ಬೆಂಗಳೂರು (ಮಾ. 16): ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕರ್ನಾಟಕದಲ್ಲೂ ಬ್ರಿಟನ್ ವೈರಸ್ ಜೊತೆಗೆ ದಕ್ಷಿಣ ಆಫ್ರಿಕಾ ವೈರಸ್ ಕೂಡ ಕಾಣಿಸಿಕೊಂಡಿದ್ದು, ಕೊರೋನಾ ಸೋಂಕು ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಂದೆ ಮತ್ತೆ ಲಾಕ್ಡೌನ್ ಮಾಡುವ ಬಗ್ಗೆಯೂ ಪ್ರಸ್ತಾಪ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಸುಧಾಕರ್, ಕೊರೋನಾ ಲಸಿಕೆ ವಿತರಣೆ ಬೇಗ ಜಾಸ್ತಿ ಆಗಿದೆ. ಇದುವರೆಗೂ 15 ಲಕ್ಷ ಜನರಿಗೆ ಕೊರೋನಾ ಲಸಿಕೆ ನೀಡಿದ್ದೇವೆ. ಕೊರೋನಾ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದೆ. ತಜ್ಞರು ಕೊರೋನಾ ಎರಡನೇ ಅಲೆಯ ಸೂಚನೆ ಅಂತ ಹೇಳಿದ್ದಾರೆ. ಜನರಿಗೆ ಕೋವಿಡ್ ನಿಯಮಗಳನ್ನು ಪಾಲಿಸಿ ಅಂತ ಹೇಳುತ್ತಿದ್ದೇವೆ. ಕೋವಿಡ್ ನಿಯಮಗಳನ್ನು ಪಾಲಿಸದೇ ರಾಜ್ಯ ಸರ್ಕಾರ ಕಠಿಣ ನಿರ್ಧಾರಗಳನ್ನ ಕೈಗೊಳ್ಳುವಂತೆ ಮಾಡಬೇಡಿ ಎಂದು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳು ನಾಗರಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಅಂತ ಹೇಳಿದ್ದಾರೆ. ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ, ಇವತ್ತಿಂದ ದೊಡ್ಡ ದೊಡ್ಡ ಜಾಹೀರಾತು ಕೊಟ್ಟು ಜಾಗೃತಿ ಮೂಡಿಸುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕ- ಮಹಾರಾಷ್ಟ್ರ ಬಸ್ ಸಂಚಾರ ಪುನರಾರಂಭ; 3 ದಿನ ಬಸ್ ಸ್ಥಗಿತದಿಂದ ಕೋಟ್ಯಾಂತರ ರೂ. ನಷ್ಟ
ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ನಾಳೆ ಪ್ರಧಾನಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಇದೆ. ಸಭೆ ಬಳಿಕ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಸಿನಿಮಾ, ಪ್ರತಿಭಟನೆ ಮಾತ್ರ ಅಲ್ಲ, ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು. ಹೀಗಾಗಿ ನಾಳಿನ ಪ್ರಧಾನಿ ಜೊತೆಗಿನ ವಿಡಿಯೋ ಸಂವಾದದಲ್ಲಿ ಕೆಲ ನಿರ್ದೇಶನ ಸಿಗಬಹುದು. ಅದಾದ ಬಳಿಕ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ. ಜನ ಎಚ್ಚರಿಕೆ ವಹಿಸದೇ ಇದ್ದರೆ ಕಠಿಣ ನಿಯಮಗಳನ್ನು ಮಾಡಲೇಬೇಕಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ