HOME » NEWS » Coronavirus-latest-news » CENTRAL GOVERNMENT PREPARE A NEW ROADMAP FOR LOCKDOWN 4 MAK

LockDown: ಲಾಕ್‌ಡೌನ್- 4; ಹೊಸ ಮಾರ್ಗಸೂಚಿ ರೂಪಿಸಲು ನಡೆದಿದೆ ಅಂತಿಮ‌ ಹಂತದ ತಯಾರಿ

ರಾಜ್ಯಗಳ ಶಿಫಾರಸು ಪರಿಶೀಲಿಸಿರುವ ಕೇಂದ್ರ ಗೃಹ ಇಲಾಖೆ ಹಂತಹಂತವಾಗಿ ರೈಲು ಮತ್ತು ವಿಮಾನ ಪ್ರಯಾಣ ಆರಂಭಿಸುವ ಆಲೋಚನೆ ಹೊಂದಿದೆ‌.‌ ವಲಯಗಳನ್ನು ಗುರುತಿಸುವ ಮತ್ತು ಮಾರುಕಟ್ಟೆಗಳನ್ನು ತೆರೆಯುವ ವಿವೇಚನೆಯನ್ನು‌ ರಾಜ್ಯ ಸರ್ಕಾರಗಳಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

news18-kannada
Updated:May 16, 2020, 8:52 AM IST
LockDown: ಲಾಕ್‌ಡೌನ್- 4; ಹೊಸ ಮಾರ್ಗಸೂಚಿ ರೂಪಿಸಲು ನಡೆದಿದೆ ಅಂತಿಮ‌ ಹಂತದ ತಯಾರಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮೇ 16): ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ಮಾಡಲೆಂದು ಹೇರಲಾಗಿದ್ದ ಮೂರನೇ ಹಂತದ ಲಾಕ್‌ಡೌನ್ ಮೇ. 17ಕ್ಕೆ ಮುಕ್ತಾಯವಾಗಲಿದೆ. ಮೇ 18 ರಿಂದ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಗೊಳ್ಳಲಿದೆ. ನಾಲ್ಕನೇ ಹಂತದ ಲಾಕ್‌ಡೌನ್ ನಿಯಮಗಳು ಹೇಗಿರಬೇಕೆಂದು ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ರೂಪಿಸುವ ಅಂತಿಮ ಹಂತದ ತಯಾರಿ ನಡೆಸುತ್ತಿದೆ. ಇಂದು ಅಥವಾ ನಾಳೆ ಮಾರ್ಗಸೂಚಿ ಹೊರಬೀಳುವ ಸಾಧ್ಯತೆ ‌ಇದೆ.

ಇತ್ತೀಚೆಗೆ ನಡೆದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಹಾಗೂ ಲಾಕ್‌ಡೌನ್ ಸಂದರ್ಭ ನಿಭಾಯಿಸುವ ದೃಷ್ಟಿಯಿಂದ ರಾಜ್ಯಗಳು ಈಗಾಗಲೇ ಮೌಲಿಕ ಸಲಹೆಗಳನ್ನು ನೀಡಿದ್ದೀರಿ‌. ಇನ್ನೂ ಏನಾದರೂ ಸಲಹೆ, ಶಿಫಾರಸುಗಳಿದ್ದರೆ ಮೇ‌ 15ರೊಳಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಿ. ಎಲ್ಲಾ ಸಲಹೆಗಳನ್ನು ಆಧರಿಸಿ‌ ಹೊಸ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುವುದು" ಎಂದು ಹೇಳಿದ್ದರು.

ಅದರ ಅನ್ವಯ ಈಗಾಗಲೇ ಬಹುತೇಕ ರಾಜ್ಯಗಳಿಂದ ಸಲಹೆ ಶಿಫಾರಸುಗಳು ಬಂದಿವೆ. ಈ ಶಿಫಾರಸುಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ರಾಜ್ಯಗಳಿಂದ ಬಂದಿರುವ ಸಲಹೆಗಳ ಪರಿಶೀಲನೆ ನಡೆಸಲಾಗುತ್ತಿದ್ದು ಲಾಕ್‌ಡೌನ್ ವಿಸ್ತರಣೆಗೆ ಪಂಜಾಬ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಅಸ್ಸಾಂ, ತೆಲಂಗಾಣ, ಮಿಜೊರಾಂ, ತ್ರಿಪುರ, ಸಿಕ್ಕಿಂ ಒಲವು ತೋರಿವೆ.

ಮಿಜೊರಾಂ ಈಗಾಗಲೇ ಮೇ‌ 31ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಬಿಜೆಪಿ ಆಡಳಿತ ಇರುವ ತ್ರಿಪುರದಿಂದಲೂ ಲಾಕ್‌ಡೌನ್ ಪರ ಒಲವು ವ್ಯಕ್ತವಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ಸಿಕ್ಕಿಂನಲ್ಲಿ ಒಂದೂ ಕೊರೋನಾ ಪ್ರಕರಣ ಇಲ್ಲ, ಆದರೂ ಸಿಕ್ಕಿಂ ಲಾಕ್‌ಡೌನ್ ವಿಸ್ತರಿಸುವಂತೆ ಮನವಿ ಮಾಡಿದೆ.

ಸಂಪೂರ್ಣ ಲಾಕ್‌ಡೌನ್ ತೆರವುಗೊಳಿಸಿ ಎಂದು ಯಾವೊಂದು ರಾಜ್ಯವೂ ತಿಳಿಸಿಲ್ಲ. ಕರ್ನಾಟಕ, ದೆಹಲಿ, ಆಂಧ್ರ, ಗುಜರಾತ್ ಮತ್ತು ಕೇರಳ ರಾಜ್ಯಗಳು ಆರ್ಥಿಕ ಚಟುವಟಿಕೆಗಳಿಗೆ ಆರಂಭಿಸಲು ಅನುಮತಿ ನೀಡಿ ಎಂದು ಒತ್ತಾಯಿಸಿವೆ. ಬಹುತೇಕ ರಾಜ್ಯಗಳು ಹಸಿರು, ಕಿತ್ತಳೆ ಮತ್ತು ಕೆಂಪು ವಲಯ ರೂಪಿಸಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೇ ನೀಡಿ ಎಂದು  ಒತ್ತಾಯ ಮಾಡಿವೆ.

ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ದೃಷ್ಟಿಯಿಂದ, ಉತ್ಪಾದನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಅಂತರರಾಜ್ಯ ಸಾರಿಗೆ ಶುರು‌ಮಾಡುವಂತೆ ಬಹುತೇಕ ರಾಜ್ಯಗಳಿಂದ ಒತ್ತಾಯ ಮಾಡಿವೆ. ಆದರೆ ನೆರೆಯ ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿದ್ದು ತಮ್ಮ ರಾಜ್ಯಕ್ಕೂ ಹರಡಬಹುದೆಂಬ ಭೀತಿಯಲ್ಲಿರುವ ಛತ್ತೀಸ್‌ಘಡ ಅಂತರರಾಜ್ಯ ಸಾರಿಗೆ ಶುರು‌ಮಾಡಲು  ವಿರೋಧ ವ್ಯಕ್ತಪಡಿಸಿದೆ‌.ತಿಂಗಳಾಂತ್ಯದವರೆಗೂ ವಿಮಾನ ಹಾರಾಟ, ರೈಲು ಸಂಚಾರ ಬೇಡ ಎಂದು ಕರ್ನಾಟಕ, ಬಿಹಾರ, ತಮಿಳುನಾಡು ಮನವಿ ಮಾಡಿವೆ. ದೆಹಲಿ ಸರ್ಕಾರ ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ಕೇಳಿದೆ. ಬೇರೆ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರಿಂದ ಮುಂದೆ ನಮ್ಮ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಬಹುದೆಂದು ಬಿಹಾರ, ಜಾರ್ಖಂಡ್ ಮತ್ತು ಒರಿಸ್ಸಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಬಳಿ ಆತಂಕ ತೋಡಿಕೊಂಡಿವೆ.

ರಾಜ್ಯಗಳ ಶಿಫಾರಸು ಪರಿಶೀಲಿಸಿರುವ ಕೇಂದ್ರ ಗೃಹ ಇಲಾಖೆ ಹಂತಹಂತವಾಗಿ ರೈಲು ಮತ್ತು ವಿಮಾನ ಪ್ರಯಾಣ ಆರಂಭಿಸುವ ಆಲೋಚನೆ ಹೊಂದಿದೆ‌.‌ ವಲಯಗಳನ್ನು ಗುರುತಿಸುವ ಮತ್ತು ಮಾರುಕಟ್ಟೆಗಳನ್ನು ತೆರೆಯುವ ವಿವೇಚನೆಯನ್ನು‌ ರಾಜ್ಯ ಸರ್ಕಾರಗಳಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ, ಹೊಸ ಮಾರ್ಗಸೂಚಿಯಲ್ಲಿ ಸದ್ಯಕ್ಕೆ ಶಾಲೆ, ಕಾಲೇಜು, ಥಿಯೇಟರ್, ಮಾಲ್ ಗಳನ್ನು ತೆರೆಯುವಂತಿಲ್ಲ, 5 ಸ್ಟಾರ್ ಹೊಟೆಲ್ ಗಳ‌ ಕಾರ್ಯಾರಂಭ ಇಲ್ಲ ಎಂಬ ಕಠಿಣ ನಿಲುವು ವಿಧಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಹಸಿರು ವಲಯದಲ್ಲಿ ಪೂರ್ಣವಾಗಿ ಲಾಕ್‌ಡೌನ್ ತೆರವುಗೊಳಿಸಲು, ಹಳದಿ ವಲಯದಲ್ಲಿ ಕೆಲವೇ ಕೆಲವು ನಿಯಮಗಳನ್ನು ವಿಧಿಸಲು ಹಾಗೂ ಕೆಂಪು ವಲಯದಲ್ಲಿ ಕೆಲವು ಕಠಿಣ ಕ್ರಮಗಳನ್ನು ಮುಂದುವರೆಸಲು ನಿರ್ಧಾರಿಸಲಾಗಿದೆ.  ಕೆಂಪು ವಲಯದಲ್ಲೂ ಸಲೂನ್, ಕ್ಷೌರದ ಅಂಗಡಿ, ಆಪ್ಟಿಕಲ್ಸ್ ಗೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಘೋರ ಅಪಘಾತ; ವಲಸೆ ಕಾರ್ಮಿಕರಿದ್ದ ಟ್ರಕ್‌ ಸಂಪೂರ್ಣ ಜಖಂ 23 ಜನ ಸಾವು
Youtube Video
First published: May 16, 2020, 8:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories