ನವದೆಹಲಿ(ಮೇ.09): ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಮಾಡಿದ ತನ್ನ ಮೇಲಿನ ಗಂಭೀರ ಆರೋಪಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದರು. "ವಲಸೆ ಕಾರ್ಮಿಕರ ಬಗ್ಗೆ ಮಾತಾಡುವ ಹಕ್ಕು ನಿಮಗಿಲ್ಲ, ನಿನ್ನೆಯೊಂದೇ ದಿನ 16 ಮಂದಿ ರೈಲ್ವೆ ದುರಂತದಲ್ಲಿ ಬಲಿಯಾಗಿದ್ಧಾರೆ. ಹಾಗಾಗಿ ಮೊದಲು ಕೇಂದ್ರ ರೈಲ್ವೆ ಮಂತ್ರಿಯ ರಾಜೀನಾಮೆ ಪಡೆಯುವಿರಾ? ಎನ್ನುವ ಮೂಲಕ ದೀದಿ ಅಮಿತ್ ಷಾಗೆ ತಪರಾಕಿ ಬಾರಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಅವರಿಗಾಗಿ ಪಶ್ಚಿಮ ಬಂಗಾಳದಲ್ಲಿ 711 ಕ್ಯಾಂಪಸ್ ತೆರೆಯಲಾಗಿದೆ. ವಲಸೆ ಕಾರ್ಮಿಕರ ಬಗ್ಗೆ ಸಲಹೆ ಕೊಡಲು ಕೇಂದ್ರಕ್ಕೆ ಹಕ್ಕಿಲ್ಲ. ಕೇಂದ್ರ ಸರ್ಕಾರ ರೈಲು ಬಿಡುವ ಬಗ್ಗೆ ಬರೀ ಸುಳ್ಳು ಹೇಳುತ್ತಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ಧಾರೆ.
ಈ ಮುನ್ನ ಮಮತಾ ಬ್ಯಾನರ್ಜಿ ವಲಸೆ ಕಾರ್ಮಿಕರು ತುಂಬಿದ್ದ ರೈಲನ್ನು ತಮ್ಮ ರಾಜ್ಯದೊಳಗೆ ಬರಲು ಬಿಡದೆ ವಲಸೆ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೀದಿ ವಿರುದ್ಧ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: COVID-19: ಇವಾಂಕಾ ಟ್ರಂಪ್ ಸಹಾಯಕನಿಗೂ ಕೊರೋನಾ ಸೋಂಕು
ಪಶ್ಚಿಮ ಬಂಗಾಳದ ವಿವಿಧ ಕಡೆಗಳಿಂದ ದೇಶದ ಹಲವು ಕಡೆಗಳಿಗೆ ಕೆಲಸಕ್ಕಾಗಿ ತೆರಳಿದ್ದ 2 ಲಕ್ಷ ವಲಸೆ ಕಾರ್ಮಿಕರು ತೆರಳಿದ್ದರು. ಇವರನ್ನು ಲಾಕ್ಡೌನ್ ಆದ್ದರಿಂದ ತಮ್ಮ ರಾಜ್ಯಗಳಿಗೆ ವಾಪಸ್ಸು ಕಳಿಸಲು ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರಿದ್ದ ರೈಲು ಪ್ರವೇಶ ನಿರ್ಬಂಧ ವಿಧಿಸಿದೆ. ಈ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಅಮಿತ್ ಶಾ ಪತ್ರದಲ್ಲಿ ತಿಳಿಸಿದ್ದಾರೆ.
ವಲಸೆ ಕಾರ್ಮಿಕ ವಿಚಾರವೂ ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಸರ್ಕಾರ ನಡುವೆ ಗಲಾಟೆಗೆ ಕಾರಣವಾಗಿದೆ. ಕೊರೋನಾ ಸೋಂಕನ್ನು ನಿಯಂತ್ರಿಸಲು ಯತ್ನಿಸುತ್ತಿರುವ ದೀದಿ ಸರ್ಕಾರಕ್ಕೆ ವಲಸೆ ಕಾರ್ಮಿಕರ ಸಮಸ್ಯೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ