ಶ್ರೀನಗರ (ಮಾರ್ಚ್ 24); ಗೃಹ ಬಂಧನದಿಂದ 8 ತಿಂಗಳ ನಂತರ ಬಿಡುಗಡೆಯಾದ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಇಷ್ಟು ದಿನಗಳ ನಂತರ ಮೊದಲ ಬಾರಿಗೆ ತನ್ನ ತಂದೆ ಹಾಗೂ ಪೋಷಕರ ಜೊತೆಗೆ ಒಳ್ಳೆಯ ಊಟ ಮಾಡಿದೆ ಎಂದು ಭಾವನಾತ್ಮಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್ 5 ರಂದು ಜಮ್ಮು-ಕಾಶ್ಮೀದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಈ ಆದೇಶವನ್ನು ಹೊರಡಿಸುವ ಮುನ್ನ ಓಮರ್ ಅಬ್ದುಲ್ಲಾ ಸೇರಿದಂತೆ ಜಮ್ಮು-ಕಾಶ್ಮೀರದ ಎಲ್ಲಾ ಪ್ರಮುಖ ನಾಯಕರನ್ನೂ ಗೃಹ ಬಂಧನದಲ್ಲಿಡಲಾಗಿತ್ತು. ಹೀಗಾಗಿ ಓಮರ್ ಅಬ್ದುಲ್ಲಾ ಸತತ 232 ದಿನವನ್ನು ಪೊಲೀಸ್ ಗೃಹ ಬಂಧನದಲ್ಲಿ ಕಳೆದು ಈಗ ಬಿಡುಗಡೆಹೊಂದಿದ್ದಾರೆ.
ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀರಾಗಿರುವ ಅವರು ಇಂದು ಒಂದು ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ, "ಸುಮಾರು 8 ತಿಂಗಳುಗಳಲ್ಲಿ ಮೊದಲ ಬಾರಿಗೆ ನನ್ನ ಅಮ್ಮ ಮತ್ತು ತಂದೆಯೊಂದಿಗೆ ನಾನು ಒಳ್ಳೆಯ ಊಟ ಮಾಡಿದೆ. ಗೃಹ ಬಂಧನದ ಸಂದರ್ಭದಲ್ಲಿ ನಾನು ಒಳ್ಳೆಯ ಊಟ ಮಾಡಿದ್ದೇ ನೆನಪಿಲ್ಲ, ಅಲ್ಲಿ ಏನಾಗಿದ್ದೆ ಎಂಬುದೂ ತಿಳಿದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಕಾಶ್ಮೀರಿಗಳು “ಜೀವನ ಮತ್ತು ಸಾವಿನ ವಿರುದ್ಧ ಹೋರಾಡುತ್ತಿದ್ದಾರೆ, ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ ನಾವು ಬದುಕಲಿಕ್ಕಾಗಿ Covid-19 ವಿರುದ್ಧ ಹೋರಾಡಬೇಕಿದೆ. ಆದರೆ, ಈ ಸವಾಲನ್ನು ಎದುರಿಸಲು ನಾನು ನನ್ನ ವ್ಯಯಕ್ತಿಕ ಅನುಭವದ ಮೂಲಕ ಅಧಿಕಾರಿಗಳಿಗೆ ನನ್ನ ಸಮಾರ್ಥ್ಯ ಮೀರಿ ಸಹಾಯ ಮಾಡುತ್ತೇನೆ. ಅಲ್ಲದೆ, ಎಲ್ಲರೂ ಅದನ್ನೇ ಮಾಡುವಂತೆ ನಾನು ಮನವಿ ಮಾಡುತ್ತೇನೆ” ಎಂದಿದ್ಧಾರೆ.
ಮತ್ತೊಂದು ಟ್ವೀಟ್ನಲ್ಲಿ, “ಯಾರಾದರೂ ಕೊರೋನಾ ಕ್ವಾರಂಟೈನ್ ಅಥವಾ ಲಾಕ್ಡೌನ್ ಹೇಗಿರುತ್ತದೆ? ಅದನ್ನು ಹೇಗೆ ನಿಭಾಯಿಸಬೇಕು? ಎಂಬ ಅಗತ್ಯ ಮಾಹಿತಿ ಹಾಗೂ ಸಲಹೆ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ. ನನಗೆ ಈ ಕುರಿತು ಹಲವು ತಿಂಗಳ ಅನುಭವ ಇದೆ” ಎಂದು ಹೇಳುವ ಮೂಲಕ ತನ್ನನ್ನು ಗೃಹಬಂಧನದಲ್ಲಿ ಇರಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಮಾರಣಾಂತಿಕ ಕೊರೋನಾ ವೈರಸ್ ಸೋಂಕು ದೇಶದಾತ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ 500 ಕ್ಕೂ ಅಧಿಕ ಜನರಿಗೆ ಈ ಸೋಂಕು ತಗುಲಿದ್ದು, 10 ಜನ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಸೋಂಕಿತರು ಮನೆಯಲ್ಲೇ ಸ್ವ-ಬಂಧನಕ್ಕೊಳಗಾಗಿ ಚಿಕಿತ್ಸೆ ಪಡೆಯಲು ಸೂಚಿಸಿದೆ.
ಇದನ್ನೂ ಓದಿ : ಬೀದಿಗೆ ಬಂದವರ ಮೇಲೆಲ್ಲಾ ಲಾಠಿಚಾರ್ಚ್ ಮಾಡಿಸುವ ಮಾನಗೆಟ್ಟ ಸರ್ಕಾರವಿದು; ಸಿದ್ದರಾಮಯ್ಯ ವಾಗ್ದಾಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ