ಬೆಂಗಳೂರು(ಮೇ.12): ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಬಂಧ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಹಣಕಾಸು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ.
ಲಾಕ್ಡೌನ್ ಸಡಿಲಗೊಳಿಸಿದ ಬಳಿಕ ಆರ್ಥಿಕ ಸ್ಥಿತಿ ಹೇಗಿದೆ? ಆರ್ಥಿಕ ಪುನಶ್ಚೇತನಕ್ಕೆ ಏನೆಲ್ಲ ಕ್ರಮಕೈಗೊಳ್ಳಬಹು? ಎಂಬ ಬಗ್ಗೆ ಚರ್ಚೆಯಾಗಲಿದೆ. ಜತೆಗೆ ಲಾಕ್ಡೌನ್ ಮತಷ್ಟು ಸಡಿಲಗೊಳಿಸಿದರೆ ಅನುಕೂಲ ಆಗುತ್ತಾ? ಆದಾಯ ಮೂಲಗಳ ಏನು? ಸರ್ಕಾರಿ ನೌಕರರಿಗೆ ಸಂಬಳ ಹೇಗೆ? ಸೇರಿದಂತೆ ಮುಂತಾದ ವಿಷಯಗಳ ಮಾತುಕತೆ ನಡೆಯಲಿದೆ.
ಮಾರಕ ಕೊರೋನಾ ವೈರಸ್ ದಿನೇದಿನೇ ತೀವ್ರಗತಿಯಲ್ಲಿ ಹರಡುತ್ತಿದೆ. ಇದರ ಪರಿಣಾಮ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇಡೀ ರಾಜ್ಯವನ್ನು ಲಾಕ್ಡೌನ್ ಮಾಡಿ ಬಹುತೇಕ ಸೇವೆಗಳನ್ನು ಸ್ತಬ್ಧಗೊಳಿಸಲಾಗಿತ್ತು. ಈ ಲಾಕ್ಡೌನ್ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ರೂ.10,675 ಕೋಟಿ ನಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊರೋನಾ ಲಾಕ್ಡೌನ್ ಎಫೆಕ್ಟ್: ಕರ್ನಾಟಕಕ್ಕೆ 10,675 ಕೋಟಿ ರೂ. ನಷ್ಟ
ಇಡೀ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿದ್ದ ಕಾರಣ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಬರಬೇಕಿದ್ದ ಎಲ್ಲಾ ಆದಾಯ ಸ್ಥಗಿತಗೊಂಡಿತ್ತು. ತೆರಿಗೆ, ಅಬಕಾರಿ, ಅಂಚೆ ಚೀಟಿ, ನೋಂದಾವಣಿ, ಸಾರಿಗೆ(ಮೋಟಾರು ವಾಹನ)ಗಳಿಂದ ಬರಬೇಕಿದ್ದ ಆದಾಯ ಬರದ ಕಾರಣ ಇಷ್ಟು ಪ್ರಮಾಣದಲ್ಲಿ ನಷ್ಟ ಆಗಿದೆ ಎನ್ನಲಾಗುತ್ತಿದೆ.
ಸದ್ಯ ಲಾಕ್ಡೌನ್ ಸಡಿಲಗೊಳಿಸಿದ ಬಳಿಕ ಅಬಕಾರಿ ಸುಂಕದ ಹೆಚ್ಚಳವೂ 2,530 ಕೋಟಿ ರೂ. ತಂದುಕೊಟ್ಟಿದೆ. 2019ನೇ ವರ್ಷದ ನವೆಂಬರ್ ತಿಂಗಳರವರೆಗೆ ಜಿಎಸ್ಟಿ ಪರಿಹಾರ ಸ್ವೀಕರಿಸಿದ ಪರಿಣಾಮ 5,000 ಕೋಟಿ ರೂ. ಬಾಕಿಯಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ