HOME » NEWS » Coronavirus-latest-news » CHANNAPATNAS MANGO MARKET BECOMING LOSS DUE TO CORONA EFFECT LG

ಕೊರೋನಾ ಎಫೆಕ್ಟ್​: ಚನ್ನಪಟ್ಟಣದಲ್ಲಿರುವ ಏಷ್ಯಾದ ನಂ. 2 ಮಾವು ಮಾರುಕಟ್ಟೆ ತತ್ತರ

ರಾಮನಗರ ಜಿಲ್ಲೆ ಚನ್ನಪಟ್ಟಣದ ಮ್ಯಾಂಗೋ ಮಾರ್ಕೆಟ್ ಏಷ್ಯಾದಲ್ಲೇ ಅತಿದೊಡ್ಡ 2ನೇ ಮಾವಿನಕಾಯಿ ಮಾರುಕಟ್ಟೆ ಎಂದೇ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ರಾಮನಗರ ಜಿಲ್ಲೆ ಸಹ ಮಾವು ಬೆಳೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ. ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಮಾವಿನಹಣ್ಣುಗಳು ಸರಿಸುಮಾರು 100 ಟನ್​ಗೂ ಅಧಿಕ ಲೋಡ್ ಒಂದು ದಿನಕ್ಕೆ ಬರುತ್ತಿತ್ತು.

Latha CG | news18-kannada
Updated:April 10, 2020, 6:01 PM IST
ಕೊರೋನಾ ಎಫೆಕ್ಟ್​: ಚನ್ನಪಟ್ಟಣದಲ್ಲಿರುವ ಏಷ್ಯಾದ ನಂ. 2 ಮಾವು ಮಾರುಕಟ್ಟೆ ತತ್ತರ
ಮಾವಿನ ಹಣ್ಣಿನ ಮಾರುಕಟ್ಟೆ
  • Share this:
ರಾಮನಗರ(ಏ.09): ಪ್ರತಿವರ್ಷ ಚನ್ನಪಟ್ಟಣದ ಮ್ಯಾಂಗೋ ಮಾರ್ಕೆಟ್‌ನಲ್ಲಿ ಏಪ್ರಿಲ್ ತಿಂಗಳಲ್ಲಿ ಮಾವಿನಹಣ್ಣು ಮಾರಾಟ ಅದ್ದೂರಿಯಾಗಿ ಇರುತ್ತಿತ್ತು. ಆದರೆ ಈ ಬಾರಿ ಕೊರೋನಾ ಏಟಿಗೆ ಮಾವಿನಕಾಯಿ ಮಾರ್ಕೆಟ್ ಸಂಪೂರ್ಣ ಸ್ತಬ್ಧವಾಗಿದೆ. ಟನ್‌ಗಟ್ಟಲೇ ಬರುತ್ತಿದ್ದ ಮಾವಿನಕಾಯಿಯ ಲಾರಿಗಳು, ಒಂದೆರಡಕ್ಕೆ ಸ್ಟಾಪ್ ಆಗಿವೆ. ಇದರಿಂದಾಗಿ ಮಾವಿನಕಾಯಿ ವರ್ತಕರಿಗೆ ಭಾರೀ ಪೆಟ್ಟು ಬಿದ್ದಿದೆ. ಬೆಳೆಗೆ ಬೆಂಬಲ ಬೆಲೆಸಿಗದೇ ರೈತರು ಕಂಗಾಲಾಗಿದ್ದಾರೆ. ನ್ಯೂಸ್ 18 ಜೊತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹೌದು, ರಾಮನಗರ ಜಿಲ್ಲೆ ಚನ್ನಪಟ್ಟಣದ ಮ್ಯಾಂಗೋ ಮಾರ್ಕೆಟ್ ಏಷ್ಯಾದಲ್ಲೇ ಅತಿದೊಡ್ಡ 2ನೇ ಮಾವಿನಕಾಯಿ ಮಾರುಕಟ್ಟೆ ಎಂದೇ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ರಾಮನಗರ ಜಿಲ್ಲೆ ಸಹ ಮಾವು ಬೆಳೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ. ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಮಾವಿನಹಣ್ಣುಗಳು ಸರಿಸುಮಾರು 100 ಟನ್​ಗೂ ಅಧಿಕ ಲೋಡ್ ಒಂದು ದಿನಕ್ಕೆ ಬರುತ್ತಿತ್ತು. 15 ದಿನಕ್ಕೂ ಹೆಚ್ಚು ಕಾಲ ಇಲ್ಲಿ ಮಾವಿನಕಾಯಿ ವ್ಯಾಪಾರ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೋನಾ ಏಟಿಗೆ ದಿನಕ್ಕೆ ಒಂದೆರಡು ಲೋಡ್ ಮಾವಿನಕಾಯಿ ಬರೋದು ಕಷ್ಟವಾಗಿದೆ. ಪ್ರತಿಬಾರಿ ಈ ಮಾರುಕಟ್ಟೆಯಲ್ಲಿನ ವರ್ತಕರು ರೈತರಿಂದ ಮಾವಿನಹಣ್ಣನ್ನ ಖರೀದಿ ಮಾಡಿ ಹೊರರಾಜ್ಯಗಳಿಗೆ ರಫ್ತು ಮಾಡುತ್ತಿದ್ದರು. ಆದರೆ ಈ ಬಾರಿ ಮಾರ್ಕೆಟ್‌ನಲ್ಲಿ ಮಾವಿನಹಣ್ಣುಗಳೇ ಇಲ್ಲದಿರುವ ಕಾರಣ ವರ್ತಕರಿಗೆ ಭಾರೀ ನಷ್ಟವಾಗಿದೆ. ಚನ್ನಪಟ್ಟಣ ಮಾರ್ಕೆಟ್‌ನಿಂದ ಮಧ್ಯಪ್ರದೇಶ, ಹಿಮಾಚಲಪ್ರದೇಶ, ಕೇರಳ, ರಾಜಸ್ಥಾನ, ಉತ್ತರಪ್ರದೇಶ, ನವದೆಹಲಿ ಸೇರಿದಂತೆ 15ಕ್ಕೂ ಹೆಚ್ಚು ಹೊರ ರಾಜ್ಯಗಳಿಗೆ  ಇಲ್ಲಿನ ಮಾವು ರಫ್ತಾಗುತ್ತಿತ್ತು. ಈ ಬಾರಿ ಕೊರೋನಾಯಿಂದಾಗಿ ಅದೆಲ್ಲವೂ ಬಂದ್ ಆಗಿದೆ ಎಂದು ಮಾರುಕಟ್ಟೆಯ ಮಾವು ವರ್ತಕ ಫರೀದ್ ಖಾನ್ ತಿಳಿಸಿದ್ದಾರೆ.

ಕೊರೋನಾ ಎಫೆಕ್ಟ್​​ನಿಂದಾಗಿ ಮಾವಿನಹಣ್ಣುಗಳ ಬೆಲೆಯೂ ಕೂಡ ಸಂಪೂರ್ಣ ಕುಸಿತ ಕಂಡಿದೆ. ಕೆ.ಜಿ.ಬಾದಾಮಿ ತಳಿಯ ಮಾವಿಗೆ ಕಳೆದ ವರ್ಷ 100 ರೂ.ನಿಂದ 150 ರೂ. ಇತ್ತು, ಆದರೆ ಈ ಬಾರಿ 45 ರೂ. ನಿಂದ 50 ರೂ.ಗೆ ಇಳಿದಿದೆ. ತೋತಾಪುರಿ 45ರೂ. ನಿಂದ 50 ರೂ. ಇತ್ತು.  ಈ ಬಾರಿ 12 ರಿಂದ 13 ರೂಪಾಯಿಗೆ ಇಳಿದಿದೆ. ಇನ್ನು ಮಲಗೋಬಾ ಮಾವಿನಹಣ್ಣು ಈ ಬಾರಿ ಮಾರ್ಕೆಟ್‌ಗೆ ಬಂದಿಲ್ಲ. ರಸಪುರಿ ಮಾವು 70 ರಿಂದ 80 ಇತ್ತು, ಈ ಬಾರಿ 30 ರಿಂದ 35 ಕ್ಕೆ ಕುಸಿದಿದೆ. ಸೇಂದೂರಾ ಹಣ್ಣು 60 ರಿಂದ 70 ಇತ್ತು, ಈ ಬಾರಿ 25 ರಿಂದ 35 ಕ್ಕೆ ಕುಸಿದಿದೆ. ಈ ಬೆಲೆ ಕುಸಿತದಿಂದಾಗಿ ಮಾವು ಬೆಳೆಗಾರರ ಜೊತೆಗೆ ಮಾವು ವರ್ತಕರಿಗೂ ಸಹ ದೊಡ್ಡಮಟ್ಟದಲ್ಲಿ ಸಂಕಷ್ಟ ಎದುರಾಗಿದೆ. ಜೊತೆಗೆ ಈ ಬಾರಿ ಹೊರರಾಜ್ಯಗಳಿಂದ ವ್ಯಾಪರಸ್ಥರು ಲಾಕ್‌ಡೌನ್ ಸಮಸ್ಯೆಯಿಂದ ಈ ಬಾರಿ ಮಾರ್ಕೆಟ್‌ಗೆ ಬರದಿರುವುದು ಕೂಡ ದೊಡ್ಡ ಸಮಸ್ಯೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರು ಹಾಗೂ ವರ್ತಕರಿಗೆ ಸಹಾಯ ಮಾಡಬೇಕೆಂದು ಮಾವು ಬೆಳೆಗಾರ ವಾಸಿಲ್ ಅಲಿ ಖಾನ್ ನ್ಯೂಸ್ 18 ಮೂಲಕ ಮನವಿ ಮಾಡಿದ್ದಾರೆ.

ಒಟ್ಟಾರೆ ವಿಶ್ವದಲ್ಲೇ ತನ್ನ ವಕ್ರದೃಷ್ಟಿ ಬೀರಿರುವ ಕೊರೋನಾ ವೈರಸ್‌ನಿಂದಾಗಿ ರೇಷ್ಮೆನಗರಿಯ ಮಾವು ಬೆಳೆಗಾರರು ಹಾಗೂ ವರ್ತಕರಿಗೂ ತೀರಾ ಸಂಕಷ್ಟವನ್ನುಂಟು ಮಾಡಿದೆ. ಆದರೆ ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಮನಹರಿಸಬೇಕೆಂಬುದೇ ನ್ಯೂಸ್ 18 ಕನ್ನಡದ ಆಶಯ.

ವರದಿ: ಎ.ಟಿ.ವೆಂಕಟೇಶ್
Youtube Video
First published: April 9, 2020, 7:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories