ನವದೆಹಲಿ: ಮದ್ದಿಲ್ಲದ ರೋಗ ಕೊರೋನಾದ ಸೋಂಕು ಲಸಿಕೆ ಕಂಡುಹಿಡಿಯಲು, ಚಿಕಿತ್ಸೆ ನೀಡಲು ಪರದಾಡುತ್ತಿರುವ ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ, ಮಾನಸಿಕ ಕಿರುಕುಳ ನೀಡುವ ಕುಕೃತ್ಯಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಸುಗ್ರೀವಾಜ್ಞೆ ತಂದಿದೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವುದಕ್ಕಾಗಿ ಸರ್ಕಾರ ಸುಗ್ರೀವಾಜ್ಞೆ ತರಲು ಒಪ್ಪಿಗೆ ನೀಡಿದೆ. ಸುಗ್ರೀವಾಜ್ಞೆ ಮೂಲಕ ಜಾರಿಗೊಳ್ಳುತ್ತಿರುವ ನೂತನ ಕಾಯಿದೆ ಪ್ರಕಾರ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ 6 ತಿಂಗಳಿನಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ನೂತನ ಕಾಯ್ದೆ ಪ್ರಕಾರ ಪೊಲೀಸರು ಒಂದು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಪರಾಧ ಪಟ್ಟಿ ಸಲ್ಲಿಸಲಿದ್ದಾರೆ. ನ್ಯಾಯಾಲಯವು ವರ್ಷದೊಳಗೆ ವಿಚಾರಣೆ ಮುಗಿಸಿ ತೀರ್ಪು ನೀಡಲಿದೆ.
ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವುದಲ್ಲದೆ ಆಸ್ಪತ್ರೆಗಳ ಆಸ್ತಿಪಾಸ್ತಿ ಅಥವಾ ಸಲಕರಣೆಗಳು ಹಾಗೂ ವೈದ್ಯರಿಗೆ ಸೇರಿದ ಕಾರನ್ನು ಧ್ವಂಸಗೊಳಿಸುತ್ತಿರುವುದು ಕಂಡುಬಂದರೆ ಈ ಸ್ವತ್ತುಗಳ ಮಾರುಕಟ್ಟೆ ಮೌಲ್ಯಕ್ಕಿಂತ ಎರಡು ಪಟ್ಟು ಪಾವತಿಸಲು ಸೂಚನೆ ನೀಡಲಾಗುತ್ತದೆ.
ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿರುವ ಆರೋಗ್ಯ ಸೇವಾ ಸಿಬ್ಬಂದಿ ನೆರವಿಗೆ ಬರಲು ಕೇಂದ್ರ ಸಚಿವ ಸಂಪುಟ ಸಭೆ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ಮಾಡುವುದಕ್ಕಾಗಿ ಸುಗ್ರೀವಾಜ್ಞೆ ತರಲು ಒಪ್ಪಿಗೆ ನೀಡಿದೆ ಎಂದು ಸಭೆ ಬಳಿಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದರು. ಇದೇ ವೇಳೆ ಆರೋಗ್ಯ ಸೇವಾ ಸಿಬ್ಬಂದಿಗೆ ಅಗತ್ಯವಿರುವ N-95 ಮಾಸ್ಕ್ ಗಳ ಕೊರತೆಯನ್ನು ನೀಗಿಸಲಾಗುತ್ತಿದೆ. ಸದ್ಯ 25 ಲಕ್ಷ ಮಾಸ್ಕುಗಳು ಲಭ್ಯವಿದ್ದು ಒಟ್ಟು 2.5 ಕೋಟಿ ಮಾಸ್ಕ ಗಳಿಗೆ ಆರ್ಡರ್ ಮಾಡಲಾಗಿದೆ ಎಂದು ತಿಳಿಸಿದರು.
ಕೊರೋನಾ ಪರಿಸ್ಥಿತಿ ನಿರ್ಮಾಣ ಆದ ಮೇಲೆ ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ ಮತ್ತು ಅವರಿಗೆ ಮನೆ ಖಾಲಿ ಮಾಡುವಂತೆ ಮಾನಸಿಕ ಕಿರುಕುಳ ನೀಡುವ ಪ್ರವೃತ್ತಿ ಜಾಸ್ತಿಯಾಗಿತ್ತು. ಇದನ್ನು ಖಂಡಿಸಲು ಇವತ್ತು ರಾತ್ರಿ 9 ಗಂಟೆಗೆ ದೇಶದ ಎಲ್ಲಾ ವೈದ್ಯರು ಮೇಣದ ಬತ್ತಿ ಹೊತ್ತಿಸಿ ಸಾಂಕೇತಿಕ ಪ್ರತಿಭಟನೆ ಮಾಡಲು ಹಾಗೂ ನಾಳೆ ಕೈಗೆ ಕಪ್ಪು ಪಟ್ಟಿಕಟ್ಟಿಕೊಂಡು ಕೆಲಸ ಮಾಡುವ ಮುಖಾಂತರ ಕರಾಳ ದಿನ ಆಚರಿಸಲು ಭಾರತೀಯ ವೈದ್ಯಕೀಯ ಮಂಡಳಿ ಕರೆ ನೀಡಿತ್ತು. ಈ ಸಂಬಂಧ ಎಲ್ಲಾ ವೈದ್ಯರಿಗೂ ಪತ್ರ ಬರೆದಿತ್ತು. ಭಾರತೀಯ ವೈದ್ಯಕೀಯ ಮಂಡಳಿ ಸೂಚನೆ ಪ್ರಕಾರ ಇವತ್ತು ಮತ್ತು ನಾಳೆ ವೈದ್ಯರು ಪ್ರತಿಭಟನೆಗೆ ಸಜ್ಜಾಗಿದ್ದರು.
ಇದನ್ನು ಓದಿ: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋಮವಾರ ಪ್ರಧಾನಿ ಮೋದಿ ವಿಡಿಯೋ ಸಂವಾದ
ಇವತ್ತು ಮತ್ತು ನಾಳೆ ವೈದ್ಯರು ಪ್ರತಿಭಟನೆಗೆ ಸಜ್ಜಾಗಿದ್ದ ಹಿನ್ನೆಲೆಯಲ್ಲಿ ಇವತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತೀಯ ವೈದ್ಯಕೀಯ ಮಂಡಳಿ ಜೊತೆ ಸಭೆ ನಡೆಸಿ ಕೇಂದ್ರ ಸರ್ಕಾರ ಆರೋಗ್ಯ ಸೇವಾ ಸಿಬ್ಬಂದಿ ಜೊತೆ ಇದೆ ಎಂದು ಭರವಸೆ ನೀಡಿದರು. ಅಲ್ಲದೆ ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ, ಮಾನಸಿಕ ಕಿರುಕುಳ ನೀಡುವುದನ್ನು ತಡೆಯಲು ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಈ ಪ್ರಸ್ತಾವನೆಯನ್ನು ಇವತ್ತಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲೇ ಮಂಡಿಸಿ ಸುಗ್ರೀವಾಜ್ಞೆ ತರಲು ಒಪ್ಪಿಗೆ ನೀಡಲಾಗುವುದು ಎಂದು ಕೂಡ ಹೇಳಿದ್ದರು. ಈ ಭರವಸೆ ಮೇರೆಗೆ ಇವತ್ತು ಮತ್ತು ನಾಳೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಭಾರತೀಯ ವೈದ್ಯಕೀಯ ಮಂಡಳಿ ಹಿಂಪಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ