ಇಡೀ ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಕ್ರಮ

ಗಂಟಲು  ದ್ರವ ಪರೀಕ್ಷೆಗೆ ಕೊಟ್ಟವರು ಪರೀಕ್ಷಾವರದಿ ಬರುವವರೆಗೂ ಈ ಕೋವಿಡ್ ನಿಗಾವಣೆ ಕೇಂದ್ರದಲ್ಲೇ ಇರಬೇಕು.  ಪರೀಕ್ಷಾ ವರದಿ  ಬಂದ ನಂತರ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಲಾಗುವುದು. ಪಾಸಿಟಿವ್ ಬಂದರೆ ತಕ್ಷಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

news18-kannada
Updated:June 30, 2020, 3:28 PM IST
ಇಡೀ ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಕ್ರಮ
ಚಾಮರಾಜನಗರ ಜಿಲ್ಲಾ ಆಸ್ಪತ್ರೆ
  • Share this:
ಚಾಮರಾಜನಗರ (ಜೂ.30): ಚಾಮರಾಜನಗರ ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ  ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ  ಇಡೀ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಜೆ.ಎಸ್.ಎಸ್. ಅಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಕೊರೋನಾ ಸೋಂಕಿತರ ಚಿಕಿತ್ಸೆಗೆ ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಒಳಗೊಂಡ ಸುಸಜ್ಜಿತ 100 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಕೋವಿಡ್-19 ಆರೋಗ್ಯ ಕೇಂದ್ರವಿದೆ. ಆದರೆ ಇನ್ನು ಮುಂದೆ ನಿತ್ಯ 10 ರಿಂದ 15 ಹೊಸ ಕೊರೋನಾ ಪ್ರಕರಣಗಳು ಕಂಡು ಬರುವ ಸಾಧ್ಯತೆ ಇರುವುದರಿಂದ ಹಾಸಿಗೆಗಳ ಕೊರತೆಯಿಂದ ಎಲ್ಲರಿಗೂ ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಾಲಿ ಇರುವ 100 ಹಾಸಿಗೆಗಳ  ಸಾಮರ್ಥ್ಯವನ್ನು  300 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಳ ಮಾಡಿ ಇಡೀ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.

ಹಾಗಾಗಿ ಇನ್ನು ಮುಂದೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ  ಬರುವ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಜೆ.ಎಸ್.ಎಸ್.ಖಾಸಗಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೆ ಸರ್ಕಾರ ಈ ಒಪ್ಪಂದಕ್ಕೆ ಅನುಮೋದನೆ ನೀಡುವ ನಿರೀಕ್ಷೆ ಇದೆ. ಅನುಮೋದನೆ ಸಿಕ್ಕ ಕೂಡಲೇ  ಇಡೀ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು ಹಾಗೂ ನಾನ್ ಕೋವಿಡ್ ರೋಗಿಗಳಿಗೆ ಜೆ.ಎಸ್.ಎಸ್. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನ್ಯೂಸ್ 18 ಗೆ ತಿಳಿಸಿದ್ದಾರೆ.

Karnataka SSLC Result 2020: ಆಗಸ್ಟ್ ಮೊದಲನೇ ವಾರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ: ಸಚಿವ ಸುರೇಶ್‍ಕುಮಾರ್

ಇಷ್ಟೇ ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಸಂತೇಮರಹಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಸಹ ಎರಡನೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಕಳೆದ ಎರಡು ಮೂರು ವರ್ಷಗಳಿಂದ ಯಾವುದೇ ರೀತಿಯ ಕಾರ್ಯ ಚಟುವಟಿಕೆಗಳು  ನಡೆಯದ ಈ ಆಸ್ಪತ್ರೆಯನ್ನು ಸದ್ಭಳಕೆ ಮಾಡಿಕೊಂಡು, 80 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು  ಎಂದು ಅವರು ತಿಳಿಸಿದ್ದಾರೆ.

ಪ್ರತಿ ತಾಲೂಕಿನಲ್ಲೂ ಕೋವಿಡ್ ನಿಗಾವಣಾ ಕೇಂದ್ರ

ಕೊರೋನಾ ಪರೀಕ್ಷೆಗೆ ಗಂಟಲು ದ್ರವ ಕೊಟ್ಟವರು ಪರೀಕ್ಷಾ ವರದಿ ಬರುವ ಮುನ್ನವೇ ಬೇರೆ ಬೇರೆ ಕಡೆ ಹೋಗುವುದು, ಸುತ್ತಾಡುವುದು ಮಾಡುತ್ತಿರುವುದು ಕಂಡು ಬರುತ್ತಿದೆ. ಅವರಿಗೆ ಒಂದು ವೇಳೆ ಕೊರೋನಾ ಪಾಸಿಟಿವ್ ಬಂದರೆ  ಕೊರೋನಾ ಸೋಂಕು ಹರಡಲು ಕಾರಣರಾಗುತ್ತಾರೆ. ಜೊತೆಗೆ ಅವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವುದು ಕಷ್ಟವಾಗಲಿದೆ. ಹಾಗಾಗಿ  ಪರೀಕ್ಷೆಗೆ ಗಂಟಲು ದ್ರವ ಕೊಟ್ಟವರ ಮೇಲೆ ನಿಗಾ ವಹಿಸಲು ಪ್ರತಿ ತಾಲೂಕಿನಲ್ಲೂ ಒಂದೊಂದು ಕೋವಿಡ್ ನಿಗಾವಣೆ ಕೇಂದ್ರ ಸ್ಥಾಪಿಸಲಾಗಿದೆ.ಗಂಟಲು  ದ್ರವ ಪರೀಕ್ಷೆಗೆ ಕೊಟ್ಟವರು ಪರೀಕ್ಷಾವರದಿ ಬರುವವರೆಗೂ ಈ ಕೋವಿಡ್ ನಿಗಾವಣೆ ಕೇಂದ್ರದಲ್ಲೇ ಇರಬೇಕು.  ಪರೀಕ್ಷಾ ವರದಿ  ಬಂದ ನಂತರ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಲಾಗುವುದು. ಪಾಸಿಟಿವ್ ಬಂದರೆ ತಕ್ಷಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 33 ಕೊರೋನಾ  ಪ್ರಕರಣಗಳು ವರದಿಯಾಗಿದ್ದು ಇನ್ನು ಮುಂದೆ ನಿತ್ಯ 10 ರಿಂದ 15 ಹೊಸ ಪ್ರಕರಣಗಳು ಬರುವ ಸಾಧ್ಯತೆಗಳಿವೆ. ಹಾಗಾಗಿ ಕೊರೋನಾ ಹರಡದಂತೆ ನಿಗಾವಹಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಾರೆ   ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading