಳಿಂದ ಎನ್ನುವುದನ್ನು ನೆನಪಿನಲ್ಲಿರಿ ಇಸಿಕೊಂಡಷ್ಟೂ ಉತ್ತಮ ಅನಿಸುವುದಿಲ್ಲವೆ?

ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.bruhanmati.com/
Youtube Video

 
First published: April 28, 2020, 9:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories