ನವ ದೆಹಲಿ (ಮೇ 11); ಮಹಾರಾಷ್ಟ್ರದ ಔರಂಗಾಬಾದ್ ರೈಲು ದುರಂತದಲ್ಲಿ 16 ವಲಸೆ ಕಾರ್ಮಿಕರು ಧಾರುಣವಾಗಿ ಸಾವನ್ನಪ್ಪಿದ ನಂತರ ಕೊನೆಗೂ ಕೇಂದ್ರ ಗೃಹ ಇಲಾಖೆ ಎಚ್ಚೆತ್ತಿದೆ. ಅಲ್ಲದೆ, ಎಲ್ಲಾ ವಲಸೆ ಕಾರ್ಮಿಕರು ಅವರವರ ಊರುಗಳಿಗೆ ತೆರಳಲು ಸೂಕ್ತ ಬಸ್ ಮತ್ತು ರೈಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಠಿಣ ಸೂಚನೆ ನೀಡಿದೆ.
ಲಾಕ್ಡೌನ್ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಮಧ್ಯಪ್ರದೇಶದ ಕಾರ್ಮಿಕರು ರೈಲ್ವೆ ಹಳಿಯನ್ನು ಅನುಸರಿಸಿ ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಇನ್ನೂ 45 ಕಿಮೀ ನಡೆದಿದ್ದರೆ ಅವರ ಊರು ಬರುತ್ತಿತ್ತು. ಆದರೆ, ಈ ವೇಳೆ ಸುಸ್ತಾದ ಕಾರ್ಮಿಕರು ವಿಶ್ರಾಂತಿಗೆಂದು ರಾತ್ರಿ ಹಳಿಯ ಮೇಲೆ ಮಲಗಿದ್ದಾರೆ.
ಆದರೆ, ಮರುದಿನ ಬೆಳಗ್ಗೆ ಜಾಲ್ನಾದಿಂದ ಔರಂಗಾಬಾದ್ನತ್ತ ತೆರಳುತ್ತಿದ್ದ ಗೂಡ್ಸ್ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ 16 ಜನ ಅಮಾಯಕ ವಲಸೆ ಕಾರ್ಮಿಕರು ಮೃತಪಟ್ಟಿದ್ದರು. ಅಲ್ಲದೆ, ಐವರ ಸ್ಥಿತಿ ಗಂಭೀರವಾಗಿದೆ.
ಪ್ರಕರಣದ ಬಳಿಕ ಎಚ್ಚೆತ್ತಿರುವ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಕಠಿಣ ಸೂಚನೆ ನೀಡಿದೆ, "ವಲಸೆ ಕಾರ್ಮಿಕರು ತಮ್ಮ ಊರು, ರಾಜ್ಯಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ವಲಸೆ ಕಾರ್ಮಿಕರಿಗೆ ಹೆಚ್ಚಿನ ರೈಲು, ಬಸ್ ಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು" ಎಂದು ಆದೇಶಿಸಿದೆ.
ಅಲ್ಲದೆ, "ವಲಸೆ ಕಾರ್ಮಿಕರು ರೈಲು ಹಳಿ ಮೇಲೆ ಹಾಗೂ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ನಡೆದುಕೊಂಡು ಹೋಗಬಾರದು. ರಾಜ್ಯ ಸರ್ಕಾರಗಳು ರೈಲು ಹಳಿ, ರಾಷ್ಟ್ರೀಯ ಹೆದ್ದಾರಿ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಬೇಕು. ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದರೆ ಅಂತವರನ್ನ ತಡೆದು ಅವರಿಗೆ ಆಶ್ರಯ ಕಲ್ಪಿಸಬೇಕು. ಕಾರ್ಮಿಕರಿಗೆ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಬೇಕು" ಎಂದು ತಾಕೀತು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ