Chitradurgaದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಖಡಕ್ ಸೂಚನೆ

ಜನವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಹಾಸಿಗೆ ವ್ಯವಸ್ಥೆ, ಔಷಧಿ, ತಜ್ಞ ವೈದ್ಯರು, ಸಿಬ್ಬಂದಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು.

ಸಭೆಯಲ್ಲಿ ಸಚಿವರು, ಅಧಿಕಾರಿಗಳು

ಸಭೆಯಲ್ಲಿ ಸಚಿವರು, ಅಧಿಕಾರಿಗಳು

  • Share this:
ಚಿತ್ರದುರ್ಗ: ರಾಜ್ಯದಲ್ಲಿ ಓಮಿಕ್ರಾನ್ (Omicron)ಭೀತಿಯ ಜೊತೆಗೆ ಕೋವಿಡ್  (Covid) ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಎರಡು ವರ್ಷಗಳಿಂದ ಭಯದಿಂದಲೇ ಬದುಕಿರುವ ಜನರು ಜೀವ ಉಳಿಸಿಕೊಳ್ಳೋಕೆ ಹರ ಸಾಹಸ ಪಟ್ಟಿದ್ದಾರೆ. ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ (Central Minister A Narayana swamy ) ಮುಂದಾಗಿ, ಜಿಲ್ಲಾ ಮಟ್ಟದ ಅಧಿಕಾರಗಳ ಸಭೆ ನಡೆಸಿ ಸಕಲ ಸಿದ್ದತೆಗೆ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇದೇ ಜನವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಹಾಸಿಗೆ ವ್ಯವಸ್ಥೆ, ಔಷಧಿ, ತಜ್ಞ ವೈದ್ಯರು, ಸಿಬ್ಬಂದಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು. ಕೋವಿಡ್-19ರ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕಿನ ಲಕ್ಷಣಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಶಿಕ್ಷಣ ನೀಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ  ನೀಡಿದರು.

ಆಕ್ಸಿಜನ್ ಕೊರತೆ ಆಗದಂತೆ ಕ್ರಮ

ಇದೇ ವೇಳೆ ಮಾತನಾಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೋವಿಡ್-19ರ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಾಗಿದೆ. ಪ್ರಸ್ತುತ  ಮೂರನೇ ಅಲೆಯು ಪ್ರಾರಂಭವಾಗಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಸಕಲ ಸಿದ್ಧತೆಗಳನ್ನುಕೈಗೊಳ್ಳಬೇಕು. ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ವೈದ್ಯರು, ಸಿಬ್ಬಂದಿ, ಹಾಸಿಗೆ ವ್ಯವಸ್ಥೆ, ಆಕ್ಸಿಜನ್ ಕೊರತೆ ಆಗದಂತೆ ಕ್ರಮವಹಿಸಬೇಕು. ಮುಖ್ಯವಾಗಿ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: Reserves: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಿ COVID ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಅಣಿ

ಕೋವಿಡ್ ಪರಿಹಾರ ಮೊತ್ತ ವಿತರಣೆಗೆ ಸೂಚನೆ 

ಇನ್ನೂ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಮೊದಲ ಮತ್ತು ಎರಡನೇ ಅಲೆಯಲಿ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ದೂರುಗಳು ಬಂದವು ಆದರೆ ಈ ಬಾರಿ ಮೂರನೇ ಅಲೆಯ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆಗಳು ಆಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು. ಕೋವಿಡ್‍ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಕೋವಿಡ್ ಪರಿಹಾರ ಮೊತ್ತವನ್ನು ಕೂಡಲೇ ವಿತರಿಸಬೇಕು. ರಾಜ್ಯ ಸರ್ಕಾರದಿಂದ ರೂ.1ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ರೂ.50 ಸಾವಿರ ಸೇರಿದಂತೆ ಒಟ್ಟು 1.50 ಲಕ್ಷ ಕೋವಿಡ್ ಪರಿಹಾರ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ಕೇಂದ್ರಸರ್ಕಾರದಿಂದ ಬರುವ ಕೋವಿಡ್ ಪರಿಹಾರ ಇನ್ನೂ ಬಂದಿಲ್ಲ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

ಆಕ್ಸಿಜನ್ ಘಟಕ ಸಿದ್ಧ

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯೂರು ತಹಶೀಲ್ದಾರ್ ಶಿವಕುಮಾರ್, ರಾಜ್ಯ ಸರ್ಕಾರದಿಂದ ನೀಡುವ ಕೋವಿಡ್ ಪರಿಹಾರ ಈಗಾಗಲೇ ಫಲಾನುಭವಿಗಳಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಇನ್ನೂ ಪರಿಹಾರ ನೀಡಿಲ್ಲ ಎಂದರು. ಬಳಿಕ ಡಿಹೆಚ್ಒ  ಡಾ.ಆರ್.ರಂಗನಾಥ್ ಮಾತನಾಡಿ, ಕೋವಿಡ್-19ರ ಮೂರನೇ ಅಲೆಗೆ ಸಿದ್ಧತೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹೊಳಲ್ಕೆರೆ ತಾಲ್ಲೂಕು ಹೊರತುಪಡಿಸಿ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿಯೂ ಆಕ್ಸಿಜನ್ ಘಟಕ ಸಿದ್ಧವಿದೆ. ಹೊಳಲ್ಕೆರೆ ತಾಲ್ಲೂಕು ಆಕ್ಸಿಜನ್ ಘಟಕ ಇನ್ನು ಹತ್ತುದಿನಗಳಲ್ಲಿ ಸಿದ್ಧವಾಗಲಿದೆ ಎಂದರು. ಇದೇ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸವರಾಜ್  ಮಾತನಾಡಿ, ಕೋವಿಡ್ ನಿರ್ವಹಣೆಗೆ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಕನಿಷ್ಟ 10 ತಜ್ಞ ವೈದ್ಯರ ಅವಶ್ಯಕತೆ ತೀರಾ ಅಗತ್ಯವಾಗಿದೆ ಎಂದು ಸಭೆಯ ಗಮನಕ್ಕೆ ತಂದಿದ್ದಾರೆ‌.  ಇನ್ನು ಇಂದು (ಜ.8) ರಾಜ್ಯದಲ್ಲಿ 8906 ಕೊರೊನಾ ಕೇಸ್ ಗಳು ವರದಿಯಾಗಿವೆ. ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.
Published by:Kavya V
First published: