Mamata Banerjee: ಪ್ರಧಾನಿ ಮೋದಿ ಕೋವಿಡ್​ ಸಭೆಯಲ್ಲಿ ಸಿಎಂಗಳೇನು ಗೊಂಬೆಗಳೇ?; ಕೇಂದ್ರದ ವಿರುದ್ದ ಮಮತಾ ಬ್ಯಾನರ್ಜಿ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರ ಕೋವಿಡ್-19 ಸಭೆ ಮುಗಿದ ಕೆಲವೇ ನಿಮಿಷಗಳಲ್ಲಿ ಇದೊಂದು ಫ್ಲಾಫ್​ ಮೀಟಿಂಗ್ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

 • Share this:
  ಕೋಲ್ಕತ್ತಾ (ಮೇ 20): ದೇಶದಲ್ಲಿ ಕೊರೋನಾ ವೈರಸ್​ ಸ್ಥಿತಿಗತಿ ಮತ್ತು ಅದನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಸೋಂಕು ಅಧಿಕವಾಗಿರುವ ಪ್ರಮುಖ 10 ರಾಜ್ಯಗಳ ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಹ ಪಾಲ್ಗೊಂಡಿದ್ದರು. ಆದರೆ, ಈ ಸಭೆಯ ನಂತರ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಮತಾ ಬ್ಯಾನರ್ಜಿ, "ಪ್ರಧಾನಿ ಮೋದಿ ಅವರ ಕೋವಿಡ್​ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶವನ್ನೇ ನೀಡಿಲ್ಲ. ಸಭೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ನಡೆಸಿದ ಸಂವಾದವನ್ನು ನೋಡಲು ನಾವೇನು ಅವರ ಕೈಗೊಂಬೆಗಳೇ?" ಎಂದು ಅವರು ಕಿಡಿಕಾರಿದ್ದಾರೆ.

  ಈ ಬಗ್ಗೆ ಕೇಂದ್ರದ ವಿರುದ್ಧ ಕಿಡಿಕಾರಿರುವ ಮಮತಾ ಬ್ಯಾನರ್ಜಿ, "ಎಲ್ಲಾ ರಾಜ್ಯಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಆದರೆ ಕೊರೋನಾ ಸಭೆಯಲ್ಲಿ ಪ್ರಧಾನಿ ಮೋದಿ ನಮ್ಮನ್ನು ಔಷಧಿ, ಲಸಿಕೆ, ರೆನ್​ಡಿಸಿವಿರ್​, ಆಮ್ಲಜನಕದ ಪರಿಸ್ಥಿತಿ ಮತ್ತು ಅಗತ್ಯಗಳ ಬಗ್ಗೆ ಕೇಳಲಿಲ್ಲ. ಎಲ್ಲಾ ರಾಜ್ಯಗಳ ಸಿಎಂಗಳನ್ನೂ ವಿಡಿಯೋ ಕಾನ್ಫರೆನ್ಸ್​ ಸಭೆಗೆ ಅಧಿಕೃತವಾಗಿ ಆಹ್ವಾನಿಸಲಾಗಿತ್ತಾದರೂ, ಯಾರಿಗೂ ಮಾತನಾಡಲು ಅವಕಾಶವನ್ನೇ ನೀಡಿಲ್ಲ. ಈ ಸಭೆಯಲ್ಲಿ ನಾವು ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೂ ಅವಮಾನವನ್ನು ಸಂದಿಸಿದ್ದೇವೆ" ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರ ಸಭೆ ಮುಗಿದ ಕೆಲವೇ ನಿಮಿಷಗಳಲ್ಲಿ ಇದೊಂದು "ಫ್ಲಾಫ್​ ಮೀಟಿಂಗ್" ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

  ಮಾತಿನ ದಾಳಿಯನ್ನು ಮುಂದುವರೆಸಿರುವ ಮಮತಾ ಬ್ಯಾನರ್ಜಿ, "ಕೋವಿಡ್ ಸಭೆಯಲ್ಲಿ ಪ್ರಧಾನಿ ಕೆಲವು ಸೀಮಿತ ಹಾಗೂ ತನ್ನ ಒಲವುಳ್ಳ ಜಿಲ್ಲಾಧಿಕಾರಿಗಳಿಗೆ ಮಾತ್ರ ಮಾತನಾಡುವ ಅವಕಾಶ ನೀಡಿದ್ದರು. ಅಲ್ಲದೆ, ಚರ್ಚೆಯ ವೇಳೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕುಗ್ಗಿದೆ ಎಂದು ಅವರು ಹೇಳುತ್ತಾರೆ. ಆದರೆ, ದೇಶದಲ್ಲಿ ಇದೀಗ ಸೋಂಕಿನ ಪ್ರಮಾಣ ಎಷ್ಟು? ಎಷ್ಟು ಜನ ದಿನಂಪ್ರತಿ ಸೋಂಕಿನಿಂದ ಸಾಯುತ್ತಿದ್ದಾರೆ? ಎಂದು ಅವರು ಉತ್ತರಿಸುವರೇ?" ಎಂದು ಪ್ರಶ್ನೆ ಮಾಡಿದ್ದಾರೆ.

  "ಬಂಗಾಳದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಲೂ ರಾಜಕೀಯ ಮಾಡುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ನಮ್ಮ ರಾಜ್ಯದ ವಿರುದ್ಧ ಅವರು ಮಲತಾಯಿ ಧೋರಣೆ ತೋರಿಸುತ್ತಿರುವುದು ದುರಾದೃಷ್ಟಕರ. ಈಗಾಲೂ ನಾನು ಅವರನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಗಂಗಾ ನದಿಯಲ್ಲಿ ಕೊರೋನಾ ಸೋಂಕಿತರ ನೂರಾರು ಶವಗಳು ತೇಲುತ್ತಿವೆ ಎಂದು ತಿಳಿದ ನಂತರ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಕೇಂದ್ರದ ಎಷ್ಟು ತಂಡಗಳನ್ನು ಕಳುಹಿಸಲಾಗಿದೆ? ಯಾವ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಮಮತಾ ಬ್ಯಾನರ್ಜಿ ಕಟುವಾಗಿ ವಿಮರ್ಶಿಸಿದ್ದಾರೆ.

  ಇದನ್ನೂ ಓದಿ: Black Fungus: ಬ್ಲಾಕ್​ ಫಂಗಸ್​ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿ; ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

  ಶುರುವಾಯ್ತು ಬ್ಲಾಕ್ ಫಂಗಸ್ ಭಯ!;

  ಕೊರೋನಾ ಬೆನ್ನಿಗೆ ಇದೀಗ ಭಾರತವನ್ನು ಕಾಡುವ ಸೂಚನೆ ನೀಡಿರುವ ಮತ್ತೊಂದು ಸಾಂಕ್ರಾಮಿಕ ರೋಗವಾದ ಬ್ಲ್ಯಾಕ್ ಫಂಗಸ್ ಸೋಂಕನ್ನು ಸಾಂಕ್ರಾಮಿಕ ರೋಗಗಳ ಕಾಯಿದೆಯಡಿ ಅಧಿಸೂಚಿತ ರೋಗವೆಂದು ಘೋಷಿಸಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಿಂದ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

  ಇದನ್ನೂ ಓದಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಹೊಸತನವಿರಲಿ: ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ

  ಬ್ಲಾಕ್ ಫಂಗಸ್​ ವೈರಸ್​ (ಕಪ್ಪು ಶಿಲೀಂಧ್ರ) ದಿನದಿಂದ ದಿನಕ್ಕೆ ಮಾರಕವಾಗಿ ಪರಿಣಮಿಸಿದ್ದು, ರಾಜಸ್ಥಾನದಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರಲ್ಲಿ ಈ ವೈರಸ್​ ಕಂಡು ಬಂದಿತ್ತು. ಹೀಗಾಗಿ ರಾಜಸ್ಥಾನ ಸರ್ಕಾರ ಮೊದಲ ಬಾರಿಗೆ ಇದೊಂದು ಸಾಂಕ್ರಾಮಿಕ ರೋಗ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿತ್ತು. ಇದರ ಬೆನ್ನಿಗೆ ಇಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಅಧಿಸೂಚನೆ ಹೊರಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.

  ಪ್ರಸ್ತುತ, ರಾಜಸ್ಥಾನದಲ್ಲಿ ಸುಮಾರು 100 ಮಂದಿ ಕಪ್ಪು ಶಿಲೀಂಧ್ರ ಸೋಂಕಿತ ರೋಗಿಗಳಿದ್ದು, ಅವರ ಚಿಕಿತ್ಸೆಗಾಗಿ ಜೈಪುರದ ಸವಾಯಿ ಮನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮಾಡಲಾಗಿದೆ. "ಈ ಸೋಂಕು ಕೊರೋನಾಗಿಂತ ಪರಿಣಾಮಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಹರಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈ ಸೋಂಕನ್ನೂ ಸಹ ಸಾಂಕ್ರಾಮಿಕ ಖಾಯಿಲೆ ಎಂದು ಘೋಷಿಸಲಾಗಿದ್ದು, ಈಗಿನಿಂದಲೇ ಎಚ್ಚರದಿಂದ ಇರುವುದು ಒಳ್ಳೆಯದು" ಎಂದು ರಾಜಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
  Published by:MAshok Kumar
  First published: