ಹೇಳೋದೊಂದು ಮಾಡೋದೊಂದು: ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಬೀದಿ ಸುತ್ತಿದ ಸಿಎಂ ಅಂಡ್ ಟೀಮ್

ಮುಖ್ಯಮಂತ್ರಿ ಹಾಗೂ ಸಚಿವರು ಗುಂಪುಗುಂಪಾಗಿ ತೆರಳಿ ಹಾಲು ವಿತರಣೆ ಮಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಶಿವರಾಮ್ ಹೆಬ್ಬಾರ್ ಮುಖಕ್ಕೆ ಮಾಸ್ಕ್ ಕೂಡ ಧರಿಸಿರಲಿಲ್ಲ.

news18-kannada
Updated:April 2, 2020, 12:10 PM IST
ಹೇಳೋದೊಂದು ಮಾಡೋದೊಂದು: ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಬೀದಿ ಸುತ್ತಿದ ಸಿಎಂ ಅಂಡ್ ಟೀಮ್
ಹಾಲು ವಿತರಣೆಯಲ್ಲಿ ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು(ಏ. 02): ಲಾಕ್ ಡೌನ್ ಘೋಷಿಸಿದ ಮೇಲೆ ಸಾರ್ವಜನಿಕವಾಗಿ ಅನಾವಶ್ಯಕವಾಗಿ ಓಡಾಡುವ ಜನರ ಬಗ್ಗೆ ಮುಖ್ಯಮಂತ್ರಿಗಳು ಅನೇಕ ಬಾರಿ ಸಿಡುಕಿದ್ಧಾರೆ. ನಿನ್ನೆಯಂತೂ ಸಾವಿರಾರು ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ಧಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಪಾಲಿಸಬೇಕೆಂದು ಸಿಎಂ ಯಡಿಯೂರಪ್ಪ ಹಲವು ಬಾರಿ ಕಟ್ಟಪ್ಪಣೆ ಮಾಡಿದ್ದಾರೆ. ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಇವೆಲ್ಲವೂ ಒಳ್ಳೆಯ ನಡೆಯೇ. ಆದರೆ, ಇದೇ ನಿಯಮಗಳು ಮುಖ್ಯಮಂತ್ರಿ ಮತ್ತವರ ತಂಡಕ್ಕೂ ಅನ್ವಯವಾಗುವುದಿಲ್ಲವಾ? ಇಲ್ಲಿಯ ಅಶ್ವತ್ಥ್ ನಗರದಲ್ಲಿ ಸಿಎಂ ಮತ್ತು ಅವರ ಸಂಪುಟದ ಕೆಲ ಸದಸ್ಯರು ಗುಂಪು ಗುಂಪಾಗಿ ಸಾರ್ವಜನಿಕವಾಗಿ ಓಡಾಡಿದ್ಧಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮುಖಕ್ಕೆ ಮಾಸ್ಕ್ ಹಾಕದೇ ಸುತ್ತಾಡಿದ್ಧಾರೆ.

ಅಶ್ವಥ್ ನಗರದಲ್ಲಿ ಹಾಲು ವಿತರಣೆ ಕಾರ್ಯದ ವೇಳೆ ಈ ಬೆಳವಣಿಗೆಯಾಗಿದೆ. ಕೆಎಂಎಫ್​ನ ಹೆಚ್ಚುವರಿ ಹಾಲನ್ನು ಖರೀದಿಸಿ ಬಡವರಿಗೆ ವಿಸ್ತರಿಸುವ ಯೋಜನೆ ಇದಾಗಿದೆ. ಸಿಎಂ ಮತ್ತವರ ತಂಡವು ಈ ಪ್ರದೇಶದಲ್ಲಿ ಮನೆ ಮನೆಗೂ ತೆರಳಿ ಹಾಲು ವಿತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವ ಶಿವರಾಮ್ ಹೆಬ್ಬಾರ್ ಮೊದಲಾದವರು ಮುಖ್ಯಮಂತ್ರಿಗಳ ಜೊತೆ ಇದ್ದರು.

ಮುಖ್ಯಮಂತ್ರಿ ಹಾಗೂ ಸಚಿವರು ಗುಂಪುಗುಂಪಾಗಿ ತೆರಳಿ ಹಾಲು ವಿತರಣೆ ಮಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಶಿವರಾಮ್ ಹೆಬ್ಬಾರ್ ಮುಖಕ್ಕೆ ಮಾಸ್ಕ್ ಕೂಡ ಧರಿಸಿರಲಿಲ್ಲ. ಡಿಸಿಎಂ ಅಶ್ವತ್ಥ ನಾರಾಯಣ ಅವರು ಕೆಲ ಕಡೆ ಮಾಸ್ಕನ್ನು ಮುಖಕ್ಕೆ ಹಾಕದೇ ಕೈಯಲ್ಲಿಟ್ಟುಕೊಂಡು ತಿರುಗಾಡಿದ್ದರು. ರಾಜ್ಯದ ಜನತೆಗೆ ಜಾಗೃತಿ ಮೂಡಿಸಬೇಕಾದವರು ಈ ರೀತಿ ಬೇಜವಾಬ್ದಾರಿತನದಿಂದ ನಡೆದುಕೊಳ್ಳುವುದು ತಪ್ಪಲ್ಲವೇ? ಇದು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುವುದಿಲ್ಲವೇ?

ಇದನ್ನೂ ಓದಿ: ಹಸಿದು ಅಂಗಲಾಚಿದ ಸುಡುಗಾಡು ಸಿದ್ದರಿಗೆ ಮುರುಘಾ ಶ್ರೀಗಳಿಂದ ಅನ್ನ ದಾಸೋಹ : ಹಸಿವು ನೀಗಿಸಿ ಶ್ರೀಗಳ ಮಾನವೀಯತೆ

ಡಿಸಿಎಂ ಸಿಟಿ ರೌಂಡ್ಸ್:

ಇದೇ ವೇಳೆ, ಡಿಸಿಎಂ ಅಶ್ವತ್ಥ ನಾರಾಯಣ ಅವರು ಲಾಕ್ ಡೌನ್ ಪರಿಸ್ಥಿತಿ ಅವಲೋಕಿಸಲು ನಗರ ಪ್ರದಕ್ಷಿಣೆ ಮಾಡಲಿದ್ದಾರೆ. ಅದರ ಭಾಗವಾಗಿ ಇವತ್ತು ಯಲಹಂಕ, ಬ್ಯಾಟರಾಯನಪುರ, ಸರ್ವಜ್ಞನಗರ, ಪುಲಿಕೇಶಿನಗರ, ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಲಾಕ್ ಡೌನ್ ಯಾವ ರೀತಿ ಪಾಲನೆಯಾಗುತ್ತಿದೆ? ಪೊಲೀಸರ ವರ್ತನೆ ಹೇಗಿದೆ? ಬಡವರು, ಕೂಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳು ಸಿಗುತ್ತಿದೆಯೇ? ಎಂಬಿತ್ಯಾದಿ ವಿಚಾರಗಳನ್ನ ಡಿಸಿಎಂ ಪರಿಶೀಲಿಸಲಿದ್ಧಾರೆ. ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ರಾಜು, ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮೊದಲಾದವರು ಡಿಸಿಎಂ ಜೊತೆ ಇರಲಿದ್ದಾರೆ.

First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading