ಸಿನಿಮಾ ತಾರೆಯರು, ಕ್ರಿಕೆಟಿಗರಿಂದಲೇ ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ವಂತೆ.. ನಿಜನಾ?

ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇಕಡಾ 90ರಷ್ಟು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಕೇರಳ, ಛತ್ತೀಸ್​ಗಢ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಂಡು ಬರುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮುಂಬೈ (ಏ. 13): ಹೆಮ್ಮಾರಿ ಕೊರೋನಾ ಎರಡನೇ ಅಲೆ ಈ ವರ್ಷವನ್ನೂ ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದೆ. ಕಳೆದ ಬಾರಿಯಂತೆ ಮತ್ತೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾವು-ನೋವಿನ ಮಧ್ಯೆ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೊರೋನಾ 2ನೇ ಅಲೆಯ ಭೀಕರತೆಗೆ ಅತಿ ಹೆಚ್ಚು ತಲ್ಲಣಿಸಿರೋದು ಮಹಾರಾಷ್ಟ್ರ. ರಾಜಧಾನಿ ಮುಂಬೈನಲ್ಲೇ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಇದಕ್ಕೆಲ್ಲಾ ಸಿನಿಮಾ ತಾರೆಯರು ಹಾಗೂ ಕ್ರಿಕೆಟಿಗರೇ ಕಾರಣ ಎಂದು ಮಹಾರಾಷ್ಟ್ರದ ಸಚಿವರೇ ಆರೋಪಿಸುತ್ತಿದ್ದಾರೆ.

  ಮಹಾರಾಷ್ಟ್ರದ ಶಿವಸೇನೆ ಸರ್ಕಾರದ ಸಚಿವ ಅಸ್ಲಾಂ ಶೇಖ್ ಇಂತಹದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಗಳ ಬೆಡ್​ಗಳು ಬಾಲಿವುಡ್​ನ ನಟ- ನಟಿಯರು ಹಾಗೂ ಕ್ರಿಕೆಟಿಗರ ಪಾಲಾಗಿವೆ. ಸಣ್ಣಪುಟ್ಟ ಕಾಯಿಲೆಗಳಿಗೂ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವಾರಗಟ್ಟಲೇ ದಾಖಲಾಗುತ್ತಿದ್ದಾರೆ. ಸಿನಿಮಾ ತಾರೆಯರು, ಕ್ರಿಕೆಟಿಗರಿಂದಲೇ ಕೆಲ ಆಸ್ಪತ್ರೆಗಳು ತುಂಬಿ ಹೋಗಿವೆ ಎಂದು ಶೇಖ್ ಆರೋಪಿಸಿದ್ದಾರೆ.

  ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಸೆಲೆಬ್ರೆಟಿಗಳು ಅರ್ಥ ಮಾಡಿಕೊಳ್ಳಬೇಕು. ಆಸ್ಪತ್ರೆ ಬಿಲ್ ಕಟ್ಟುವ ಸಾಮರ್ಥ್ಯ ಇದೆಯೆಂದ ಮಾತ್ರಕ್ಕೆ ವಾರಗಟ್ಟಲೇ ಆಸ್ಪತ್ರೆಗಳಿಗೆ ದಾಖಲಾಗಬಾರದು. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿರುವವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗೋದಿಲ್ಲ. ಇನ್ನು ಕೊರೋನಾ ಸೋಂಕಿತ ಸೆಲೆಬ್ರೆಟಿಗಳು ರೋಗಲಕ್ಷಗಳಿಲ್ಲದಿದ್ದರೆ ಮನೆಯಲ್ಲೇ ಕ್ವಾರಂಟೈನ್ ಆಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬಹುದು. ಸುಮ್ಮನೆ ಹೆದರಿಕೊಂಡು ಆಸ್ಪತ್ರೆಗಳಲ್ಲೇ ಕ್ವಾರಂಟೈನ್ ಆಗುತ್ತೇವೆ ಅನ್ನೋದು ತಪ್ಪು ಎಂದು ಶ್ರೀಮಂತ ಸೆಲೆಬ್ರೆಟಿಗಳ ವಿರುದ್ಧ ಸಚಿವ ಅಸ್ಲಾಂ ಶೇಖ್ ಕಿಡಿಕಾರಿದ್ದಾರೆ.

  ಸದ್ಯ ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅಂತ ಕಠಿಣ ನಿಯಮಗಳಾಚೆಗೂ ಕೊರೋನಾ ಕೇಸ್​ಗಳ ಸಂಖ್ಯೆ ನಿಯಂತ್ರಕ್ಕೆ ಬರುತ್ತಿಲ್ಲ. ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್​ಡೌನ್​ ಹೇರುವ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಸದ್ಯ ಮುಂಬೈನಲ್ಲಿ 90 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಜಂಬೋ ಫೀಲ್ಡ್ ಆಸ್ಪತ್ರೆಯನ್ನೂ ನಿರ್ಮಿಸಲಾಗುತ್ತಿದೆ.

  ಇದನ್ನು ಓದಿ: ಅಧಿಕಾರ ದುರುಪಯೋಗ; ಲೋಕಾಯುಕ್ತ ವರದಿ ಬಳಿಕ ಕೇರಳ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ

  ದೇಶದಲ್ಲಿ ಸೋಮವಾರ ಒಂದೇ ದಿನ 1,61,736 ಹೊಸ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 97,168 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,36,89,453ಕ್ಕೆ ಏರಿಕೆ ಆಗಿದೆ. ಸೋಮವಾರ ಒಂದೇ ದಿನ ಕೊರೋನಾಗೆ 879 ಜನರು ಬಲಿ ಆಗಿದ್ದಾರೆ. ಸದ್ಯ ಮಹಾಮಾರಿ ಕೊರೋನಾಗೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,71,058ಕ್ಕೆ ಏರಿಕೆ ಆಗಿದೆ.

  ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇಕಡಾ 90ರಷ್ಟು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಕೇರಳ, ಛತ್ತೀಸ್​ಗಢ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಂಡು ಬರುತ್ತಿವೆ.

  • ವರದಿ: ಕಾವ್ಯಾ ವಿ

  Published by:HR Ramesh
  First published: