ನವ ದೆಹಲಿ (ಏಪ್ರಿಲ್ 28); ತಮಿಳುನಾಡು ಕೇರಳ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಲ್ಲಿ ಇತ್ತೀಚೆಗೆ ಚುನಾವಣೆ ನಡೆದಿತ್ತು. ಮುಂದಿನ ಭಾನುವಾರ ಈ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಆದರೆ, ಅಭ್ಯರ್ಥಿಗಳು ಚುನಾವಣಾ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಬೇಕಿದ್ದರೆ ಎರಡು ಡೋಸ್ ಕೊರೋನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಚುನಾವಣಾ ಆಯೋಗ ಇಂದು ಸ್ಪಷ್ಟಪಡಿಸಿದೆ. ಅಲ್ಲದೆ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಯಾವುದೇ ಕಾರಣಕ್ಕೂ ವಿಜಯೋತ್ಸವವನ್ನು ಆಚರಿಸಬಾರದು ಎಂದು ಈಗಾಗಲೇ ನಿಷೇಧಿಸಿ ಆದೇಶ ಹೊರಡಿಸಿದೆ.
ಇಂದು ಹೊಸ ಆದೇಶದಲ್ಲಿ ಚುನಾವಣಾ ಆಯೋಗವು "ಮೇ 2 (ಭಾನುವಾರ) ಎಣಿಕೆ ಕೇಂದ್ರಗಳ ಹೊರಗೆ ಯಾವುದೇ ಸಾರ್ವಜನಿಕ ಸಭೆಯನ್ನು ನಡೆಸುವಂತಿಲ್ಲ. 48 ಗಂಟೆಗಳಿಗಿಂತ ಹಳೆಯದಾದ ಕೋವಿಡ್ ಋಣಾತ್ಮಕ ಆರ್ಟಿ-ಪಿಸಿಆರ್ ಪರೀಕ್ಷೆಯ ನಂತರವೇ ಅಭ್ಯರ್ಥಿಗಳು ಮತ್ತು ಅವರ ಏಜೆಂಟರನ್ನು ಮತ ಎಣಿಕೆ ಕೇಂದ್ರದ ಒಳಗೆ ಅನುಮತಿಸಲಾಗುತ್ತದೆ.
ಇದರ ಹೊರತಾಗಿ ಅಭ್ಯರ್ಥಿಗಳು ಋಣಾತ್ಮಕ ಆರ್ಟಿ-ಪಿಸಿಆರ್ ವರದಿ, ರಾಪಿಡ್ ಆಂಟಿಜೆನ್ ಟೆಸ್ಟ್ ವರದಿ ಅಥವಾ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಎಣಿಕೆಯ ಪ್ರಾರಂಭಕ್ಕೆ ಕನಿಷ್ಠ 48 ಗಂಟೆಗಳ ಮೊದಲು ಸ್ವೀಕರಿಸಬೇಕು" ಎಂದು ತಿಳಿಸಲಾಗಿದೆ.
ಮೊನ್ನೆ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿತ್ತು. ದೇಶದಲ್ಲಿ ಎರಡನೇ ಕೊರೋನಾ ಅಲೆಗೆ ಚುನಾವಣಾ ಆಯೋಗವೇ ಕಾರಣ. ಹೀಗಾಗಿ ಚುನಾವಣಾ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನು ಏಕೆ ದಾಖಲಿಸಬಾರದು? ಎಂದು ಪ್ರಶ್ನೆ ಮಾಡಿತ್ತು. ಇದರ ಬೆನ್ನಿಗೆ ಇಂದು ಚುನಾವಣಾ ಆಯೋಗ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಸಾಕಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಆದೇಶಿಸಿದೆ.
ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಛೀಮಾರಿ:
ದೇಶದಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅಪಾರ ಜನ ಕೊರೋನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ಧಾರೆ. ಈ ನಡುವೆ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಛೀಮಾರಿ ಹಾಕಿದ್ದ ಮದ್ರಾಸ್ ಹೈಕೋರ್ಟ್, "ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಲು ಚುನಾವಣಾ ಆಯೋಗವೇ ಕಾರಣ.
ಸಂದಿಗ್ಧ ಸಂದರ್ಭದಲ್ಲಿ 5 ರಾಜ್ಯಗಳ ಚುನಾವಣೆಯಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡುವ ಮೂಲಕ ಚುನಾವಣಾ ಆಯೋಗ ಸ್ವತಃ ಕೊರೋನಾ ಹರಡಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳ ವಿರುದ್ಧ ಏಕೆ ಕೊಲೆ ಪ್ರಕರಣ ದಾಖಲಿಸಬಾರದು?" ಎಂದು ಹರಿಹಾಯ್ದಿತ್ತು. ಅಲ್ಲದೆ, ಇತ್ತೀಚೆಗೆ ಮುಗಿದ ತಮಿಳುನಾಡು ವಿಧಾನಸಭಾ ಚುನಾವಣಾ ಮತ ಎಣಿಕೆಗೂ ತಡೆ ಒಡ್ಡುವ ಬೆದರಿಕೆ ಹಾಕಿತ್ತು.
"COVID-19 ರ ಎರಡನೇ ತರಂಗಕ್ಕೆ ಚುನಾವಣಾ ಆಯೋಗ ಏಕೈಕ ಕಾರಣವಾಗಿದೆ. ನಿಮ್ಮ ಅಧಿಕಾರಿಗಳ ಮೇಲೆ ಏಕೆ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಬಾರದು?. ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ರಚಾರದ ಸಮಯದಲ್ಲಿ ಮುಖವಾಡಗಳು, ಸ್ಯಾನಿಟೈಸರ್ಗಳ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ಕೋವಿಡ್ ಸುರಕ್ಷತಾ ನಿಯಮಗಳನ್ನು ಜಾರಿಗೆ ತರವಲ್ಲಿ ಚುನಾವಣಾ ಸಂಸ್ಥೆ ವಿಫಲವಾಗಿದೆ" ಎಂದು ಹೈಕೋರ್ಟ್ ಕಿಡಿಕಾರಿತ್ತು.
ಇದನ್ನೂ ಓದಿ: ಯುಪಿ ಪಂಚಾಯತ್ ಚುನಾವಣೆಯಲ್ಲಿ 135 ಸಿಬ್ಬಂದಿ ಕೊರೋನಾಗೆ ಬಲಿ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್
"ಚುನಾವಣಾ ರ್ಯಾಲಿಗಳು ನಡೆದಾಗ ನೀವು ಇನ್ನೊಂದು ಗ್ರಹದಲ್ಲಿ ಇದ್ದಿರೇ?" ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಪ್ರಶ್ನಿಸಿದ್ದರು.
ಮೇ.2 ರಂದು ತಮಿಳುನಾಡಿನಲ್ಲಿ ಮತ ಎಣಿಕೆ ಆರಂಭವಾಗಲಿದೆ. ಆದರೆ, ಶುಕ್ರವಾರದೊಳಗೆ ಕೋವಿಡ್ ನಿಯಮಗಳನ್ನು ಜಾರಿಗೊಳಿಸುವ ಯೋಜನೆಯನ್ನು ಚುನಾವಣಾ ಆಯೋಗದ ಬಳಿ ಹೈಕೋರ್ಟ್ ಕೇಳಿತ್ತು. ಒಂದು ವೇಳೆ ಚುನಾವಣಾ ಆಯೋಗ ಈ ನೀಲನಕ್ಷೆಯನ್ನು ನೀಡದಿದ್ದರೆ ಮತ ಎಣಿಕೆಯನ್ನೇ ನಿಲ್ಲಿಸುವುದಾಗಿಯೂ ಎಚ್ಚರಿಸಿತ್ತು. ಇದೇ ಕಾರಣಕ್ಕೆ ಇಂದು ಚುನಾವಣಾ ಆಯೋಗ ಮತ ಎಣಿಕೆಗೆ ಕಟ್ಟು ನಿಟ್ಟಿನ ಕ್ರಮವನ್ನು ಸೂಚಿಸಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ