ಕೋವಿಡ್​ ಪರಿಹಾರ ನಿಧಿಗೆ ಸಚಿವರ 1 ವರ್ಷದ ವೇತನ; ಸಚಿವರ ತಿಂಗಳ ಸಂಬಳವೆಷ್ಟು ಗೊತ್ತಾ!

ಸರ್ಕಾರ ರಾಜ್ಯ ಸಂಪುಟ ದರ್ಜೆಯ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು ಕೋವಿಡ್​ ಪರಿಹಾರ ನಿಧಿಗೆ ದೇಣಿಗೆಯಾಗಿ ಪಾವತಿಸುಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ನೀಡಿದೆ.

ಸಿಎಂ ಬಿ.ಎಸ್.​ಯಡಿಯೂರಪ್ಪ.

ಸಿಎಂ ಬಿ.ಎಸ್.​ಯಡಿಯೂರಪ್ಪ.

 • Share this:
  ಬೆಂಗಳೂರು (ಮೇ. 13): ಕಳೆದೊಂದು ವರ್ಷದಿಂದ ಕೊರೋನಾ ಸೋಂಕು ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಪೆಟ್ಟು ನೀಡಿದೆ. ಸೋಂಕಿನಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರ ಸೋಂಕಿತರ ಚಿಕಿತ್ಸೆಗೆ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಸೋಂಕಿತರಿಗೆ ಅಗತ್ಯ ಸೌಲಭ್ಯವನ್ನು ನೀಡುವ ಕಾರ್ಯ ಭರದಿಂದ ಸಾಗಿದೆ.  ಈ ನಡುವೆ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ ಜಾರಿ ಮಾಡಲಾಗಿದ್ದು, ಸರ್ಕಾರಕ್ಕೆ ಆದಾಯದ ಹರಿವು ಕೂಡ ಕುಂಠಿತಗೊಂಡಿದೆ. ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೂ ಪರಿಹಾರ ನೀಡಲು ಸರ್ಕಾರದ ಬೊಕ್ಕಸದಲ್ಲಿ ಆದಾಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ರಾಜ್ಯ ಸಂಪುಟ ದರ್ಜೆಯ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು ಕೋವಿಡ್​ ಪರಿಹಾರ ನಿಧಿಗೆ ದೇಣಿಗೆಯಾಗಿ ಪಾವತಿಸುಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ನೀಡಿದೆ.

  ಈ ಹಿಂದೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್​ ನಿರ್ವಹಣೆ ಕುರಿತ ವೆಚ್ಚವನ್ನು ಸರಿದೂಗಿಸಲು ರಾಜ್ಯಸಚಿವರ ಒಂದು ವರ್ಷದ ವೇತನವನ್ನು ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಇದಕ್ಕೆ ಸಚಿವರು ಕೂಡ ಸಹಮತ ಸೂಚಿಸಿದ್ದರು. ಈಗ ಈ ಕುರಿತು ಸಿಎಂ ಬಿ ಎಸ್​ ಯಡಿಯೂರಪ್ಪ ಅವರಿಂದ ಅಧಿಕೃತ ಆದೇಶ  ಹೊರ ಬಿದ್ದಿದೆ. ಇನ್ನು ಈ ವೇತನ ಕೋವಿಡ್​ ಪರಿಹಾರ ನಿಧಿ ಸೇರಲಿದ್ದು, ಈ ಹಣವನ್ನು ಸೋಂಕು ನಿರ್ವಹಣೆಗೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಮೂಲಕ ಅಗತ್ಯ ಸೇವೆಗಳ ವ್ಯವಸ್ಥೆಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ.

  ಸಚಿವರ ಸಂಬಳವೆಷ್ಟು

  2021 ಏಪ್ರಿಲ್​ 1 ರಿಂದ ಅನ್ವಯವಾಗುವಂತೆ ಮುಂದಿನ ವರ್ಷದ ಅಂದರೆ 2022ರ ಮಾರ್ಚ್​ 1 ರವರೆಗಿನ 12 ತಿಂಗಳ ಸಚಿವರ ವೇತನ ಕೋವಿಡ್​ ಪರಿಹಾರ ನಿಧಿ ಸೇರಲಿದೆ. ಕಳೆದ ವರ್ಷ ಬಿ ಎಸ್​ ಯಡಿಯೂರಪ್ಪ ಅವರು ಶಾಸಕರು ಮತ್ತು ಸಚಿವರ ಮೂಲ ವೇತನ ಹೆಚ್ಚಳ ತಿದ್ದುಪಡಿ ಕಾಯ್ದೆಗೆ ಅಸ್ತು ನೀಡಿದ್ದರು. ಇದರ ಅನ್ವಯ ಸಚಿವ ಸಂಪುಟ ದರ್ಜೆ ಸಚಿವರಿಗೆ ಭತ್ಯೆಗಳನ್ನು ಹೊರತು ಪಡಿಸಿ ಮೂಲ ವೇತನ 40 ಸಾವಿರ ಸಿಗಲಿದೆ. ಇನ್ನು ಮುಖ್ಯಮಂತ್ರಿಗಳಿಗೆ ಮನೆ , ಅತಿಥ್ಯ, ವಾಹನ ಭತ್ಯೆಗಳನ್ನು ಹೊರತುಪಡಿಸಿ ತಿಂಗಳಿಗೆ 50 ಸಾವಿರ ಸಂಬಳ ಸಿಗಲಿದೆ.

  ಇದನ್ನು ಓದಿ: ರಾಜ್ಯದಲ್ಲಿ ಶುಕ್ರವಾರದಿಂದ 18-44 ವರ್ಷದವರಿಗಿಲ್ಲ ಲಸಿಕೆ; ಸಿಎಂ ಸಭೆಯಲ್ಲಿ ತೀರ್ಮಾನ

  ಶಾಸಕರ ಅನುದಾನ ಬಳಕೆಗೂ ಸೂಚನೆ

  ಇದರ ಜೊತೆಗೆ ಕೋವಿಡ್​ ನಿರ್ವಹಣೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣ, ವ್ಯಾಕ್ಸಿನ್​ ಖರೀದಿ, ಬೆಡ್​ ವ್ಯವಸ್ಥೆಗಾಗಿ ಸರ್ಕಾರ ಶಾಸಕರ ಅನುದಾನ ಬಳಕೆಗೆ ಕೂಡ ಮುಂದಾಗಿದೆ. ಈಗಾಗಲೇ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಿರುವ ಅನುದಾನವನ್ನು ಕೋವಿಡ್​ ನಿರ್ವಹಣೆಗೆ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯೋಜನೆಯಡಿ ಪ್ರತಿ ಕ್ಷೇತ್ರಕ್ಕೂ 2 ಕೋಟಿ ಅನುದಾನ ನೀಡಿದ್ದು, ಅದರಲ್ಲಿ ಕನಿಷ್ಠ ಶೇ 25 ರಷ್ಟು ಹಣ ಬಳಕೆಗೆ ಸಮ್ಮತಿ ನೀಡಲಾಗಿದೆ. ಈ ಮೂಲಕ ಜಿಲ್ಲೆಗಳಲ್ಲಿ ಕೋವಿಡ್​ ನಿರ್ವಹಣೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಶಾಸಕರಿಗೆ ಸೂಚನೆ ನೀಡಲಾಗಿದೆ.

  ಬೆಂಗಳೂರು ನಗರದಲ್ಲಿ ಕೋವಿಡ್ ಹತೋಟಿಗೆ ಬರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಏರಿಕೆ ಹಾಗೂ ನಿಯಂತ್ರಣ ಕುರಿತು ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಆಕ್ಸಿ ಬಸ್​ ಸೇವೆ ಆರಂಭಿಸಿದ್ದು, ಈ ಮೂಲಕ ಉಸಿರಾಟ ಸಮಸ್ಯೆ ಬಳಲುತ್ತಿರುವ ಬೆಡ್​ ಸಿಗದ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ  ಬೇರೆ ಜಿಲ್ಲೆಗಳಲ್ಲಿ ಲಭ್ಯವಿರುವ ಮೂಲಸೌಕರ್ಯ ಬಳಸಿಕೊಂಡು ಸೇವೆ ನೀಡಬೇಕಿದ್ದು, ಈಗಿನಿಂದಲೇ ಸಿದ್ಧತೆಗೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು  ಸೂಚನೆ ನೀಡಿದ್ದಾರೆ.
  Published by:Seema R
  First published: