Chikmagalur: ಫೋನ್ ಮಾಡಿದ್ರೆ ಬರುತ್ತೆ ಊಟ!; ಚಿಕ್ಕಮಗಳೂರಿನಲ್ಲಿ ಹಸಿದವರ ಮನೆಗೆ ಊಟ ತಲುಪಿಸುತ್ತಿದೆ ಸಹಾಯ್ ತಂಡ

Chikmagalur Coronavirus | ಚಿಕ್ಕಮಗಳೂರು ನಗರದ ಸಹಾಯ್ ಅನ್ನೋ ತಂಡ ಕಳೆದ 20 ದಿನಗಳಿಂದ ಜನರ ಹಸಿವನ್ನ ನೀಗಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ನೀವು ಮನೆಯಲ್ಲೇ ಲಾಕ್ ಆಗಿದ್ದರೂ ಒಂದ್ ಕಾಲ್ ಮಾಡಿದ್ರೆ ಸಾಕು ಊಟ ಬರುತ್ತದೆ.

ಚಿಕ್ಕಮಗಳೂರಿನಲ್ಲಿ ಊಟ ಹಂಚುತ್ತಿರುವ ಸಹಾಯ್ ತಂಡ

ಚಿಕ್ಕಮಗಳೂರಿನಲ್ಲಿ ಊಟ ಹಂಚುತ್ತಿರುವ ಸಹಾಯ್ ತಂಡ

  • Share this:
ಚಿಕ್ಕಮಗಳೂರು : ಒಂದೆಡೆ ಹೆಮ್ಮಾರಿ ಕೊರೋನಾದಿಂದ ಜನ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಲಾಕ್​ಡೌನ್​ನಿಂದ ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದೆರಡು ತಿಂಗಳ ಜನತಾ ಕರ್ಫ್ಯೂ, ಲಾಕ್​ಡೌನ್ ವೇಳೆಯಲ್ಲಿ ಜನಸಾಮಾನ್ಯರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೆಲವರು ದುಡಿಮೆಯೇ ಇಲ್ಲದೆ ಹಸಿವಿನಿಂದ ಹೈರಾಣಾದರೆ, ಮತ್ತೆ ಕೆಲವರಿಗೆ ಹೋಟೆಲ್​ಗಳಿಲ್ಲದ ಕಾರಣಕ್ಕೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿಯಂತಾಯ್ತು. ಆದರೆ, ನೀವು ಚಿಂತೆ ಮಾಡ್ಬೇಡಿ. ಉಪವಾಸವೂ ಇರಬೇಡಿ. ಈ ನಂಬರ್ ಕರೆ ಮಾಡಿ ನಿಮ್ಮ ಹೊಟ್ಟೆ ನಾವು ತುಂಬಿಸ್ತೀವಿ ಅಂತಿದ್ದಾರೆ ಕಾಫಿನಾಡ ಸಹಾಯ್ ತಂಡದ ಸದಸ್ಯರು.

ಕೊರೋನಾ ಸಮಯದಲ್ಲಿ ಕಳೆದೊಂದು ವರ್ಷದಿಂದ ಅನೇಕ ಸಂಘಟನೆಗಳು, ತಂಡಗಳು, ಆಸಕ್ತರು ನಾನಾ ರೀತಿಯಲ್ಲಿ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ಸಮುದಾಯಗಳಿಗೆ ಬದುಕಲು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಚಿಕ್ಕಮಗಳೂರು ನಗರದ ಸಹಾಯ್ ಅನ್ನೋ ತಂಡ ಕಳೆದ 20 ದಿನಗಳಿಂದ ಜನರ ಹಸಿವನ್ನ ನೀಗಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ನೀವು ಮನೆಯಲ್ಲೇ ಲಾಕ್ ಆಗಿದ್ದರೂ ಒಂದ್ ಕಾಲ್ ಮಾಡಿದ್ರೆ ಸಾಕು ಊಟ ಬರುತ್ತದೆ.

ದುಡಿಮೆಯೇ ಇಲ್ಲದೆ ಊಟಕ್ಕೆ ಪರದಾಡ್ತಿದ್ದರೂ ನೋ ಪ್ರಾಬ್ಲಂ, ಒಂದು ಪೋನ್ ಕಾಲ್ ಗೆ ಊಟ ರೆಡಿಯಾಗಿರುತ್ತದೆ. ಇನ್ನು ಆಸ್ಪತ್ರೆಗೆ ಬಂದ ಜನ ಅಯ್ಯೋ ಹೋಟೆಲ್ ಇಲ್ಲ ಅಂತ ಚಿಂತಿಸುವಂತಿಲ್ಲ. ಆಸ್ಪತ್ರೆ ಮುಂಭಾಗವಿರೋ ಬ್ಯಾನರ್ ನೋಡಿ ಒಂದು ಫೋನ್ ಮಾಡಿದರೆ ಊಟ ಬಂದೇ ಬಿಡುತ್ತದೆ. ಯಾರೂ ಕೂಡ ಹಸಿವಿನಿಂದ ಸಂಕಟ ಅನುಭವಿಸಬಾರದು ಅನ್ನೋದು ಈ ಸಹಾಯ್ ತಂಡದ ಗುರಿ. ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ಶುಚಿ-ರುಚಿಯಾದ ಅಡುಗೆ ತಯಾರಿಸಿ ನಗರ ಸೇರಿದಂತೆ ಅಕ್ಕ-ಪಕ್ಕದ ಹಳ್ಳಿಗಳಿಗೂ ಊಟ ಪಾರ್ಸೆಲ್ ಹೋಗುತ್ತದೆ. ತಂಡದ ಸದಸ್ಯರು ಕರೆ ಮಾಡಿದ ಸ್ಥಳಕ್ಕೆ ಹೋಗಿ ಊಟವನ್ನ ಕೊಟ್ಟು ಬರುತ್ತಿದ್ದಾರೆ.

ಇದನ್ನೂ ಓದಿ: Chikmagalur Accident: ಅಪಘಾತವಾಗಿ ಆರೋಗ್ಯಾಧಿಕಾರಿಯ ಪ್ರಾಣ ಹೋದರೂ ಮಾನವೀಯತೆ ತೋರದ ತರೀಕೆರೆ ಶಾಸಕ ಸುರೇಶ್

ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಠಿಣ ಲಾಕ್ಡೌನ್ ಇರೋದ್ರಿಂದ ಜನ ಅನುಭವಿಸ್ತಿರೋ ಕಷ್ಟ ಒಂದೆರಡಲ್ಲ. ಹೊರಗಡೆ ದುಡಿಯೋಕು ಹೋಗದ ಪರಿಸ್ಥಿತಿ ಅನೇಕರಿಗೆ ಎದುರಾಗಿದೆ. ನಿಜವಾಗಲೂ ಸಂಕಷ್ಟದಲ್ಲಿದ್ದು ಊಟ-ತಿಂಡಿಗಾಗಿ ಕರೆ ಮಾಡಿದರೆ ಈ ತಂಡದ ಸದಸ್ಯರು ಮನೆ ಬಾಗಿಲಿಗೆ ಹೋಗಿ ಊಟ-ತಿಂಡಿ ಕೊಡ್ತಿದ್ದಾರೆ. ಆದ್ರೆ, ಬೆಳಗ್ಗೆ ತಿಂಡಿ ಬೇಕು ಅಂದ್ರೆ ರಾತ್ರಿಯೇ ಕರೆ ಮಾಡಿ ಹೇಳಬೇಕು. ಮಧ್ಯಾಹ್ನದ ಊಟ ಬೇಕು ಅಂದ್ರೆ ಬೆಳಗ್ಗೆ 10 ಗಂಟೆಯೊಳಗೆ ಕರೆ ಮಾಡಿ ತಿಳಿಸಬೇಕು. ರಾತ್ರಿಗೂ ಅಗತ್ಯವಿದ್ರೆ ಮೊದಲೇ ಹೇಳಿದ್ರೆ ಊಟವನ್ನ ರೆಡಿ ಮಾಡಿ ಕೊಡ್ತಾರೆ ಈ ಸಹಾಯ್ ತಂಡ. ಯಾವ-ಯಾವ ಸ್ಥಳಗಳಿಗೆ ಎಷ್ಟೆಷ್ಟು ಊಟ ಬೇಕು ಅಂತಾ ಪಟ್ಟಿ ಮಾಡಿ, ಒಂದೊಂದು ಮಾರ್ಗದ ಕಡೆ ಒಂದೊಂದು ತಂಡ ಹೋಗಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

ಒಟ್ಟಾರೆ, ಜಿಲ್ಲಾಡಳಿತ ದಿನಸಿ-ತರಕಾರಿ ಅಂಗಡಿಗಳಿಗೆ ಕೇವಲ ಹೋಮ್ ಡೆಲಿವರಿಗೆ ಮಾತ್ರ ಅವಕಾಶ ಕೊಟ್ಟಿರೋದ್ರಿಂದ ನಗರದಲ್ಲಿ ಜನಸಾಮಾನ್ಯರು ಪರದಾಟ ನಡೆಸುವಂತಾಗಿದೆ. ಈ ಮಧ್ಯೆ ಊಟದ ರುಚಿಯನ್ನ ಸವಿದ ಜನ ತಂಡದ ಸದಸ್ಯರಿಗೆ ಕರೆ, ಮೆಸೇಜ್ ಮಾಡಿ ಕೃತಜ್ಞತೆ ಸಲ್ಲಿಸ್ತಿರೋದು ತಂಡದ ಸದಸ್ಯರಲ್ಲಿ ಮತ್ತಷ್ಟು ಹುರುಪು ತರಿಸಿದೆ. ಯಾರೂ ಹಸಿವಿನಿಂದ ಪರದಾಟ ನಡೆಸಬಾರದು, ಊಟಕ್ಕೆ ಸಮಸ್ಯೆ ಆಗಬಾರದು ಅಂತ ಸಹಾಯ್ ತಂಡ ಎಲ್ಲೆಡೆ ಸಂಚರಿಸಿ ಜನರ ಹಸಿವಿನ ದಾಹವನ್ನ ನೀಗಿಸುತ್ತಿರೋದು ನಿಜಕ್ಕೂ ಶ್ಲಾಘನೀಯ.

(ವರದಿ: ವೀರೇಶ್ ಹೆಚ್ ಜಿ)
Published by:Sushma Chakre
First published: