ಬೆಂಗಳೂರು(ಮಾ.26): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ರಾಜ್ಯ ಸರ್ಕಾರ ಚಿಂತೆಗೀಡಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಳೆ ಮಹತ್ವದ ಸಚಿವ ಸಂಪುಟ ಸಭೆಯನ್ನುಕರೆದಿದ್ದಾರೆ.
ಇಡೀ ದೇಶ ಲಾಕ್ ಡೌನ್ ಇದ್ದರೂ ನಾಳೆ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ನಾಳಿನ ಸಭೆಯಲ್ಲಿ ಸಚಿವರಿಗೆ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ. ಲಾಕ್ ಡೌನ್ ಇದ್ದರೂ ಜನ ಮಾತು ಕೇಳುತ್ತಿಲ್ಲ. ಉಳಿದ 19 ದಿನಗಳು ಮಹತ್ವದ ದಿನಗಳಾಗಿದ್ದು, ಈ ದಿನಗಳಲ್ಲಿ ಜನರು ಎಚ್ಚರ ವಹಿಸುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ಸಿಗಲಿದೆ.
ಜನರು ಯಾರೂ ಮನೆಯಿಂದ ಹೊರಬಾರದು. ಅಗತ್ಯ ಸೇವೆಗಳಿಗೆ ಹೊರಗೆ ಬಂದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಜೊತೆಗೆ ಶಂಕಿತರ ನಿಗಾ ವಹಿಸಬೇಕಾಗಿದೆ. ಜನಸಾಮಾನ್ಯರಿಗೆ ಅಗತ್ಯ ಸೇವೆಗಳನ್ನು ಸರ್ಕಾರ ನೀಡಲೇಬೇಕು.
ಎಲ್ಲೂ ವ್ಯತ್ಯಯ ಆಗಬಾರದು. ಹಾಗಾಗಿ ಸಚಿವರು ತಮಗೆ ವಹಿಸಿರುವ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳು, ಪೊಲೀಸ್ ಇಲಾಖೆ, ಆಹಾರ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಕಂಟ್ರೋಲ್ ರೂಮ್ ಸಂಪರ್ಕದಲ್ಲೂ ಇರಬೇಕು. ಜನಜಾಗೃತಿ ಮೂಡಿಸಬೇಕು ಎಂಬ ಸೂಚನೆಗಳನ್ನು ನಾಳಿನ ಸಭೆಯಲ್ಲಿ ಸಿಎಂ ನೀಡುವರು ಎನ್ನಲಾಗಿದೆ.
ಕೇಂದ್ರದ ನೆರವನ್ನು ಆಯಾ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೂ ಸಚಿವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚಿಸಲಿದ್ದು, ನಾಳೆ ಕೊರೋನಾ ನಿಯಂತ್ರಣ ,ಮುನ್ನೆಚ್ಚರಿಕಾ ಕ್ರಮಗಳು, ಜನಸಾಮಾನ್ಯರಿಗೆ ಅನುಕೂಲವಾಗಲು ಪ್ಯಾಕೇಜ್ ಘೋಷಣೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ ಸರ್ಕಾರ ಈಗಾಗಲೆ 200 ಕೋಟಿ ಪ್ಯಾಕೇಜ್ ಘೋಷಿಸಿದೆ.
ಇದನ್ನೂ ಓದಿ :
ಕೊರೋನಾ ಭೀತಿ; ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿಗಳ ವಿಡಿಯೋ ಕಾನ್ಪೆರೆನ್ಸ್ನ ಮುಖ್ಯಾಂಶಗಳು
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಡಿಎಚ್ಓಗಳ ಜತೆಗೆ ವಿಡಿಯೋ ಸಂವಾದ ನಡೆಸಿದರು.ಈ ಸಂವಾದಲ್ಲಿ ಕೆಲವು ಸೂಚನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ