CoronaVirus| ಕೊರೋನಾ ಸೋಂಕು ಪ್ರಕರಣಗಳು ಅಧಿಕವಿರುವ 6 ರಾಜ್ಯಗಳಿಗೆ ಕೇಂದ್ರದ ತಂಡ ನಿಯೋಜನೆ

ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸಗಢ ಮತ್ತು ಮಣಿಪುರ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ವಿಶೇಷ ಕೊರೋನಾ ನಿಯಂತ್ರಣ ತಂಡಗಳನ್ನು ನಿಯೋಜಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ನವ ದೆಹಲಿ; ದೇಶದಲ್ಲಿ ಪ್ರಸ್ತುತ ಕೊರೋನಾ ಎರಡನೇ ಅಲೆ ದಿನೇ ದಿನೇ ಕಡಿಮೆಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ತಣ್ಣಗಾಗಿದ್ದು, ಜನ ಜೀವನ ಎಂದಿನಂತೆ ಆರಂಭವಾಗಿದೆ. ಲಾಕ್​ಡೌನ್ ನಿಯಮಗಳನ್ನೂ ತೆರವುಗೊಳಿಸಲಾಗಿದೆ. ಆದರೂ, ಕೆಲವು ರಾಜ್ಯಗಳಲ್ಲಿ ಮಾತ್ರ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆ ಆಗದಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ದೇಶದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸಗಢ ಮತ್ತು ಮಣಿಪುರ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ವಿಶೇಷ ಕೊರೋನಾ ನಿಯಂತ್ರಣ ತಂಡಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.

    ಈ ಆರು ರಾಜ್ಯಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳ ತುರ್ತು ನಿಯಂತ್ರಣ ಮತ್ತು ನಿಯಂತ್ರಣ ಕ್ರಮಗಳಿಗಾಗಿ ತಂಡಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆ ತಿಳಿಸಿದೆ.

    ತಲಾ ಇಬ್ಬರು ಸದಸ್ಯರಿರುವ ಈ ತಂಡವು ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿದೆ. ತಂಡಗಳನ್ನು ತಕ್ಷಣವೇ ಆರು ರಾಜ್ಯಗಳಿಗೆ ಕಳುಹಿಸಲಾಗಿದೆ. ಕೋವಿಡ್ ನಿರ್ವಹಣೆಯ ಕೈಗೊಳ್ಳುವ ಪ್ರಯತ್ನಗಳಲ್ಲಿ ತಂಡಗಳು ರಾಜ್ಯಗಳನ್ನು ಬೆಂಬಲಿಸಲಿವೆ ಮತ್ತು ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ.

    ಈ ತಂಡಗಳು ಕೋವಿಡ್ ಮಾರ್ಗಸೂಚಿಗಳು ಮತ್ತು ಅದರ ಜಾರಿಗೊಳಿಸುವಿಕೆ, ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆ, ಆಂಬ್ಯುಲೆನ್ಸ್‌ಗಳು, ವೆಂಟಿಲೇಟರ್‌ಗಳು ಮತ್ತು ವೈದ್ಯಕೀಯ ಆಮ್ಲಜನಕವನ್ನು ಒಳಗೊಂಡಂತೆ ಸಾಕಷ್ಟು ಲಾಜಿಸ್ಟಿಕ್ಸ್, ಜೊತೆಗೆ ಕೋವಿಡ್ ವ್ಯಾಕ್ಸಿನೇಷನ್ ಪ್ರಗತಿಯನ್ನು ಖಚಿತಪಡಿಸುತ್ತವೆ. ರಾಜ್ಯಗಳು ಕೊರೊನಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಾಗ, ಕೇಂದ್ರದ ತಂಡ ಸಾರ್ವಜನಿಕ ಆರೋಗ್ಯ ಚಟುವಟಿಕೆಗಳ ಕುರಿತು ಪರಿಹಾರ ಕ್ರಮಗಳನ್ನು ಸಹ ಸೂಚಿಸುತ್ತವೆ ಎಂದು ತಿಳಿಸಲಾಗಿದೆ.

    ಮಣಿಪುರಕ್ಕೆ ತೆರಳುವ ತಂಡದ ನೇತೃತ್ವವನ್ನು ಹೆಚ್ಚುವರಿ ಡಿಡಿಜಿ ಮತ್ತು ಇಎಂಆರ್ ನಿರ್ದೇಶಕ ಡಾ. ಎಲ್ ಸ್ವಾಸ್ತಿಚರನ್ ವಹಿಸಲಿದ್ದಾರೆ. ಅರುಣಾಚಲ ಪ್ರದೇಶಕ್ಕೆ ತಂಡದ ನೇತೃತ್ವವನ್ನು (ಎಐಐಹೆಚ್ & ಪಿಹೆಚ್) All India Institute of Hygiene & Public Health ಪ್ರೊಫೆಸರ್ ಡಾ.ಸಂಜಯ್ ಸಾಧುಖಾನ್ ವಹಿಸಿಕೊಳ್ಳಲಿದ್ದಾರೆ. ತ್ರಿಪುರದಲ್ಲಿ ಎಐಐಹೆಚ್ ಮತ್ತು ಪಿಎಚ್‌ನ ಡಾ. ಆರ್.ಎನ್. ಸಿನ್ಹಾ ತಂಡವನ್ನು ಮುನ್ನಡೆಸಲಿದ್ದಾರೆ.

    ಇದನ್ನೂ ಓದಿ: Tirath Singh Rawat Resign| ಅಧಿಕಾರ ವಹಿಸಿಕೊಂಡ 4 ತಿಂಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಉತ್ತರಾಖಂಡ ಸಿಎಂ!

    ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿಗಳಲ್ಲಿ ಸಾರ್ವಜನಿಕ ಆರೋಗ್ಯ ತಜ್ಞ ಡಾ. ರುಚಿ ಜೈನ್ ತಂಡವನ್ನು ಮುನ್ನಡೆಸಲಿದ್ದಾರೆ. ಎಐಐಹೆಚ್ ಮತ್ತು ಪಿಎಚ್‌ನ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಎ ಡಾನ್ ಒಡಿಶಾ ತಂಡವನ್ನು ಮುನ್ನಡೆಸಲಿದ್ದು, ಛತ್ತೀಸ್‌ಗಢ ತಂಡದ ನೇತೃತ್ವವನ್ನು ರಾಯ್‌ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸಹಾಯಕ ಪ್ರಾಧ್ಯಾಪಕ ಡಾ. ದಿಬಾಕರ್ ಸಾಹು ವಹಿಸಲಿದ್ದಾರೆ.

    ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆಗೂ ಮುನ್ನವೇ 53 ಜಿಲ್ಲಾ ಪಂಚಾಯತ್​ಗೆ ಚುನಾವಣೆ; ಬಿಜೆಪಿ-ಎಸ್​ಪಿಗೆ ಎದುರಾಯ್ತು ಪರೀಕ್ಷೆ!

    ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಾಗ ಈ ಕೊರೊನಾ ನಿಯಂತ್ರಣ ತಂಡಗಳು ಉದ್ದೇಶಿತ ಕೋವಿಡ್ ಪ್ರತಿಕ್ರಿಯೆ ಮತ್ತು ನಿರ್ವಹಣೆಗೆ ರಾಜ್ಯಗಳ ಪ್ರಯತ್ನಗಳಲ್ಲಿ ರಾಜ್ಯಗಳನ್ನು ಬೆಂಬಲಿಸಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: