ವಾರಕ್ಕೊಮ್ಮೆಯಾದರೂ ಮದ್ಯದಂಗಡಿ ತೆರೆಯಲು ಚಾಮರಾಜನಗರ ಕೈ ಶಾಸಕ ಒತ್ತಾಯ

ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಿರುವುರದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗುತ್ತಿದೆ ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಚಾಮರಾಜನಗರ(ಏ. 30): ಸದ್ಯಕ್ಕೆ ಕೊರೊನಾ ಮುಕ್ತವಾಗಿರುವ ಗಡಿ ಜಿಲ್ಲೆ ಚಾಮರಾಜನಗರ ಹಸಿರುವಲಯದಲ್ಲಿದ್ದು ಬಹುತೇಕ ಎಲ್ಲಾ ರೀತಿಯ ಅಂಗಡಿಮುಂಗಟ್ಟುಗಳನ್ನು ಷರತ್ತಿಗೊಳಪಟ್ಟು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಹೊಟೇಲ್ (ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಅವಕಾಶ), ವಸತಿಗೃಹ, ಚಿತ್ರಮಂದಿರ, ಬಾರ್ ಅಂಡ್ ರೆಸ್ಟೋರೆಂಟ್, ಮದ್ಯದಂಗಡಿ, ಸಲೂನ್, ಬ್ಯೂಟಿ ಪಾರ್ಲರ್, ವಾಣಿಜ್ಯ ಸಂಕೀರ್ಣ, ಲಾಂಡ್ರಿ, ಬಟ್ಟೆ ಅಂಗಡಿಗಳಿಗೆ ಮೇ 3 ರವರೆಗೂ ನಿರ್ಬಂಧ ಮುಂದುವರಿಸಲಾಗಿದೆ.

  ಉಳಿದಂತೆ ಕಳೆದ ಮೂವತ್ತೊಂಭತ್ತು ದಿನಗಳಿಂದ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು ಆರಂಭಗೊಳ್ಳತೊಡಗಿವೆ. ಮನೆಯಲ್ಲೇ ಲಾಕ್ ಆಗಿದ್ದವರಿಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದ್ದು ಜನಜೀವನ ಯಥಾ ಸ್ಥಿತಿಗೆ ಮರಳತೊಡಗಿದೆ. ಸಾಮಾನು ಸರಂಜಾಮು ಕೊಳ್ಳಲು ಜನರು ಅಂಗಡಿ ಮುಂಗಟ್ಟುಗಳತ್ತ ಧಾವಿಸತೊಡಗಿದ್ದಾರೆ.

  ಇದನ್ನೂ ಓದಿ: ಕೊರೋನಾ ಹೌದು, ಕೊರೋನಾ ಅಲ್ಲ: ಮಕ್ಕಳಲ್ಲಿ ಕಾಣಿಸುತ್ತಿದೆಯಾ ನಿಗೂಢ ಕಾಯಿಲೆ? – ಬೆಚ್ಚಿಬಿದ್ದ ವೈದ್ಯರು

  ಈ ನಡುವೆ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮ ಪರಿಶೀಲನೆಗೆ ಏಳು ಫ್ಲೈಯಿಂಗ್ ಸ್ಕ್ವಾಡ್​ಗಳನ್ನು ರಚಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಇಬ್ಬರು ಅಧಿಕಾರಿಗಳು, ಹೋಂ ಗಾರ್ಡ್, ಪೊಲೀಸ್ ಕಾನ್ಸ್​ಟೇಬಲ್ ಒಳಗೊಂಡ ಏಳು ತಂಡಗಳನ್ನು ರಚಿಸಿಲಾಗಿದೆ. ಈ ತಂಡಗಳು ನಗರ ಹಾಗು ಗ್ರಾಮೀಣ ಪ್ರದೇಶಗಳಲ್ಲಿ 144 ನೇ ಸೆಕ್ಷನ್ ನಿಷೇದಾಜ್ಞೆ ಪಾಲನೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳದೆ ಇರುವುದು, ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ನಿರ್ದೇಶನಗಳು ಸರಿಯಾಗಿ ಪಾಲನೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

  ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಿರುವುರದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗುತ್ತಿದೆ ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಮಹಿಳೆಯರೇ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೀಗೆ ಬಿಟ್ಟರೆ ಅಪಾಯ ಎದುರಾಗಲಿದ್ದು ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕುವಂತೆ ಅವರು ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

  ಇದನ್ನೂ ಓದಿ: ಕೊರೋನಾ ಸೋಂಕಿತನೊಂದಿಗೆ ಸಂಪರ್ಕ; ರಾಜ್ಯದ ಡಿಸಿಎಂ ಸೇರಿ ನಾಲ್ವರು ಸಚಿವರು ಕ್ವಾರಂಟೈನ್​

  ಮದ್ಯದಂಗಡಿ ಮುಚ್ಚಿರುವುದರಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಖೋತಾ ಆಗುತ್ತಿದೆ. ಅಲ್ಲದೆ ಮದ್ಯಮಾರಾಟದ ಕಳ್ಳದಂದೆ ನಡೆಯುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರ ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಾರಕ್ಕೊಮ್ಮೆ ಮದ್ಯದಂಗಡಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

  ಕಳ್ಳದಾರಿಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಮದ್ಯದಂಗಡಿಗಳು ಮುಚ್ಚಿದ್ದರೂ ಹೇಗೆ ಮದ್ಯ ಮಾರಾಟ ಆಗುತ್ತಿದೆ? ಒಂದಕ್ಕೆ ಹತ್ತು ಪಟ್ಟು ಹಣ ನೀಡಿ ಜನ ಮದ್ಯ ಸೇವಿಸುತ್ತಿದ್ದಾರೆ. ಕಾಳಸಂತೆಯಲ್ಲಿ ಲೋಕಲ್ ಮದ್ಯಕ್ಕೂ 500, 600 ರೂಪಾಯಿಗಳಾಗಿದೆ. ಮದ್ಯದಂಗಡಿಗಳನ್ನು ಬಂದ್ ಮಾಡಿದ್ದ ಮೇಲೆ ಕಾಳಸಂತೆಯಲ್ಲಿ ಹೇಗೆ ದೊರೆಯುತ್ತಿದೆ? ಬಂದ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆಯೇ? ನಿಯಮಾನುಸಾರ ಸೀಲ್ ಮಾಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಆಗ್ರಹಿಸಿದ್ದಾರೆ.

  ವರದಿ: ಎಸ್.ಎಂ. ನಂದೀಶ್

  First published: