ಬೆಂಗಳೂರು(ಮೇ.02): ಮದ್ಯ ಮಾರಾಟ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ಧಾರವೇ ಅಂತಿಮ ನಿರ್ಧಾರ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ಧಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮದ್ಯ ಮಾರಾಟ ಕುರಿತು ಸೂಕ್ತ ತೀರ್ಮಾನವನ್ನು ಮುಖ್ಯಮಂತ್ರಿಗಳೇ ತೆಗೆದುಕೊಳ್ಳಲಿದ್ದಾರೆ. ಇದು ಯಡಿಯೂರಪ್ಪನವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಇಂದಿನ ಸಚಿವ ಸಂಪುಟ ಸಭೆಯಲ್ಲೂ ಮದ್ಯ ಮಾರಾಟ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ರಾಜ್ಯದ ಎಲ್ಲಿ ಮದ್ಯ ಮಾರಾಟ ಮಾಡಬೇಕು? ಎಣ್ಣೆ ಅಂಗಡಿ ಓಪನ್ ಮಾಡುವ ಮುನ್ನ ಏನು ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು? ಎಲ್ಲವೂ ಸಿಎಂ ಅವರೇ ತೀರ್ಮಾನ ಮಾಡಲಿದ್ದಾರೆ. ಮೇ 4ರ ನಂತರ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು ಆರ್ ಅಶೋಕ್.
ಕೊರೋನಾ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಇಡೀ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಯ್ತು. ಇದರ ಪರಿಣಾಮ ಬಹುತೇಕ ಎಲ್ಲ ಅಂಗಡಿಗಳು ಬಂದ್ ಆದವು. ಅದೇ ಮಾದರಿಯಲ್ಲಿ ಮದ್ಯ ಮಾರಾಟವೂ ಬಂದ್ ಆದ ಕಾರಣ ಎಣ್ಣೆ ಸಿಗದೇ ಕರ್ನಾಟಕ ಸೇರಿದಂತೆ ದೇಶದ ನಾನಾ ಕಡೆ ವ್ಯಸನಿಗಳು ಸಾವನ್ನಪ್ಪಿದ್ದರು. ಸರಿಯಾಗಿ ಇಷ್ಟೇ ಜನ ಸತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಇಲ್ಲವಾದರೂ, ನೂರಾರು ಮಂದಿಯಂತೂ ಬಲಿಯಾಗಿರುವುದು ವರದಿಯಾಗಿದೆ.
ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್: ಗ್ರೀನ್, ಆರೇಂಜ್, ರೆಡ್ ಜೋನ್ನಲ್ಲೂ ಮದ್ಯ ಮಾರಾಟಕ್ಕೆ ಅವಕಾಶ
ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರವೂ ನಿನ್ನೆ ಗ್ರೀನ್ ಜೋನ್ನಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೀಗ, ಮತ್ತೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಗೃಹ ಇಲಾಖೆ ಆರೇಂಜ್ ಜೋನ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇನ್ನು, ರೆಡ್ ಜೋನ್ಗಳಲ್ಲಿ ಮಾತ್ರ ಕೆಲವು ಷರತ್ತುಗಳೊಂದಿಗೆ ಮದ್ಯ ಮಾರಾಟ ಮಾಡಬಹುದು ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ