HOME » NEWS » Coronavirus-latest-news » CENTRE WRITES LETTER TO KERALA GOVT ON MHA LOCKDOWN GUIDELINES VIOLATION SNVS

ಲಾಕ್ ಡೌನ್ ಸಡಿಲಗೊಳಿಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಕೋಪ

ಕೇರಳದಲ್ಲಿ ಕೊರೋನಾ ಸೋಂಕು ತಡೆಯಲು ಯಶಸ್ವಿಯಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಇಳಿಯುತ್ತಿದೆ. ಹೆಚ್ಚೆಚ್ಚು ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಪಿಣಾರಯಿ ವಿಜಯನ್ ಹೇಳಿದ್ದಾರೆ.

news18-kannada
Updated:April 20, 2020, 2:50 PM IST
ಲಾಕ್ ಡೌನ್ ಸಡಿಲಗೊಳಿಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಕೋಪ
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್
  • Share this:
ನವದೆಹಲಿ(ಏ. 20): ಕೊರೋನಾ ವೈರಸ್ ಲಾಕ್‌ಡೌನ್‌ ಕ್ರಮ ಸಡಿಲಿಸಿ ರೆಸ್ಟೋರೆಂಟ್‌ಗಳಿಗೆ ತೆರೆಯಲು ಮತ್ತು ಖಾಸಗಿ ವಾಹನಗಳಿಗೆ ಬೆಸ-ಸಮ ಆಧಾರದ ಮೇಲೆ ಸಂಚರಿಸಲು ಅನುಮತಿ ನೀಡಿರುವ  ಕೇರಳ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಆಕ್ಷೇಪಿಸಿದೆ. ಪಿಣಾರಯಿ ವಿಜಯನ್ ಸರ್ಕಾರವು ಲಾಕ್ ಡೌನ್ ಅನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದೆ.

ಕೇರಳ ಸರ್ಕಾರ ರೆಸ್ಟೋರೆಂಟ್‌ಗಳನ್ನು ತೆರೆಯಲು, ನಗರಗಳಲ್ಲಿ ಬಸ್ ಪ್ರಯಾಣ ಮತ್ತು ಪುರಸಭೆಯ ಪ್ರದೇಶಗಳಲ್ಲಿ ಎಂಎಸ್‌ಎಂಇ ಕೈಗಾರಿಕೆಗಳನ್ನು ತೆರೆಯಲು ಅನುಮತಿ ನೀಡಿರುವುದಕ್ಕೆ ಕೇಂದ್ರ ಗೃಹ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕೇರಳ ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಗೃಹ ಸಚಿವಾಲಯವು ಏಪ್ರಿಲ್ 17 ರಂದು ಲಾಕ್ ಡೌನ್ ಕುರಿತಂತೆ ಕೇಂದ್ರ ಸರ್ಕಾರವು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆದರೆ ಏಪ್ರಿಲ್ 15 ರಂದು ಹೊರಡಿಸಲಾದ ಕೇಂದ್ರದ ಏಕೀಕೃತ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ನಿಷೇಧಿಸಲಾದ ಕೆಲ ಚಟುವಟಿಕೆಗಳಿಗೆ ಕೇರಳ ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಕೇರಳ ಸರ್ಕಾರಕ್ಕೆ ಪತ್ರ ಬರೆದು ಕೋಪ ವ್ಯಕ್ತಪಡಿಸಿದೆ.

ಕೇರಳ ಸರ್ಕಾರವು ಸ್ಥಳೀಯ ವರ್ಕ್​ಶಾಪ್​ಗಳು, ಕ್ಷೌರದ ಅಂಗಡಿಗಳು, ರೆಸ್ಟೋರೆಂಟ್‌ಗಳು, ಪುಸ್ತಕ ಮಳಿಗೆಗಳು, ಪುರಸಭೆಯ ಮಿತಿಯಲ್ಲಿ ಎಂಎಸ್‌ಎಂಇಗಳು, ನಗರಗಳು ಮತ್ತು ಪಟ್ಟಣಗಳಲ್ಲಿ ಕಡಿಮೆ ದೂರದ ಬಸ್ ಪ್ರಯಾಣಗಳಿಗೆ ಅನುಮತಿ ನೀಡಿದೆ.

ಇದನ್ನೂ ಓದಿ: Reliance Foundation - ವಿಶ್ವದಾಖಲೆಯ ಮಿಷನ್ ಅನ್ನ ಸೇವಾ: 3 ಕೋಟಿ ಮಂದಿಗೆ ಆಹಾರ ವಿತರಣೆ

ಈ ರೀತಿ ಅನುಮತಿ ನೀಡುವುದು ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳನ್ನು ದುರ್ಬಲಗೊಳಿಸಿದಂತಾಗುತ್ತದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಹೊರಡಿಸಲಾದ ಏಪ್ರಿಲ್ 15 ರ ಆದೇಶವನ್ನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಕೇರಳ ರಾಜ್ಯವನ್ನು ರೆಡ್, ಆರೆಂಜ್ ಎ, ಆರೆಂಜ್ ಬಿ ಮತ್ತು ಗ್ರೀನ್ ಎಂದು ನಾಲ್ಕು ವಲಯಗಳಾಗಿ ಅಲ್ಲಿನ ಸರ್ಕಾರ ವಿಂಗಡಿಸಿದೆ. ಹಾಗೆಯೇ, ಲಾಕ್ ಡೌನ್ ಸಡಿಲಿಸುವ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಕೊರೋನಾ ಪ್ರಕರಣ ಹೆಚ್ಚಿರುವ ಜಿಲ್ಲೆಗಳನ್ನು ಕೆಂಪು ವಲಯಗಳಿಗೆ ಸೇರಿಸಲಾಗಿದೆ. ಯಾವುದೇ ಸೋಂಕು ಕಂಡುಬಂದಿಲ್ಲದ ಪ್ರದೇಶಗಳು ಹಸಿರು ಪಟ್ಟಿಯಲ್ಲಿವೆ. ಇನ್ನುಳಿದವನ್ನು ಆರೆಂಜ್ ಪಟ್ಟಿಗಳಿಗೆ ಸೇರಿಸಲಾಗಿದೆ.ಕಾಸರಗೋಡು, ಕಣ್ಣೂರು, ಕೋಳಿಕೋಡ್, ಮಲಪ್ಪುರಂ ಜಿಲ್ಲೆಗಳು ಕೆಂಪು ವಲಯದಲ್ಲಿವೆ. ಇಲ್ಲಿ ಲಾಕ್​ಡೌನ್​ನ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ.

ಇತರ ವಲಯಗಳಲ್ಲಿ ಬೆಸ-ಸಮ-ಯೋಜನೆಯಲ್ಲಿ ಖಾಸಗಿ ವಾಹನಗಳನ್ನು ಓಡಾಟಕ್ಕೆ ಅನುಮತಿ ನೀಡಲಾಗುವುದು, ಮತ್ತು ರೆಸ್ಟೋರೆಂಟ್‌ಗಳಿಗೆ ರಾತ್ರಿ 7 ಗಂಟೆಯವರೆಗೆ ಮತ್ತು ರಾತ್ರಿ 8 ಗಂಟೆಯವರೆಗೆ ಪಾರ್ಸಲ್ ಸೌಲಭ್ಯಕ್ಕೆ ಅನುಮತಿ ನೀಡಲಾಗಿದೆ. ಅಲ್ಲದೇ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದೆ.

ಕೇರಳದಲ್ಲಿ ಭಾನುವಾರ ಎರಡು ಹೊಸ ಕೋವಿಡ್- 19 ಪ್ರಕರಣಗಳು ವರದಿಯಾಗಿದ್ದು, ಸರ್ಕಾರದ ಪ್ರಕಾರ ಒಟ್ಟು ಪ್ರಕರಣದ ಸಂಖ್ಯೆ 401 ಮತ್ತು 13 ಜನರು ಚೇತರಿಸಿಕೊಂಡಿದ್ದಾರೆ.

- ಸಂಧ್ಯಾ ಎಂ.

First published: April 20, 2020, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories