Karnataka Lockdown: ರಾಜ್ಯದಲ್ಲಿ ಕಂಪ್ಲೀಟ್​​​ ಲಾಕ್​​​​​ಡೌನ್​ ; ಮೇ 10ರಿಂದ 2 ವಾರ ಕರ್ನಾಟಕ ಸ್ತಬ್ಧ!

ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹೋಟೆಲ್-ರೆಸ್ಟೋರೆಂಟ್​​​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅವಕಾಶ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕೊರೋನಾ ಕರ್ಫ್ಯೂನಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ. ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಿಎಂ ಬಿ.ಎಸ್​.ಯಡಿಯೂರಪ್ಪ ಸರ್ಕಾರ ಕಟ್ಟಿನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಿದೆ. 14 ದಿನಗಳ ಕಾಲ ಕರ್ನಾಟಕ ಸ್ತಬ್ಧವಾಗಲಿದ್ದು, ಟಫ್​ ರೂಲ್ಸ್​ ಜಾರಿಯಲ್ಲಿರಲಿದೆ.

ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ ರಾಜ್ಯಾದ್ಯಂತ ಜಾರಿಯಲ್ಲಿ ಇರಲಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ  10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಬಾರ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.  ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯಲ್ಲಿ ತರಕಾರಿ-ಹಣ್ಣುಗಳನ್ನು ಮಾರಲು ಅವಕಾಶ ನೀಡಲಾಗಿದೆ.  ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧವೇರಲಾಗಿದೆ. ಅಂತರ್​ ಜಿಲ್ಲಾ ಸಂಚಾರಕ್ಕೂ ನಿರ್ಬಂಧವೇರಲಾಗಿದೆ. ಸಂಚಾರಕ್ಕೆ ಯಾವುದೇ ಪಾಸ್​ ವ್ಯವಸ್ಥೆ ಇರುವುದಿಲ್ಲ. ರೈಲ್ವೆ, ವಿಮಾನ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಕಡಿವಾಣ ಹಾಕುವ ದೃಷ್ಟಿಯಿಂದ ಲಾಕ್​ಡೌನ್​ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ಯಡಿಯೂಪರಪ್ಪ ತಿಳಿಸಿದರು. ರಸ್ತೆ ಕಾಮಗಾರಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.  ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಬಾರ್​ಗಳಲ್ಲಿ ಪಾರ್ಸಲ್​ಗೆ ಅವಕಾಶ ನೀಡಲಾಗಿದೆ. ಹೋಟೆಲ್​ ​,  ರೆಸ್ಟೋರೆಂಟ್​​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅನುಮತಿ ನೀಡಲಾಗಿದೆ. ಆಸ್ಪತ್ರೆಗಳು, ಮೆಡಿಕಲ್​ ಶಾಪ್​ಗಳು, ಬ್ಯಾಂಕ್​ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.  ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಲಾಗಿದ್ದು, ಕಾರ್ಮಿಕರು ಬೆಂಗಳೂರು ತೊರೆಯುವುದು ಬೇಡ ಎಂದು ಸಿಎಂ ಮನವಿ ಮಾಡಿದರು.

ಹೋಟೆಲ್​​ನಿಂದ ಪಾರ್ಸಲ್​​ ಅಥವಾ ತರಕಾರಿ ತರಲು ವಾಹನ ತೆಗೆದುಕೊಂಡು ಹೋಗುವಂತಿಲ್ಲ.  ಅಕ್ಕಪಕ್ಕದ ಅಂಗಡಿಗಳಲ್ಲೇ‌ ಖರೀದಿ ಮಾಡಬೇಕು. ಏರ್‌ಪೋರ್ಟ್, ರೈಲ್ವೇ ನಿಲ್ದಾಣಕ್ಕೆ‌ ಮಾತ್ರ ವಾಹನ ಬಳಕೆ ಮಾಡಬಹುದು.   ಈ ಕಾಮರ್ಸ್ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.  ತುರ್ತು  ಕಾರಣವನ್ನು ಧೃಡಪಡಿಸಿದರೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಇನ್ನು ಗಾರ್ಮೆಂಟ್ಸ್​ಗಳು  ಸೇರಿದಂತೆ  ಕೈಗಾರಿಕೆಗಳ ಮೇಲೆ ನಿರ್ಬಂಧವೇರಲಾಗಿದೆ. ಆದರೆ ಅಗತ್ಯ ವಸ್ತುಗಳ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ.

ಈಗಾಗಲೇ ಕೊರೋನಾ ಕರ್ಫ್ಯೂನಲ್ಲಿ ಜಾರಿಯಲ್ಲಿರುವ ಮೆಟ್ರೋ ಸಂಚಾರ ಬಂದ್​, ಸರ್ಕಾರಿ-ಖಾಸಗಿ ಬಸ್​ಗಳ ಸಂಚಾರಕ್ಕೆ ನಿರ್ಬಂಧ ಲಾಕ್​ಡೌನ್​​ ವೇಳೆಯೂ ಮುಂದುವರೆಯಲಿದೆ.  ಟ್ಯಾಕ್ಸಿ, ಆಟೋ ಸಂಚಾರ ಇರುವುದಿಲ್ಲ. ಮದುವೆ-ಸಮಾರಂಭಗಳು, ಅಂತ್ಯಸಂಸ್ಕಾರಗಳ ಮೇಲಿನ ನಿರ್ಬಂಧವೂ ಮುಂದುವರೆಯಲಿದೆ. ಶಾಲಾ-ಕಾಲೇಜುಗಳು ಬಂದ್​ ಇರಲಿವೆ. ರಾಜ್ಯದಲ್ಲಿ ಲಾಕ್​ಡೌನ್​ ವೇಳೆ ಯಾವುದೇ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ.

ಈಗಾಗಲೇ ಕೊರೋನಾ ಕರ್ಫ್ಯೂನಲ್ಲಿ ಬಂದ್​ ಆಗಿರುವ ಮಾಲ್​ಗಳು, ಥಿಯೇಟರ್​ಗಳು, ಕ್ರೀಡಾಂಗಣಗಳು, ಈಜುಕೊಳಗಳು, ಸಲೂನ್​-ಬ್ಯೂಟಿಪಾರ್ಲರ್​ಗಳು, ಜಿಮ್​ಗಳು ಯಥಾಸ್ಥಿತಿಯಲ್ಲಿರಲಿವೆ. ದೇವಸ್ಥಾನಗಳು, ಧಾರ್ಮಿಕ ಸಮಾರಂಭ, ಜಾತ್ರೆಗಳು, ರಾಜಕೀಯ ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿ.ಎಸ್​.ಯಡಿಯೂಪರಪ್ಪ ಎಚ್ಚರಿಕೆ ನೀಡಿದರು.
Published by:Kavya V
First published: