ನವದೆಹಲಿ(ಜೂನ್ 26): ಕೋವಿಡ್-19 ವಕ್ಕರಿಸಿದ್ದೇ ವಕ್ಕರಿಸಿದ್ದು ವೈರಸ್ ಹೊಸ ಹೊಸ ರೂಪಾಂತರ ಹೊಂದಿ ಜನರನ್ನು ಹೈರಾಣಗೊಳಿಸುತ್ತಲೇ ಇದೆ. ಮೊದಲೆರಡು ಅಲೆಯಿಂದ ಜರ್ಝರಿತಗೊಂಡ ಜನರಿಗೆ ಈಗ ಡೆಲ್ಟಾ, ಡೆಲ್ಟಾ ಪ್ಲಸ್ ಎಂಬ ಹೊಸ ರೂಪಾಂತರಿ ವೈರಸ್ಗಳ ಅಪಾಯ ಎದುರಾಗಿದೆ. ಈಗ ಸಿದ್ಧಗೊಂಡು ಹಾಕಲಾಗುತ್ತಿರುವ ಲಸಿಕೆಗಳ ಹೊಸ ರೂಪಾಂತರಿ ಕೋವಿಡ್ ವೈರಸ್ಗಳೆದುರು ಪರಿಣಾಮಕಾರಿ ಅಲ್ಲ ಎಂಬ ಭಯ, ಆತಂಕ, ಸಂದೇಹಗಳು ಶುರುವಾಗಿವೆ. ಇದೆಲ್ಲದರ ಮಧ್ಯೆ ಏಮ್ಸ್ ನಿರ್ದೇಶಕರು ತುಸು ನಿಟ್ಟುಸಿರು ಬಿಡುವಂಥ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಎರಡು ವಿಭಿನ್ನ ಕೋವಿಡ್ ಲಸಿಕೆಗಳನ್ನ ಹಾಕಿಸಿಕೊಂಡರೆ ಕೋವಿಡ್ ವಿರುದ್ಧ ಹೆಚ್ಚು ಪರಿಣಾಮಕಾರಿ ಆಗಿರುವ ಸಾಧ್ಯತೆ ಇದೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಸಂದೇಹಿಸಿದ್ದಾರೆ. ಆದರೆ, ಈ ವಿಚಾರದ ಬಗ್ಗೆ ಇನ್ನಷ್ಟು ಆಧಾರ, ಸಾಕ್ಷ್ಯಗಳು ಬೇಕಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
“ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ನಂತಹ ಅಪಾಯಕಾರಿ ತಳಿಗಳ ವಿರುದ್ಧ ಹೋರಾಡಲು ಎರಡು ಬೇರೆ ಬೇರೆ ಕೋವಿಡ್-19 ವ್ಯಾಕ್ಸಿನ್ಗಳನ್ನ ಮಿಶ್ರ ಮಾಡುವುದರಿಂದ ಸಾಧ್ಯವಾಗಬಹುದು. ಆದರೆ, ಈ ಬಗ್ಗೆ ಇನ್ನಷ್ಟು ಅಧ್ಯಯನ, ಆಧಾರಗಳು ಸಿಕ್ಕರೆ ಎರಡು ವ್ಯಾಕ್ಸಿನ್ಗಳ ಸಂಯೋಗಕ್ಕೆ ಅಂತಿಮ ಒಪ್ಪಿಗೆ ನೀಡಲು ಸಾಧ್ಯ” ಎಂದು ಡಾ. ಗುಲೇರಿಯಾ ತಿಳಿಸಿದರೆಂದು ಎನ್ಡಿಟಿವಿ ವಾಹಿನಿ ವರದಿ ಮಾಡಿದೆ.
ಇದನ್ನೂ ಓದಿ: ದಾಖಲೆ ವೇಗದಲ್ಲಿ ಕೋವಿಡ್ ಲಸಿಕಾ ಅಭಿಯಾನ; ಒಂದೇ ವಾರದಲ್ಲಿ 4 ಕೋಟಿ ಡೋಸ್
“ಎರಡು ವಿಭಿನ್ನ ಕೋವಿಡ್ ಲಸಿಕೆಗಳನ್ನ ಬೆರೆಸುವುದರಿಂದ ಕೋವಿಡ್-19 ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಬಹುದು ಎಂಬ ಅಂಶವು ಹಿಂದಿನ ಕೆಲ ಅಧ್ಯಯನಗಳಿಂದ ಗೊತ್ತಾಗಿದೆ. ಆದರೆ, ಯಾವ ಎರಡು ಮಾದರಿಯ ವ್ಯಾಕ್ಸಿನ್ಗಳನ್ನ ಜೋಡಿಸಿದರೆ ಹೆಚ್ಚು ಪರಿಣಾಮಕಾರಿ ಎಂಬುದನ್ನ ಅವಲೋಕಿಸಲು ಅಧ್ಯಯನ ಆಗಬೇಕಿದೆ. ಆದರೆ, ಬೇರೆ ಬೇರೆ ಲಸಿಕೆಗಳ ಸಂಯೋಗದಿಂದ ಲಸಿಕೆ ಹೆಚ್ಚು ಪರಿಣಾಮಕಾರಿ ಆಗುತ್ತದೆಂಬುದು ಖಚಿತವೇ” ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೂಡ ಲಸಿಕೆ ಸಂಯೋಗದ ಬಗ್ಗೆ ಆಲೋಚನೆಯಲ್ಲಿದೆ. ವಿಭಿನ್ನ ಕೋವಿಡ್-19 ಲಸಿಕೆಗಳ ಸಂಯೋಗಗಳ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್, ಫೈಜರ್ ಇತ್ಯಾದಿ ಲಸಿಕೆಗಳನ್ನ ಯಾವ್ಯಾವ ಸಂಯೋಗಗಳು ಕೋವಿಡ್ ರೂಪಾಂತರಿ ವೈರಸ್ಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂಬುದರ ಅಧ್ಯಯನ ಈಗ ನಡೆಯಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ