ಲಾಕ್​ಡೌನ್​ ಸಮಯದಲ್ಲಿ ಕಾರ್ಮಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲೇಬೇಕಿರುವ ಕೇಂದ್ರ ಸರ್ಕಾರ

ಕರೋನಾ ಮತ್ತು ಲಾಕ್​ಡೌನ್ ನಿಂದ ಭಾರತದಲ್ಲಿ ಕೈಗಾರಿಕೆಗಳು ಮತ್ತು ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ 5 ಭಾರತೀಯರಲ್ಲಿ ಒಬ್ಬರು ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ಎಚ್ಚರಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕೊರೋನಾ ಎಂಬ ಮಹಾಮಾರಿ, ಅದನ್ನು ತಡೆಯಲು ತಂದ ಲಾಕ್​ಡೌನ್, ಲಾಕ್​ಡೌನ್ ನಿಂದ ಆದ ಉತ್ಪಾದನೆ ಕುಸಿತ ಮತ್ತು ದೇಶದ ಆರ್ಥಿಕ ಕುಸಿತಗಳ ಪರಿಣಾಮವಾಗಿ ದೇಶದಲ್ಲಿ ಬಹಳ ದೊಡ್ಡ ಮಟ್ಟದ ಉದ್ಯೋಗ ಕಡಿತ ಹಾಗೂ ವೇತನ ಕಡಿತವಾಗಲಿದೆ. ಇದನ್ನು ತಡೆಯದಿದ್ದರೆ ಅದು ಇನ್ನಷ್ಟು ಉತ್ಪಾದನಾ ಕುಸಿತಕ್ಕೆ ಮತ್ತು ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ. ಹೀಗೆ ಒಂದಕ್ಕೊಂದು ಬೆಸೆದುಕೊಂಡಿರುವ ಸಂಕೀರ್ಣ ಸಮಸ್ಯೆಗೆ ಕೇಂದ್ರ ಸರ್ಕಾರ ಶೀಘ್ರವೇ ಪರಿಹಾರ ಮಾರ್ಗವನ್ನು ಕಂಡು ಹಿಡಿಯಬೇಕಾಗಿದೆ.

ಇದೇ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ಆಗುತ್ತಿರುವ ಬಗ್ಗೆ ಮತ್ತು ಕಂಪನಿಗಳು ನೌಕರರಿಗೆ ವೇತನ‌ ಕಡಿಮೆ ಮಾಡುವ ಬಗ್ಗೆ ಮಾಹಿತಿ ನೀಡುವಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತು ನೌಕರರ ರಾಜ್ಯ ವಿಮಾ ನಿಗಮ (ESIC)ಗಳಿಗೆ ಕೇಂದ್ರ ಕಾರ್ಮಿಕ ಇಲಾಖೆ ಸೂಚನೆ ನೀಡದೆ. ಎರಡೂ ಸಂಸ್ಥೆಗಳು ಈ ಕೂಡಲೇ ಉದ್ಯೋಗ ಮತ್ತು ವೇತನ ಕಡಿತದ ಬಗ್ಗೆ, ಸಂಬಳದ ವಿಳಂಬ ಪಾವತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡಬೇಕಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ ಮತ್ತು ನೌಕರರ ರಾಜ್ಯ ವಿಮಾ ನಿಗಮಗಳು ನೀಡುವ ವರದಿಯನ್ನು‌ ಕಾರ್ಮಿಕ ಇಲಾಖೆಯು ಪ್ರಧಾನಿ ಕಚೇರಿಗೆ ತಲುಪಿಸಲಾಗುತ್ತದೆ. ಬಳಿಕ ಎರಡೂ ಸಂಸ್ಥೆಗಳು ನೀಡಿರುವ ವರದಿಗಳನ್ನು ಆಧರಿಸಿ ಪ್ರಧಾನ ಮಂತ್ರಿಗಳ ಕಚೇರಿ ಕ್ರಮ ಕೈಗೊಳ್ಳಲಿದೆ.

ಕೊರೋನಾ ಮತ್ತು ಲಾಕ್​ಡೌನ್ ಗಳು ಸೃಷ್ಟಿಸಿರುವ ಒತ್ತಡದ ಆರ್ಥಿಕ ಪರಿಸ್ಥಿತಿಯು ಸಂಘಟಿತವಾಗಿರುವ ಕಾರ್ಮಿಕ ವಲಯದಲ್ಲೂ ವ್ಯಾಪಕವಾದ ಉದ್ಯೋಗ ಕಡಿತದ ಭೀತಿಯನ್ನು ಹುಟ್ಟುಹಾಕಿದೆ. ಕರೋನಾ ಮತ್ತು ಲಾಕ್​ಡೌನ್ ನಿಂದ ಭಾರತದಲ್ಲಿ ಕೈಗಾರಿಕೆಗಳು ಮತ್ತು ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ 5 ಭಾರತೀಯರಲ್ಲಿ ಒಬ್ಬರು ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ಎಚ್ಚರಿಸಿದೆ.

ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣಾ ಸಂಸ್ಥೆಯಾದ ಯೂಗೌ ನಡೆಸಿದ ಸಮೀಕ್ಷೆಯ ಪ್ರಕಾರ ಕೆಲವೇ ದಿನಗಳಲ್ಲಿ ಶೇಕಡ 20ರಷ್ಟು ಭಾರತೀಯರು ಉದ್ಯೋಗವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಶೇಕಡ16ರಷ್ಟು ಉದ್ಯೋಗಿಗಳು ಸಂಬಳ ಕಡಿಮೆ ಆಗಬಹುದೆಂಬ ಕಳವಳದಲ್ಲಿದ್ದಾರೆ. ಶೇಕಡ 8ರಷ್ಟು ಜನ ಮಾತ್ರ ಕೇವಲ ವಾರ್ಷಿಕ ಬೋನಸ್ ಬರದೇ ಇರಬಹುದು ಎಂದು ಸಮೀಕ್ಷೆ ತಿಳಿಸಿದೆ.

ಯೂಗೌ ನಡೆಸಿದ ಸಮೀಕ್ಷೆಯ ಆರಂಭಿಕ ಅಂದಾಜಿನ ಪ್ರಕಾರ ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳು ಅಪಾಯದಲ್ಲಿವೆ. ಇದರಿಂದಾಗಿ ‌ನಿರುದ್ಯೋಗ ಸಮಸ್ಯೆ ತಾರಕಕ್ಕೇರಲಿದೆ. ಅದರಲ್ಲಿ ನಗರ ನಿರುದ್ಯೋಗ ದರ ಶೇಕಡಾ 30.9ಕ್ಕೆ ಏರಿಲಿದೆ. ಒಟ್ಟಾರೆ ನಿರುದ್ಯೋಗ ಈಗಾಗಲೇ ಶೇಕಡಾ 23.4ಕ್ಕೆ ಏರಿದೆ ಎನ್ನಲಾಗಿದೆ.

ಇದನ್ನು ಓದಿ: Shaktikanta Das; ದೇಶದ ಆರ್ಥಿಕ ಪುನಶ್ಚೇತನಕ್ಕೆ ಆರ್‌ಬಿಐನಿಂದ 10 ಅಂಶಗಳ ಘೋಷಣೆ, ರಿವರ್ಸ್‌ ರೆಪೋ ದರ ಇಳಿಕೆ!

ಮೊದಲ ಹಂತದ ಲಾಕ್​ಡೌನ್ ಘೋಷಣೆ ಆದಾಗಲೇ ಉದ್ಯೋಗ ಕಡಿತ ಮತ್ತು ಸಂಬಳ ಕುಗ್ಗಿಸುವ ಬಗ್ಗೆ ಅಂದಾಜು ಮಾಡಿದ್ದ ಕಾರ್ಮಿಕ ಇಲಾಖೆ ಆಗಲೇ 'ಯಾರನ್ನೂ ಕೆಲಸದಿಂದ ತೆಗೆಯಬಾರದೆಂದು' ಕಂಪನಿಗಳಿಗೆ ತಾಖೀತು ಮಾಡಿತ್ತು. ಎರಡನೇ ಹಂತದ ಲಾಕ್​ಡೌನ್ ಘೋಷಣೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಕೂಡ 'ಈ ಕಷ್ಟದ ಸಂದರ್ಭದಲ್ಲಿ ಕೆಲಸ ಬಹಳ ಅಗತ್ಯವಾದುದು. ಆದುದರಿಂದ ಕಂಪನಿಗಳು ನೌಕರರನ್ನು ಕೆಲಸದಿಂದ ತೆಗೆಯಬಾರದು' ಎಂದಿದ್ದರು. ಈಗ ಕಾರ್ಮಿಕ ಇಲಾಖೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಮತ್ತು ನೌಕರರ ರಾಜ್ಯ ವಿಮಾ ನಿಗಮಗಳಿಗೆ ಉದ್ಯೋಗ ಮತ್ತು ವೇತನ ಕಡಿತದ ಬಗ್ಗೆ, ಸಂಬಳದ ವಿಳಂಬ ಪಾವತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡಿ ಎಂದು ಕೇಳಿದೆ.

ಇದರಿಂದಾಗಿ ಈಗಾಗಲೇ ನೌಕರರ ಭವಿಷ್ಯ ನಿಧಿ ಸಂಸ್ಥೆ ಮತ್ತು ನೌಕರರ ರಾಜ್ಯ ವಿಮಾ ನಿಗಮಗಳು ಉದ್ಯೋಗ ಮತ್ತು ವೇತನ ಕಡಿತದ ಬಗ್ಗೆ, ಸಂಬಳದ ವಿಳಂಬ ಪಾವತಿಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿವೆ. ಏಪ್ರಿಲ್ 30ರಿಂದ ಮೇ ತಿಂಗಳ 7ನೇ ತಾರೀಖಿನವರೆಗೆ ಸಂಬಳ ವಿಲೇವಾರಿ ಸಮಯವಾಗಿದ್ದು, ಆ ನಿರ್ದಿಷ್ಟ ಸಮಯದತ್ತ ಗಮನ ಹರಿಸಲಿವೆ ಎಂದು ತಿಳಿದುಬಂದಿದೆ. ಬಳಿಕ ವರದಿ ಕೇಂದ್ರ ಕಾರ್ಮಿಕ ಇಲಾಖೆಗೆ ರವಾನೆಯಾಗಲಿದೆ. ಕಾರ್ಮಿಕ ಇಲಾಖೆ ಪ್ರಧಾನ ಕಚೇರಿಗೆ ತಲುಪಿಸಲಿದೆ. ಆನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಕಷ್ಟದ ಸಂದರ್ಭದಲ್ಲಿ ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲೇಬೇಕಿದೆ.
First published: