Coronavirus: ಚಾಮರಾಜನಗರ ಕೃಷಿ ಕಾಲೇಜಿನ 15 ವಿದ್ಯಾರ್ಥಿಗಳಿಗೆ, ಬಿಳಿಗಿರಿರಂಗನಬೆಟ್ಟದ ಅರ್ಚಕರು ಸೇರಿದಂತೆ 12 ಸಿಬ್ಬಂದಿಗೆ ಕೊರೋನಾ ಸೋಂಕು

ಅರ್ಚಕರು ಹಾಗೂ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ದೇಗುಲವನ್ನು ಸ್ಯಾನಿಟೈಸ್ ಮಾಡಲಾಗಿದೆ. ತೀರ್ಥ ಪ್ರಸಾದ ಕೊಡುವುದನ್ನು ನಿಲ್ಲಿಸಲಾಗಿದ್ದು, ದಾಸೋಹ ಭವನದಲ್ಲೂ ಪ್ರಸಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ (ಏ.08): ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಇಲ್ಲಿನ  ಕೃಷಿ ಮಹಾವಿದ್ಯಾಲಯದ 15 ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಹಾಗು ಬಿಳಿಗಿರಿರಂಗನಬೆಟ್ಟದ ಅರ್ಚಕರು ಸೇರಿದಂತೆ 12 ಕ್ಕು ಹೆಚ್ಚು ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದ್ದು ಆತಂಕ ಮೂಡಿಸಿದೆ.

ಚಾಮರಾಜನಗರ ತಾಲೋಕಿನ ಹರದನಹಳ್ಳಿಯಲ್ಲಿರುವ ಬೆಂಗಳೂರು ಕೃಷಿ ವಿ.ವಿ.ಯ  ಕೃಷಿ ಮಹಾವಿದ್ಯಾಲಯದಲ್ಲಿ 95 ವಿದ್ಯಾರ್ಥಿಗಳಿದ್ದು ಈ ಪೈಕಿ 50 ಮಂದಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಲಾಗಿದ್ದು 15 ಮಂದಿಗೆ ಕೊರೋನಾ ದೃಢವಾಗಿದೆ. ಕೊರೋನಾ ಸೋಂಕಿತ ವಿದ್ಯಾರ್ಥಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ವಿದ್ಯಾರ್ಥಿಗಳು ಹಾಗು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಗೆ ಕ್ರಮ ವಹಿಸಲಾಗಿದೆ ಎ‌ಂದು ಡಿ.ಎಚ್.ಓ. ಡಾ.ಎಂ.ಸಿ.ರವಿ ತಿಳಿಸಿದ್ದಾರೆ

ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಡಿಎಚ್ಓ ಡಾ.ಎಂ.ಸಿ.ರವಿ ಕಾಲೇಜಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದರು.  ಕಾಲೇಜಿನ  ವಿಶೇಷಾಧಿಕಾರಿಗಳೊಡನೆ ಚರ್ಚಿಸಿ ಕೊರೋನಾ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸರ್ಕಾರ ಹೇಗೆ ನಡೆಸಬೇಕು ಅನ್ನೋದು ನನಗೆ ಗೊತ್ತಿದೆ; ಮಾಧ್ಯಮಗಳ ವಿರುದ್ಧ ಸಿಎಂ ಯಡಿಯೂರಪ್ಪ ಸಿಡಿಮಿಡಿ

ಇನ್ನೊಂದೆಡೆ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ಅರ್ಚಕರು ಸೇರಿದಂತೆ 12 ಕ್ಕು ಹೆಚ್ಚು ಮಂದಿಗೆ ಕೊರೋನಾ ಸೋಂಕು ತಗುಲಿದೆ.  ದೇಗುಲ ಜೀರ್ಣೋದ್ಧಾರಗೊಂಡಿರುವ ಹಿನ್ನಲೆಯಲ್ಲಿ  ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಏಪ್ರಿಲ್ 2 ರಂದು ದೇವಾಲಯದ ಮಹಾ ಸಂಪ್ರೋಕ್ಷಣೆ ಕಾರ್ಯ ಕ್ರಮ ನಡೆದಿತ್ತು . ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸುರೇಶ್ ಕುಮಾರ್, ಶಾಸಕರಾದ ಎನ್ ಮಹೇಶ್, ಆರ್ ನರೇಂದ್ರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮೊದಲಾದವರು ಭಾಗಿಯಾಗಿದ್ದರು. ಮರು ದಿನವೇ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಶೀತ, ನೆಗಡಿ, ಗಂಟಲು ನೋವು ಕಾಣಿಸಿಕೊಂಡಿತ್ತು  ಈ ಹಿನ್ನಲೆಯಲ್ಲಿ ಆವರ ಗಂಟಲುದ್ರವ ಮಾದರಿಯನ್ನು ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಪಡಿಸಕಾಗಿ ಕೊರೋನಾ ದೃಢಪಟ್ಟು   ಅವರು ಈಗಾಗಲೇ ಹೋಮ್ ಐಸೊಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಕಾರ್ಯಕ್ರಮ ಮುಗಿದ ಬಳಿಕ ನೂರಾರು ಮಂದಿ ದೇವಾಲಯಕ್ಕೆ  ಭೇಟಿ ನೀಡಿ ದೇವರಿಗೆ ಪೂಜೆ ಮಾಡಿಸಿ ದರ್ಶನ ಪಡೆದಿದ್ದು ಇವರಲಿ ಆತಂಕ ಶುರುವಾಗಿದೆ. ಅರ್ಚಕರು ಹಾಗೂ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ದೇಗುಲವನ್ನು ಸ್ಯಾನಿಟೈಸ್ ಮಾಡಲಾಗಿದೆ. ತೀರ್ಥ ಪ್ರಸಾದ ಕೊಡುವುದನ್ನು ನಿಲ್ಲಿಸಲಾಗಿದ್ದು, ದಾಸೋಹ ಭವನದಲ್ಲೂ ಪ್ರಸಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅರ್ಚಕರು ಹಾಗು ಸಿಬ್ಬಂದಿಗೆ ಕೊರೋನಾ  ಸೋಂಕು ತಗುಲಿರುವ ಹಿನ್ನಲೆಯಲ್ಲಿ ದೇಗುಲಕ್ಕೆ ಬರುವ  ಭಕ್ತರ ಸಂಖ್ಯೆಯಲ್ಲು ಇಳಿಮುಖವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿಬಿಳಿಗಿರಿರಂಗನಾಥಸ್ವಾಮಿ ದೇವಾಲಯವನ್ನು   ಕೆಲದಿನಗಳ ಕಾಲ ಸೀಲ್ ಡೌನ್ ಮಾಡಲು ಕ್ರಮ ವಹಿಸಲಾಗಿದೆ.

ಜಿಲ್ಲೆಯಲ್ಲಿ ನಿನ್ನೆಯವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 142 ಇದ್ದು ಇಂದು ಈ ಸಂಖ್ಯೆ 200 ರ ಗಡಿ ದಾಟುವ ಸಾಧ್ಯತೆ ಇದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಪ್ರತಿದಿನ ಬೆರಳೆಣಿಕೆಯಷ್ಟು ಮಾತ್ರ ವರದಿಯಾಗುತ್ತಿದ್ದ ಕೋವಿಡ್ ಪ್ರಕರಣಗಳಲ್ಲಿ  ಮೂರ್ನಾಲ್ಕು ದಿನಗಳಿಂದ ಈಚೆಗೆ ದಿಢೀರ್ ಏರಿಕೆ ಕಂಡು ಬಂದಿರುವುದು ಆತಂಕ ಮೂಡಿಸಿದೆ.  ಕಳೆದ ವಾರ ಶೇಕಡಾ 1 ರ ಆಸುಪಾಸಿನಲ್ಲಿದ್ದ  ಪಾಸಿಟಿವಿಟಿ ದರ  ಈಗ ಶೇಕಡ 4.6 ಆಗಿದೆ. ಇದೇ ರೀತಿ ಮುಂದುವರಿದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಗಳಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ರೋಗ ಲಕ್ಷಣ ಕಂಡ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಬೇಕು. ಸೋಂಕು ಹರಡದಂತೆ  ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಸ್ವಾನಿಟೈಸರ್ ನಿಂದ ಆಗಾಗ್ಗೆ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಯ ಕೋವಿಡ್ ನೂಡಲ್ ಅಧಿಕಾರಿ ಡಾ.ಎಂ. ಮಹೇಶ್ ತಿಳಿಸಿದ್ದಾರೆ.
Published by:Latha CG
First published: