HOME » NEWS » Coronavirus-latest-news » CM YEDDYURAPPA GET ANGER IN THE CABINET FOR THE OXYGEN DISASTER OF CHAMARAJANAGAR MAK

Cabinet Meeting: ಚಾಮರಾಜನಗರ ಆಕ್ಸಿಜನ್ ದುರಂತ; ಸಚಿವ ಸಂಪುಟದಲ್ಲಿ ಸಿಎಂ ಗರಂ, ಲಾಕ್​ಡೌನ್ ಘೋಷಣೆ ಸಾಧ್ಯತೆ?

ಇಂದು ಸಚಿವ ಸಂಪುಟ ಸಭೆ ಕರೆದಿರುವ ಸಿಎಂ ಯಡಿಯೂರಪ್ಪ ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಭೆಯಲ್ಲಿ ಕಿಡಿಕಾರಿದ್ದಾರೆ ಎಂದು ತಿಳಿದುಬಂದಿದೆ.

news18-kannada
Updated:May 4, 2021, 6:47 PM IST
Cabinet Meeting: ಚಾಮರಾಜನಗರ ಆಕ್ಸಿಜನ್ ದುರಂತ; ಸಚಿವ ಸಂಪುಟದಲ್ಲಿ ಸಿಎಂ ಗರಂ, ಲಾಕ್​ಡೌನ್ ಘೋಷಣೆ ಸಾಧ್ಯತೆ?
ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಮೇ 04); ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲದ ಕಾರಣ ನಿನ್ನೆ ಚಾಮರಾಜನಗರ ಜಿಲ್ಲೆಯಲ್ಲಿ 24 ಜನ ಕೋವಿಡ್​ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಸಾವಿಗೆ ಇಡೀ ದೇಶದ ಜನ ಮರುಗಿದ್ದು, ಅನೇಕ ನಾಯಕರು ವಿಷಾಧ ವ್ಯಕ್ತಪಡಿಸಿದ್ದಾರೆ. ಈ ದುರಂತಕ್ಕೆ ಆಡಳಿತ ಪಕ್ಷದ ಬೇಜವಾಬ್ದಾರಿಯೇ ಕಾರಣ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಇಂದು ಸಚಿವ ಸಂಪುಟ ಸಭೆ ಕರೆದಿರುವ ಸಿಎಂ ಯಡಿಯೂರಪ್ಪ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಭೆಯಲ್ಲಿ ಕಿಡಿಕಾರಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಬಿಎಸ್​ವೈ"ಜಿಲ್ಲಾ ಉಸ್ತುವಾರಿಗಳು ಜಿಲ್ಲೆಯಲ್ಲಿರಲು ಸೂಚಿಸಿದ್ದೆ. ಆದ್ರೆ ಕೆಲವರು ಬೆಂಗಳೂರಿನಲ್ಲಿದ್ರಿ, ಕೆಲವರು ನಿಮ್ಮ ಜಿಲ್ಲೆಗಳಲ್ಲಿ ಇದ್ರಿ. ಕೋವಿಡ್ ನಿರ್ವಹಣೆ ಅಂದ್ರೆ ಇದೇನಾ? ಚಾಮರಾಜನಗರದಲ್ಲಿ ಆಕ್ಸಿಜನ್ ಸಮಸ್ಯೆ ಗಂಭೀರ ಇದ್ದಿದ್ದು ಮೊದಲೇ ಏಕೆ ಗೊತ್ತಾಗ್ಲಿಲ್ಲ? ಮತ್ತೆ ಏನ್ ನೀವು ನಿರ್ವಹಣೆ ಮಾಡೋದು ಎನು? ಬೇರೆ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ಅಂತ ಗೊತ್ತಿದ್ಯಾ? ದುರಂತಕ್ಕೆ ಯಾರೇ ಕಾರಣ ಇದ್ರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಚಾಮರಾಜನಗರದ ಆಕ್ಸಿಜನ್ ದುರಂತದ ಬಗ್ಗೆ ವಿವರಣೆ ನೀಡಿದ ಆರೋಗ್ಯ ಸಚಿವ ಸುಧಾಕರ್, "ಚಾಮರಾಜನಗರ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ದಾಖಲಾದವರು 123 ಜನ. ಮೊನ್ನೆ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 14 ಜನ ಕೋವಿಡ್ ಸಹಜ ಖಾಯಿಲೆಯಿಂದ ಸತ್ತಿದ್ದಾರೆ. 12 ಗಂಟೆಯಿಂದ 3 ಗಂಟೆಯವರೆಗೆ 3 ಜನ ಸತ್ತಿದ್ದಾರೆ. 3 ಗಂಟೆಯಿಂದ 7 ಗಂಟೆಯವರೆಗೆ 7 ಜನ ಸತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಸಂಖ್ಯೆ 3 ಮಾತ್ರ. ಮೊನ್ನೆ ಬೆಳಗ್ಗೆ 7 ಗಂಟೆಯಿಂದ ನಿನ್ನೆ ಬೆಳಗ್ಗೆ 7 ಗಂಟೆಯವರೆಗೆ 24 ಸಾವು ಸಂಭವಿಸಿವೆ.

24 ಸಾವು ಆಕ್ಸಿಜನ್ ಕೊರತೆಯಿಂದ ಉಂಟಾಗಿದೆ ಎಂಬ ಭಾವನೆ ಎಲ್ಲಾ ಕಡೆ ಹರಡಿದೆ. ಎಲ್ಲಾ ಸಾವುಗಳು ಆಕ್ಸಿಜನ್ ಕೊರತೆಯಿಂದ ಸಂಭವಿಸಿಲ್ಲ. ಕೊರೋನಾ ಕೊನೆ ಹಂತದಲ್ಲಿ ಕೆಲವರು ಬಂದಿರೋರು, ಮತ್ತು ಕೆಲವರಿಗೆ ಬೇರೆ ಗಂಭೀರ ಆರೋಗ್ಯ ಸಮಸ್ಯೆ ಇದ್ದ ಕಾರಣ ಸಾವು ಸಂಭವಿಸಿದೆ" ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ರೆಮ್​ಡಿಸಿವಿರ್​ ಔಷಧ ಕಡಿಮೆಯಾಗಿದೆ. ಹೀಗಾಗಿ ಅದನ್ನು ತುರ್ತಾಗಿ ಆಮದು ಮಾಡಿಕೊಳ್ಳುವ ಅಗತ್ಯವಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ರಾಜ್ಯದಲ್ಲಿ ರೆಮೆಡಿಸಿವಿರ್ ತೀವ್ರ ಕೊರತೆ ಹಿನ್ನೆಲೆ ಹೆಚ್ಚುವರಿ ರೆಮೆಡಿಸಿವಿರ್ ವಯಲ್ಸ್ ತೀರಿಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಐದು ಲಕ್ಷ ರೆಮೆಡಿಸಿವಿರ್ ಕೂಡಲೇ ಆಮದು ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದ್ದು, ವಿದೇಶಗಳಿಂದ ಯಾವುದೇ‌ ಹಂತದಲ್ಲಿ ತುರ್ತಾಗಿ ಐದು ಲಕ್ಷ ರೆಮೆಡಿಸಿವಿರ್ ವಯಲ್ಸ್ ಆಮದು ಮಾಡಿಕೊಳ್ಳಬೇಕು ಎಂದು ಸ್ವತಃ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಲ್ಲದೆ, ರೆಮೆಡಿಸಿವಿರ್ ಆಮದಿಗೆ ತಗಲುವ ಹಣ ಕೂಡಲೇ ಮಂಜೂರು ಮಾಡುವ ಬಗ್ಗೆ ಚರ್ಚೆಯೂ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: BS Yeddyurappa: ಆಕ್ಸಿಜನ್, ರೆಮ್​ಡಿಸಿವಿರ್ ಅಕ್ರಮ ಮಾರಾಟದ ಬಗ್ಗೆ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ; ಯಡಿಯೂರಪ್ಪ ಎಚ್ಚರಿಕೆ!

ಮತ್ತೆ ಲಾಕ್​ಡೌನ್ ಸಾಧ್ಯತೆ?

ಕೊರೋನಾ ಸೋಂಕು ನಿವಾರಣೆಗಾಗಿ ರಾಜ್ಯದಲ್ಲಿ ಈಗಾಗಲೇ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಸೋಂಕಿತರ ಸಂಖ್ಯೆ ಮಾತ್ರ ಇಳಿಮುಖವಾಗುವ ಯಾವುದೇ ಸಾಧ್ಯತೆಗಳು ಕಾಣಿಸುತ್ತಿಲ್ಲ. ಹೀಗಾಗಿ ಲಾಕ್​ಡೌನ್ ಘೋಷಣೆ ಮಾಡುವ ಬಗ್ಗೆಯೂ ಸಿಎಂ ಯಡಿಯೂರಪ್ಪ ಎಲ್ಲಾ ಸಚಿವರ ಬಳಿ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸೂಕ್ತ ಚಿಕಿತ್ಸೆ ಸಿಗದ ಕಾರಣಕ್ಕೆ ರಾಜ್ಯವ್ಯಾಪಿ ವ್ಯಕ್ತ ಆಗ್ತಿರುವ ಜನಾಕ್ರೋಶದ ಬಗ್ಗೆ ಸಮಾಲೋಚನೆ ನಡೆದಿದ್ದು, ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ನೀಡಲು ಎದುರಾಗಿರುವ ತೊಂದರೆಗಳ ಕುರಿತು ಚರ್ಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಮೇಲ್ದರ್ಜೆಗೆ ಏರಿಸಲು ಆರ್ಥಿಕ ಸಹಾಯಧನ ನೀಡುವುದು, ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಎಲ್ಲಾ ಆಕ್ಸಿಜನ್ ನ್ನು ರಾಜ್ಯವೇ ಬಳಕೆ ಮಾಡಲು ಕೇಂದ್ರದಿಂದ ಅನುಮತಿ ಪಡೆಯುವುದು, ಲಾಕ್ ಡೌನ್ ಮಾಡುವ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯದ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
Published by: MAshok Kumar
First published: May 4, 2021, 5:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories