ನವದೆಹಲಿ: ಕೊರೋನಾ ಸೋಂಕು ಪತ್ತೆಯನ್ನು ಹೆಚ್ಚೆಚ್ಚು ಮಾಡಿ. ಆಗ ಮಾತ್ರ ಕೊರೋನಾ ವಿರುದ್ಧದ ಈ ನಿರ್ಣಾಯಕ ಯುದ್ಧದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಹಿಡಿದು, ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ಸೇವಾ ಕ್ಷೇತ್ರದ ತಜ್ಞರೆಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರವೂ ಕೂಡ ರಾಜ್ಯ ಸರ್ಕಾರಗಳಿಗೆ 'ಪೂಲ್ ಟೆಸ್ಟ್' ಮಾಡಿ ಎಂಬ ಸಲಹೆ ನೀಡಿದೆ.
ಏನಿದು ಪೂಲ್ ಟೆಸ್ಟ್?
ಪೂಲ್ ಟೆಸ್ಟ್ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಪ್ರತಿಯೊಬ್ಬರನ್ನೂ ಒಬ್ಬೊಬ್ಬರನ್ನಾಗಿ ಪರೀಕ್ಷೆ ಮಾಡಿಸಲು ಬಹಳ ಸಮಯಾವಕಾಶ ಬೇಕಾಗುವುದರಿಂದ ಒಂದು ಕಚೇರಿ, ಕಾರ್ಖಾನೆ, ಸಂಘ, ಸಂಸ್ಥೆ, ವಾಣಿಜ್ಯ ಸಂಕೀರ್ಣ ಅಥವಾ ನಿರ್ದಿಷ್ಟ ಪ್ರದೇಶ, ಸಮುದಾಯದ ಎಲ್ಲರ ರಕ್ತವನ್ನೂ ಸಂಗ್ರಹಿಸಿ ಎಲ್ಲಾ ರಕ್ತವನ್ನು ಬೆರಸಿ ಒಂದೇ ಸಲ ಪರೀಕ್ಷೆ ಮಾಡುವುದು. ಆಗ ಪಾಸಿಟಿವ್ ಬಂದರೆ ಮಾತ್ರ ಎಲ್ಲರ ರಕ್ತವನ್ನು ಪ್ರತ್ಯೇಕವಾಗಿ ಪರೀಕ್ಷೆಗೊಳಪಡಿಸಲಾಗುವುದು. ಇಲ್ಲದಿದ್ದರೆ ಇಡೀ ಆ ಕಚೇರಿ, ಕಾರ್ಖಾನೆ, ಸಂಘ, ಸಂಸ್ಥೆ, ವಾಣಿಜ್ಯ ಸಂಕೀರ್ಣ ಅಥವಾ ನಿರ್ದಿಷ್ಟ ಪ್ರದೇಶ, ಸಮುದಾಯದಲ್ಲಿ ಯಾರಲ್ಲೂ ಸೋಂಕು ಇಲ್ಲ ಎಂದು ನಿರ್ಣಯಿಸಬಹುದು. ಈ ಪ್ರಕ್ರಿಯೆಗೆ ಪೂಲ್ ಟೆಸ್ಟ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಜ್ವರ, ನೆಗಡಿ, ಕೆಮ್ಮಷ್ಟೇ ಅಲ್ಲ ಇನ್ನೂ ಇವೆ ಕೊರೋನಾ ಲಕ್ಷಣಗಳು: ಅಮೆರಿಕದ CDC ಪಟ್ಟಿ
ಈ ರೀತಿಯ ಪೂಲ್ ಟೆಸ್ಟ್ಗಳನ್ನು ಮಾಡುವಂತೆ ಕೇಂದ್ರ ಸರ್ಕಾರವೂ ಕೂಡ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿ 'ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಯಿತು, ಅಥವಾ ಪಾಸಿಟೀವ್ ಬಂತು ಎಂಬ ಕಾರಣಕ್ಕೆ ಅವರು ಕೆಲಸ ಮಾಡುವ ಇಡೀ ಕಟ್ಟಡವನ್ನೇ ಸೀಲ್ ಡೌನ್ ಮಾಡಬೇಡಿ. ಆ ಸೋಂಕು ಪೀಡಿತರ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಮಾತ್ರ ಕ್ವಾರಂಟೈನ್ ಮಾಡಿ. ಒಬ್ಬ ವ್ಯಕ್ತಿಯ ಕಾರಣಕ್ಕೆ ಇಡೀ ಕಟ್ಟಡವನ್ನು ಸೀಲ್ ಡೌನ್ ಮಾಡಿದರೆ ಆ ಕಚೇರಿಯ ಕೆಲಸಕ್ಕೆ ಅಡ್ಡಿಯಾಗಲಿದೆ. ಆರ್ಥಿಕ ಚಟುವಟಿಕೆ ಚುರುಕುಗೊಳಿಸುವ ದೃಷ್ಟಿಯಲ್ಲಿ ಇದು ಮಾರಕವಾಗಲಿದೆ ಎಂದು ಹೇಳಿದೆ.
ಅಲ್ಲದೇ ಆ ಕಚೇರಿ ಇರುವ ಪ್ರದೇಶವನ್ನು ಕಂಟೋನ್ಮೆಂಟ್ ಪ್ರದೇಶ ಅಥವಾ ಕೆಂಪು ವಲಯ ಎಂದು ಘೋಷಣೆ ಮಾಡಬೇಡಿ. ತೀರಾ ಅಗತ್ಯ ಎನಿಸಿದರೆ ಆ ಕಚೇರಿಯ ನಿರ್ದಿಷ್ಟ ಪ್ರದೇಶ ಅಥವಾ ಮಹಡಿಯನ್ನು ಮಾತ್ರ ನಿಷೇಧಿತ ಪ್ರದೇಶ ಎಂದು ನಿಗದಿಮಾಡಿ. ಈ ಬಗ್ಗೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಗಳಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅನುಮತಿ ಪಡೆಯಬೇಕು ಎಂದು ತಿಳಿಸಿದೆ.
ಹೀಗೆ ನಿರ್ದಿಷ್ಟ ವ್ಯಕ್ತಿ-ಕಚೇರಿ-ಪ್ರದೇಶದಲ್ಲಿ ಎಲ್ಲರನ್ನೂ ರೋಗದ ಸೋಂಕು ಇದೆಯೋ ಇಲ್ಲವೋ ಎಂದು ಪರೀಕ್ಷೆಗೆ ಒಳಪಡಿಸುವುದು ಬಹುದೊಡ್ಡ ಪ್ರಕ್ರಿಯೆ ಆಗಲಿದೆ. ಆದುದರಿಂದ ಈಗ ವ್ಯಾಪಕವಾಗಿ ಹರಡುತ್ತಿರುವ ಕೊರೋನಾವನ್ನು ಕೊನೆಗಾಣಿಸಲು ಸೋಂಕು ಪತ್ತೆಗಾಗಿ ಪೂಲ್ ಟೆಸ್ಟ್ ಮಾಡಿ ಎಂದು ಕೇಂದ್ರ ಗೃಹ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲಹೆ ನೀಡಿದೆ. ಅದೇ ಸಲಹೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯಗಳಿಗೆ ನೀಡಿದೆ.
ವರದಿ: ಧರಣೀಶ್ ಬೂಕನಕೆರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ