ಬೆಂಗಳೂರು: ಕೊರೋನಾ ವೈರಸ್ ಎರಡನೇ ಅಲೆಯ ಅಬ್ಬರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ದಿನಕ್ಕೆ 30 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 20 ಸಾವಿರ ಪ್ರಕರಣಗಳು ಪ್ರತಿನಿತ್ಯ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಸಲಾಯಿತು. ಸಭೆಯಲ್ಲಿ ಲಾಕ್ಡೌನ್ ಹಾಗೂ ಎಲ್ಲರಿಗೂ ಉಚಿತ ಲಸಿಕೆ ವಿಚಾರವಾಗಿ ಮಹತ್ವದ ಚರ್ಚೆ ನಡೆಸಲಾಯಿತು.
ಈಗಾಗಲೇ ಹಲವು ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡಿವೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್, ಗೋವಾ, ಛತ್ತೀಸ್ಗಢ, ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಬಿಹಾರ ಹಾಗೂ ಸಿಕ್ಕಿಂನಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ಹಂಚಿಕೆ ಮಾಡುವುದಾಗಿ ಅಲ್ಲಿನ ರಾಜ್ಯ ಸರ್ಕಾರಗಳು ಘೋಷಣೆ ಮಾಡಿವೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಉಚಿತವಾಗಿ ಲಸಿಕೆ ನೀಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು.
ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಉಚಿತ ಲಸಿಕೆ ನೀಡಿ ನೆರವಿಗೆ ಬನ್ನಿ ಎಂದು
ಸಾರ್ವಜನಿಕ ವಲಯದಿಂದ ಹಾಗೂ ಪ್ರತಿಪಕ್ಷಗಳಿಂದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ನಿರಂತರ ಒತ್ತಡ ಹಾಕಲಾಗಿತ್ತು. ಕೋವಿಡ್ನಿಂದ ಜನ ನಲುಗಿ ಹೋಗಿದ್ದಾರೆ. ಬಡಜನರು ಹಣ ಕೊಟ್ಟು ಲಸಿಕೆ ಪಡೆಯಲು ಸಾಧ್ಯವಿಲ್ಲ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಸರ್ಕಾರವೇ ಮುಂದೆ ಬಂದು ಉಚಿತ ಲಸಿಕೆ ನೀಡುವಂತೆ ಸಿಎಂಗೆ ಆಂತರಿಕವಾಗಿ ಸ್ವಪಕ್ಷೀಯರಿಂದಲೂ ಒತ್ತಡ ಹಾಕಿದ್ದರು.
ಈಗಾಗಲೇ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷಗಳೂ ಮುಗಿಬಿದ್ದಿದ್ದವು. ಆಕ್ಸಿಜನ್, ರೆಮೆಡಿಸಿವಿರ್ ಇಂಜಕ್ಷನ್, ಬೆಡ್, ಐಸಿಯು, ಆ್ಯಂಬುಲೆನ್ಸ್ ಕೊರತೆ ಇವುಗಳಿಂದ ಜನ ಬೇಸತ್ತಿದ್ದಾರೆ. ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡುತ್ತಿದೆ. ಇಂಹಹ ಸಂದರ್ಭದಲ್ಲಿ ಲಸಿಕೆ ಆದರೂ ಉಚಿತವಾಗಿ ಕೊಡುವಂತೆ ಸಿಎಂ ಬಿಎಸ್ವೈಗೆ ಆಪ್ತರೂ ಸಹ ಸಲಹೆ ಮಾಡಿದ್ದರು.
ಇದನ್ನು ಓದಿ: Krnataka Lockdown: ಕರ್ನಾಟಕದಲ್ಲಿ 14 ದಿನಗಳ ಕಾಲ ಲಾಕ್ಡೌನ್; ಯಾವುದಕ್ಕೆಲ್ಲಾ ನಿರ್ಬಂಧ? ಯಾವುದಕ್ಕೆ ಅನುಮತಿ?
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಸಚಿವರು ಹಾಗೂ ಸಿಎಂ ಚರ್ಚೆ ನಡೆಸಿ, ರಾಜ್ಯದ ಎಲ್ಲ ಜನರಿಗೂ ಉಚಿತವಾಗಿ ಲಸಿಕೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಸಚಿವ ಸಂಪುಟ ಸಭೆ ಮುಕ್ತಾಯಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದಾಗಿದ್ದು, 18ರಿಂದ 45 ವರ್ಷದವರೆಗಿನ ಎಲ್ಲ ಜನರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ