ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ನೇರ ತರಗತಿಗಳ ಪುನರಾರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಇ ಹೆಚ್ ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ವಾಸ್ತವ ಸಂಗತಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಸಂಕಷ್ಟ ಸಮಯದಲ್ಲಿ ವಾಸ್ತವ ಸ್ಥಿತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
"ಕೋವಿಡ್-19 ಸಾಂಕ್ರಾಮಿಕ ರೋಗ ಕಡಿಮೆಯಾಗದ ಹೊರತು ಭೌತಿಕ ತರಗತಿಗಳನ್ನು ಪುನಃ ತೆರೆಯಲು ದಿನಾಂಕ ನಿಗದಿಪಡಿಸುವಂತೆ ನಾವು ರಾಜ್ಯ ಸರ್ಕಾರವನ್ನು ಕೇಳಲು ಸಾಧ್ಯವಿಲ್ಲ ... ನಾವು ವಾಸ್ತವ ಸಂಗತಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ... ನಾವು ಏನನ್ನೂ ಭವಿಷ್ಯ ನುಡಿಯಲು ಆಗದು" ಎಂದು ನ್ಯಾಯಾಲಯ ಹೇಳಿದೆ.
6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಎಂ ರಾಧಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು ಮಕ್ಕಳ ಅನುಕೂಲಕ್ಕಾಗಿ ಶಾಲೆಗಳನ್ನು ಪುನಃ ತೆರೆಯಲು ಸರ್ಕಾರ ತಾತ್ಕಾಲಿಕ ದಿನಾಂಕಗಳನ್ನಾದರೂ ನಿಗದಿಪಡಿಸಬಹುದು ಎಂದು ವಾದ ಮಂಡಿಸಿದರು. ಆದರೆ ವಾದದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ “ನಾವು ಇಂದು ಯಾವುದೇ ನಿರ್ದೇಶನಗಳನ್ನು ನೀಡುತ್ತಿಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಅಧಿಕೃತವಾಗಿ ಸಲ್ಲಿಸಲಿ” ಎಂದ ನ್ಯಾಯಾಲಯ ಜೂನ್ 8ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು.
ಈ ಹಿಂದೆ (ಕೋವಿಡ್ ಎರಡನೆಯ ಅಲೆಗೂ ಮುನ್ನ) ಶಾಲೆಗಳ ಪುನರಾರಂಭ ವಿಚಾರದಲ್ಲಿ ರಾಜ್ಯ ಸರ್ಕಾರದ ತಾರ್ಕಿಕತೆಯನ್ನು ನ್ಯಾಯಾಲಯ ಪ್ರಶ್ನಿಸಿತ್ತು. ಶಾಲೆಗಳನ್ನು ನಡೆಸುವಂತೆ ಸೂಚಿಸುವ ಸರ್ಕಾರ ಬಿಸಿಯೂಟವನ್ನು ನೀಡಲು ಏಕೆ ಮುಂದಾಗುತ್ತಿಲ್ಲ ಎಂದು ಕಿವಿ ಹಿಂಡಿತ್ತು.
ಇದನ್ನು ಓದಿ: Modi vs Mamata: ಬಂಗಾಳ ಮುಖ್ಯ ಕಾರ್ಯದರ್ಶಿ ನಿವೃತ್ತಿ; ಸಿಎಂ ಮುಖ್ಯ ಸಲಹೆಗಾರರಾಗಿ ನೇಮಿಸಿದ ಮಮತಾ ಬ್ಯಾನರ್ಜಿ!
ವಿಚಾರಣೆಯ ಪ್ರಾಯೋಗಿಕ ನೇರ ಪ್ರಸಾದ ಮಾಡಿದ ಕರ್ನಾಟಕ ಹೈಕೋರ್ಟ್
ಗುಜರಾತ್ ಹೈಕೋರ್ಟ್ ಬಳಿಕ ವಿಚಾರಣೆಯನ್ನು ಪ್ರಾಯೋಗಿಕವಾಗಿ ನೇರ ಪ್ರಸಾರ ಮಾಡಿದ ದೇಶದ ಎರಡನೇ ಉಚ್ಚ ನ್ಯಾಯಾಲಯವಾಗಿ ಕರ್ನಾಟಕ ಹೈಕೋರ್ಟ್ ಸೋಮವಾರ ಗುರುತಿಸಿಕೊಂಡಿತು. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ನಡೆಸಿದ ವಿಚಾರಣೆಯೊಂದನ್ನು ಹೈಕೋರ್ಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ನೇರ ಪ್ರಸಾರ ಮಾಡಲಾಯಿತು.
ಸೋಮವಾರದ ನೇರ ಪ್ರಸಾರ ಯಶಸ್ವಿಯಾದರೆ ಶೀಘ್ರವೇ ಹೈಕೋರ್ಟ್ ಇತರ ವಿಚಾರಣೆಗಳ ನೇರ ಪ್ರಸಾರ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಬೈತಕೊಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಮತ್ತು ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಯಿತು.
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಬೈತಕೊಲ್ ಗ್ರಾಮದಲ್ಲಿ ವಾಣಿಜ್ಯ ಕಾರವಾರ ಬಂದರಿನ ಪ್ರಸ್ತಾವಿತ ಎರಡನೇ ಹಂತದ ಅಭಿವೃದ್ಧಿಗೆ ಅನುಮೋದನೆ ನೀಡುವಲ್ಲಿ ಪರಿಸರ ಪರಿಣಾಮ ಮತ್ತು ಪರಿಸರ ಕಾನೂನುಗಳ ಉಲ್ಲಂಘನೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಇವೆ ಎಂದು ಅಹವಾಲು ಸಲ್ಲಿಸಲಾಗಿತ್ತು.
ಮಧ್ಯಾಹ್ನ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಪೀಠ ಮೌಖಿಕವಾಗಿ ಹೀಗೆ ಹೇಳಿತು: "ಇಂದು, ನಾವು ಎರಡು ಅರ್ಜಿಗಳ ನೇರ ವಿಚಾರಣೆ ನಡೆಸುತ್ತಿದ್ದೇವೆ… ಪ್ರಾಯೋಗಿಕವಾಗಿ ಇದನ್ನು ಕೈಗೆತ್ತಿಕೊಂಡಿದ್ದೇವೆ. ಇದನ್ನು ವಕೀಲ ಸಮುದಾಯದ ಗಮನಕ್ಕೆ ತರುವುದು ನಮ್ಮ ಕರ್ತವ್ಯ." ಎಂದು ನ್ಯಾಯಪೀಠ ಹೇಳಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ