HOME » NEWS » Coronavirus-latest-news » CHIEF MINISTER BS YEDIYURAPPA HAS TESTED POSITIVE FOR COVID 19 AGAIN SESR

BS Yediyurappa: ಯಡಿಯೂರಪ್ಪಗೆ ಮತ್ತೆ ಕೋವಿಡ್; ಮಸ್ಕಿಯಲ್ಲಿ ನಿರ್ಲಕ್ಷ್ಯ ತೋರಿ ಸೋಂಕು ಅಂಟಿಸಿಕೊಂಡರಾ ಸಿಎಂ?

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಜನರಿಗೆ ಎಚ್ಚರಿಕೆಯಿಂದ ಇರಿ ಎಂದು ಜಾಗೃತಿ ಮೂಡಿಸುತ್ತಿದ್ದ ಸಿಎಂ ಬಿಎಸ್​ ಯಡಿಯೂರಪ್ಪ ಅವರೇ ಕೊರೋನಾ ಸೋಂಕಿನ ವಿಷಯದಲ್ಲಿ ನಿರ್ಲಕ್ಷ್ಯ ತಾಳಿದ್ರಾ ಎಂಬ ಪ್ರಶ್ನೆ ಕಾಡುತ್ತಿದೆ

news18-kannada
Updated:April 16, 2021, 2:57 PM IST
BS Yediyurappa: ಯಡಿಯೂರಪ್ಪಗೆ ಮತ್ತೆ ಕೋವಿಡ್; ಮಸ್ಕಿಯಲ್ಲಿ ನಿರ್ಲಕ್ಷ್ಯ ತೋರಿ ಸೋಂಕು ಅಂಟಿಸಿಕೊಂಡರಾ ಸಿಎಂ?
ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು (ಏ. 16): ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರಿಗೆ ಎರಡನೇ ಬಾರಿ ಕೊರೋನಾ ಸೋಂಕು ದೃಢವಾಗಿದೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಇಂದು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ಈ ವೇಳೆ ಅವರಿಗೆ ಸೋಂಕು ದೃಢಪಟ್ಟಿದೆ. ಕಳೆದ ಆಗಸ್ಟ್​ನಲ್ಲಿ ಸೋಂಕಿಗೆ ತುತ್ತಾಗಿದ್ದ ಅವರು  ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿ ಮರಳಿದ್ದರು. ಈಗ ಮತ್ತೊಮ್ಮೆ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಮತ್ತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆ ಅವರ ಸಂಪರ್ಕದಲ್ಲಿದ್ದ ಮಂತ್ರಿಗಳಿಗೂ ಕ್ವಾರಂಟೈನ್​ಗೆ ಒಳಗಾಗುವಂತೆ ಸೂಚಿಸಲಾಗಿದೆ. 

ಜ್ವರದಿಂದ ಬಳಲುತ್ತಿದ್ದರೂ ನಿರ್ಲಕ್ಷ್ಯ ತಾಳಿದ್ರಾ ಸಿಎಂ?

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಜನರಿಗೆ ಎಚ್ಚರಿಕೆಯಿಂದ ಇರಿ ಎಂದು ಜಾಗೃತಿ ಮೂಡಿಸುತ್ತಿದ್ದ ಸಿಎಂ ಬಿಎಸ್​ ಯಡಿಯೂರಪ್ಪ ಅವರೇ ಕೊರೋನಾ ಸೋಂಕಿನ ವಿಷಯದಲ್ಲಿ ನಿರ್ಲಕ್ಷ್ಯ ತಾಳಿದ್ರಾ ಎಂಬ ಪ್ರಶ್ನೆ ಕಾಡುತ್ತಿದೆ. ಕಾರಣ ಸಿಎಂ ಕಳೆದ ಮೂರು ದಿನಗಳಿಂದಲೂ ಜ್ವರದಿಂದ ಬಳಲುತ್ತಿದ್ದರು. ಈ ಜ್ವರದ ನಡುವೆಯೂ ಅವರು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಅಬ್ಬರದ ಪ್ರಚಾರದಲ್ಲಿ  ಭಾಗಿಯಾಗಿದ್ದರು. ಈ ಮೂಲಕ ಅನೇಕರಿಗೆ ಸೋಂಕು ಹಬ್ಬಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಯುಗಾದಿ ಹಬ್ಬದ ನಿಮಿತ್ತ ಚುನಾವಣಾ ಪ್ರಚಾರಕ್ಕೆ ಗಡುವು ನೀಡಿದ್ದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬುಧವಾರದಿಂದ ಎರಡು ದಿನ ಅಬ್ಬರ ಪ್ರಚಾರ ನಡೆಸಿದ್ದರು. ಈ ವೇಳೆ ಅವರು 99 ಡಿಗ್ರಿ ಜ್ವರದಿಂದ ಬಳಲುತ್ತಿದ್ದರು. ಈ ಜ್ವರದ ನಡುವೆಯೂ ಅವರು ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ರೋಡ್​ ಶೋ, ಸಮಾವೇಶದಲ್ಲಿ ಮತಪ್ರಚಾರ ನಡೆಸಿದ್ದರು. ಸಿಎಂ ಪ್ರಚಾರದ ವೇಳೆ ಮಾಸ್ಕ್​ ಹೊರತಾಗಿ ಯಾವುದೇ ಸಾಮಾಜಿಕ ಅಂತರವೂ ಕಂಡು ಬಂದಿಲ್ಲ. ಮಂಗಳವಾರ ಜ್ವರ ತಗ್ಗದ ಹಿನ್ನಲೆ ಅವರು ಅದೇ ದಿನ ರಾತ್ರಿ ವೈದ್ಯಕೀಯ ತಪಾಸಣೆಗೆ ಕೂಡ ಒಳಗಾಗಿದ್ದರು. ಬಳಿಕ ಬಹಿರಂಗ ಚುನಾವಣಾದ ಅಂತಿಮ ದಿನದ ಪ್ರಚಾರದಲ್ಲೂ ಜ್ವರದ ನಡುವೆಯೂ ಮತ್ತೆ ಪ್ರಚಾರ ನಡೆಸಿದ್ದರು. ಈ ವೇಳೆಯೇ ಅವರಿಗೆ ಕೋವಿಡ್​ ಲಕ್ಷಣಗಳು ಕಂಡು ಬಂದಿದ್ದವು ಎನ್ನಲಾಗಿದೆ.

ಕೋವಿಡ್​ನ ಪ್ರಮುಖ ಲಕ್ಷಣಗಳಲ್ಲಿ ಒಂದು ಈ ಜ್ವರವಾಗಿದೆ. ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚರವಹಿಸಿ, ಪರೀಕ್ಷೆ ವರದಿ ಬರುವವರೆಗೂ ಪ್ರತ್ಯೇಕವಾಗಿರಬೇಕು ಎಂಬುದು ವೈದ್ಯರ ಸಲಹೆ. ಆದರೆ, ಚುನಾವಣೆ ಉದ್ದೇಶದಿಂದ ಸಿಎಂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರಾ ಎಂಬ ಮಾತು ಕೇಳಿ ಬರುತ್ತಿದೆ.

ಲಸಿಕೆ ಪಡೆದಿದ್ದ ಸಿಎಂ

ಜನರಿಗೆ ಮಾದರಿಯಾಗಬೇಕಿದ್ದ ಸಿಎಂ ಈ ವಿಷಯದಲ್ಲಿ ನಿರ್ಲಕ್ಷ್ಯ ತಾಳಲು ಕಾರಣ ಲಸಿಕೆಯಾ ಎಂಬ ಅನುಮಾನ ಕೂಡ ಸಹಜವಾಗಿ ಕಾಡುತ್ತದೆ. ಸಿಎಂ ಬಿಎಸ್​ ಯಡಿಯೂರಪ್ಪ ಕೋವಿಡ್​ ಲಸಿಕೆಯ ಮೊದಲ ಡೋಸ್​ ಅನ್ನು ಈಗಾಗಲೇ ಪಡೆದಿದ್ದಾರೆ. ಮೊದಲ ಡೋಸ್​ ಪಡೆದರೂ ಅನೇಕರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಲಸಿಕೆ ಮೊದಲ ಡೋಸ್​ ಪಡೆದ ಮಾತ್ರಕ್ಕೆ ಸೋಂಕಿನಿಂದ ಮುಕ್ತವಾಗುತ್ತೇವೆ ಎಂಬ ಬಗ್ಗೆ ಭರವಸೆ ಬೇಡ ಎಂದು ವೈದ್ಯರು ಕೂಡ ತಿಳಿ ಹೇಳುತ್ತಾರೆ. ಎರಡು ಡೋಸ್ ಲಸಿಕೆ ಪಡೆದರೂ ಸೋಂಕು ಬರುವ ಸಾಧ್ಯತೆ ಇದ್ದೇ ಇದೆ. ಈ ಕಿವಿಮಾತುಗಳನ್ನು ಸಿಎಂ ಮರೆತರಾ? ಇದೇ ಕಾರಣಕ್ಕೆ ಅವರು ಮತ್ತೊಮ್ಮೆ ಸೋಂಕಿಗೆ ತುತ್ತಾದರಾ ಎಂಬ ಟೀಕಿ ವ್ಯಕ್ತವಾಗುತ್ತಿದೆ.

77 ವರ್ಷದ ಸಿಎಂ ಎಷ್ಟೇ ಕ್ರಿಯಾಶೀಲರಾಗಿದ್ದರೂ ಕೋವಿಡ್​ ಪರಿಸ್ಥಿತಿ ಈಗಾಗಲೇ ದೇಶದ ಜನರನ್ನು ಹೈರಾಣಾಗಿಸಿದೆ. ರಾಜ್ಯದಲ್ಲಿ ಎರಡನೇ ಅಲೆ ತೀವ್ರವಾಗಿರುವ ಈ ಪರಿಸ್ಥಿತಿಯಲ್ಲಿ ಯಾವುದೇ ಕೋವಿಡ್​ ನಿಯಮ ಅನುಸರಿಸದೇ ಸಿಎಂ ನಡೆದು ಕೊಂಡ ವರ್ತನೆಗಳು ಎಷ್ಟು ಸಮಂಜಸ ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೇ ಜನಸಾಮಾನ್ಯರಿಗೆ ಮಾತ್ರವೇ ಈ ಕೋವಿಡ್​ ಮಾರ್ಗಸೂಚಿ ಎಂಬ ಜನ ಪ್ರಶ್ನೆ ಈ ಮತ್ತೊಮ್ಮೆ ಉದ್ಭವಿಸಿದೆ.
Published by: Seema R
First published: April 16, 2021, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories