ಮಾರಕ ಕೊರೋನಾ ವೈರಸ್ ಕಟ್ಟಿ ಹಾಕಲು ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭ

ದೇಶದಲ್ಲೇ ಮೊದಲ ಬಾರಿಗೆ ನೆರೆಯ ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ ಯಾಗುತ್ತಿದ್ದಂತೆ ಇತ್ತ ಚಾಮರಾಜನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ರಾಜ್ಯದಲ್ಲೇ ಮೊದಲ ಬಾರಿಗೆ ಗಡಿ ಭಾಗದ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಕೇರಳದಿಂದ, ಬರುವ ಪ್ರತಿಯೊಬ್ಬ ಪ್ರಯಾಣಿಕನಿಗೂ ಸ್ಕ್ರೀನಿಂಗ್ ಹಾಗೂ ಆರೋಗ್ಯ ತಪಾಸಣೆ ಆರಂಭಿಸಲಾಯ್ತು. ಪ್ರತಿಯೊಂದು ವಾಹನದ ಮೇಲೂ ನಿಗಾ ಇರಿಸಲಾಯ್ತು.

HR Ramesh | news18-kannada
Updated:May 20, 2020, 7:06 PM IST
ಮಾರಕ ಕೊರೋನಾ ವೈರಸ್ ಕಟ್ಟಿ ಹಾಕಲು ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭ
ಚಾಮರಾಜನಗರ ಆಸ್ಪತ್ರೆ.
  • Share this:
ಚಾಮರಾಜನಗರ; ರಾಜ್ಯದ ಎಲ್ಲೆಡೆ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹಸಿರು ವಲಯದಲ್ಲಿದ್ದ ಹಲವು ಜಿಲ್ಲೆಗಳಿಗೂ ಕೊರೋನಾ ವಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಯಾವುದೇ ಸೋಂಕು ತಗಲುದೆ ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲೆಯನ್ನು ಹಸಿರು ವಲಯದಲ್ಲೇ ಉಳಿಸಿಕೊಳ್ಳಲು ಹಾಗೂ ಕೊರೋನಾ ಮಾರಿಯನ್ನು ಕಟ್ಟಿಹಾಕಲು ಜಿಲ್ಲಾಡಳಿತ ಎವರ್ ಗ್ರೀನ್ ಚಾಮರಾಜನಗರ ಎಂಬ ಅಭಿಯಾನ ಆರಂಭಿಸಿದೆ.

ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸುತ್ತಿದ್ದಂತೆ ಜಿಲ್ಲೆಯಲ್ಲಿ ಬಹುತೇಕ ಚಟುವಟಿಕೆಗಳು ಅರಂಭಗೊಂಡಿವೆ. ವಾಹನಗಳ ಸಂಚಾರ, ಜನರ ಓಡಾಟ ಹೆಚ್ಚಾಗಿದೆ. ಹೊರಗಿನಿಂದ ಬರುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೊರೋನಾ ಹರಡದಂತೆ ತಡೆಗಟ್ಟುವುದು ಸವಾಲಿನ ಕೆಲಸವಾಗಿದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರವನ್ನು ಹಸಿರು ಜಿಲ್ಲೆಯನ್ನಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎವರ್ ಗ್ರೀನ್ ಚಾಮರಾಜನಗರ ಎಂಬ ಅಭಿಯಾನ ಆರಂಭಿಸಿದೆ. ಲಾಕ್ ಡೌನ್ ನಿಯಮಗಳ ಪಾಲನೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಹೊರಗಿನಿಂದ ಬಂದವರನ್ನು ಗುರುತಿಸಿ ಮಾಹಿತಿ ನೀಡುವುದು ಹೀಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಈಗಾಗಲೇ ಜಿಲ್ಲೆಯ 130 ಗ್ರಾಮ ಪಂಚಾಯ್ತಿಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಈ ಟಾಸ್ಕ್ ಫೋರ್ಸ್​ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಕ್ರಿಯಾಶೀಲಗೊಳಿಸುವುದು, ಕೊರೋನಾ ವಾರಿಯರ್ಸ್​ಗಳನ್ನು ಜಾಗೃತ ಗೊಳಿಸುವುದು, ಲಾಕ್ ಡೌನ್ ನಿಯಮಗಳ ಪಾಲನೆಗೆ ನಿಯೋಜಿಸಲಾಗಿರುವ ಸೆಕ್ಟರ್ ಮ್ಯಾಜಿಸ್ಟ್ರೇಟ್​ಗಳಿಗೆ ಮತ್ತಷ್ಟು ಬಲ ನೀಡುವುದು, ಅಲ್ಲದೆ ಜಿಲ್ಲೆಯಲ್ಲಿರುವ 12 ಚೆಕ್ ಪೋಸ್ಟ್ ಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವುದು, ಸೇರಿದಂತೆ ಹತ್ತಾರು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ನ್ಯೂಸ್ 18 ಗೆ ತಿಳಿಸಿದ್ದಾರೆ.

ಕೊರೋನಾ ಹರಡದಂತೆ ವಿವಿಧ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಇದೊಂದು ಜನಾಂದೋಲವಾಗಿ ಪರಿವರ್ತನೆಯಾಗಬೇಕು. ಪ್ರತಿಯೊಬ್ಬರೂ ಕೊರೋನಾ ವಾರಿಯರ್ಸ್ ಆಗಬೇಕು. ಆ ಮೂಲಕ ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದ್ದಾರೆ.

ಕೊರೋನಾ ಕಟ್ಟಿಹಾಕಿರುವ ಜಿಲ್ಲಾಡಳಿತ

ಗಡಿ ಜಿಲ್ಲೆ ಚಾಮರಾಜನಗರ ಒಂದು ಕಡೆ ತಮಿಳುನಾಡು, ಇನ್ನೊಂದು ಕಡೆ ಕೇರಳ ಹಾಗೆಯೇ ಒಂದು ಬದಿಯಲ್ಲಿ ಮೈಸೂರು ಇನ್ನೊಂದು ಬದಿಯಲ್ಲಿ ಮಂಡ್ಯ ಜಿಲ್ಲೆ.. ಹೀಗೆ ಸುತ್ತಲೂ ರೆಡ್ ಝೋನ್​ಗಳಿಂದಲೇ ಸುತ್ತುವರಿದಿದೆ. ಅಲ್ಲದೆ, ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವವರ ಸಂಖ್ಯೆಯು ಹೆಚ್ಚಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಕೊರೋನಾ ಸೋಂಕು ತಗುಲದಂತೆ ಕಾಪಾಡುವುದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಜಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇವತ್ತಿನವರೆಗೂ ಕೊರೋನಾ ವಕ್ಕರಿಸದಂತೆ ನಿಗಾವಹಿಸಿದೆ.

ದೇಶದಲ್ಲೇ ಮೊದಲ ಬಾರಿಗೆ ನೆರೆಯ ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ ಯಾಗುತ್ತಿದ್ದಂತೆ ಇತ್ತ ಚಾಮರಾಜನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ರಾಜ್ಯದಲ್ಲೇ ಮೊದಲ ಬಾರಿಗೆ ಗಡಿ ಭಾಗದ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಕೇರಳದಿಂದ, ಬರುವ ಪ್ರತಿಯೊಬ್ಬ ಪ್ರಯಾಣಿಕನಿಗೂ ಸ್ಕ್ರೀನಿಂಗ್ ಹಾಗೂ ಆರೋಗ್ಯ ತಪಾಸಣೆ ಆರಂಭಿಸಲಾಯ್ತು. ಪ್ರತಿಯೊಂದು ವಾಹನದ ಮೇಲೂ ನಿಗಾ ಇರಿಸಲಾಯ್ತು.ಇದನ್ನು ಓದಿ: ವಿಶ್ವದಲ್ಲಿ 50 ಲಕ್ಷ ಗಡಿ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆ; 11ನೇ ಸ್ಥಾನದಲ್ಲಿ ಭಾರತ

ಇದಲ್ಲದೆ ಆರು ಅಂತರಜಿಲ್ಲಾ ಹಾಗೂ ಆರು ಅಂತರರಾಜ್ಯ ಚೆಕ್ ಪೋಸ್ಟ್ ಗಳ ನಿರ್ಮಾಣ, ಚೆಕ್ ಪೋಸ್ಟ್ ಗಳಲ್ಲಿ ಹೊರರಾಜ್ಯಗಳಿಂದ ಬರುವ ವಾಹನಗಳಿಗೆ ಸೋಂಕು ನಿವಾರಕ ದ್ರಾವಣ, ಚಾಮರಾಜನಗರ ಜಿಲ್ಲೆಗೆ ವಿದೇಶಗಳಿಂದ ಬಂದವರು, ತಬ್ಲೀಘಿ ಜಮಾತ್ ಸಂಪರ್ಕ ಹೊಂದಿದವರು, ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಹೊರ ರಾಜ್ಯಗಳಿಂದ ಬಂದವರಿಗೆ ಸಕಾಲದಲ್ಲಿ ಕ್ವಾರಂಟೈನ್, ನಿಯಮಿತವಾಗಿ SARI ಹಾಗೂ ILI ಸಮೀಕ್ಷೆ, ಪಟ್ಟಣ ಪ್ರದೇಶಗಳಲ್ಲಿ ನಾಕಾಬಂಧಿ, ಬಿಗಿಯಾದ ಪೊಲೀಸ್ ಬಂದೋಬಸ್ತ್, ಜನಸಂದಣಿ ತಪ್ಪಿಸಲು ಔಷಧಿಮಿತ್ರ ಯೋಜನೆ, ಹೀಗೆ ಹತ್ತು ಹಲವು ಕ್ರಮ ಕೈಗೊಳ್ಳುವ ಮೂಲಕ ಸದ್ಯದ ಮಟ್ಟಿಗೆ ಮಾರಕ ಕೊರೋನಾ ಕಟ್ಟಿ ಹಾಕಿರುವ ಜಿಲ್ಲಾಡಳಿತ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದೇ ರೀತಿಯ ಕೊರೊನಾ ಮುಕ್ತ ವಾತಾವರಣ ಮುಂದುವರಿಯಲು ಮುಂದಿನ ದಿನಗಳಲ್ಲಿ ಕೇವಲ ಜಿಲ್ಲಾಡಳಿತ ಅಷ್ಟೇ ಅಲ್ಲ, ಸಾರ್ವಜನಿಕರ ಜವಾಬ್ದಾರಿಯು ಮಹತ್ವದ್ದಾಗಿದೆ.

  • ವಿಶೇಷ ವರದಿ: ಎಸ್​.ಎಂ. ನಂದೀಶ್ 


First published: May 20, 2020, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading