ಕೊರೋನಾ ಭಯ: ಏರ್​ಪೋರ್ಟ್​ಗೆ ಸಿಗ್ತಿಲ್ಲ ಕ್ಯಾಬ್​, ನಿಲ್ದಾಣಕ್ಕೆ ಕಾಲಿಡಲ್ಲ ಅಂತಾರೆ ಡ್ರೈವರ್​ಗಳು

90 ಸಾವಿರ ಪ್ರಯಾಣಿಕರನ್ನು ಪ್ರತಿನಿತ್ಯ ಏರ್​​ಪೋರ್ಟ್​ಗೆ ತಲುಪಿಸುವ ಮತ್ತು ಅಲ್ಲಿಂದ ಪಿಕಪ್ ಮಾಡಿ ನಗರದ ಇತರೆಡೆ ಡ್ರಾಪ್ ಮಾಡುವ ಒಂದು ದೊಡ್ಡ ಟ್ರಾನ್ಸ್​ಪೋರ್ಟ್​ ಉದ್ಯಮ ಜಾಲವೇ ವಿಮಾನ ನಿಲ್ದಾಣಕ್ಕೆ ಪೂರಕವಾಗಿ ಬೆಳೆದು ನಿಂತಿದೆ.

ಏರ್​ಪೋರ್ಟ್​ ಟಾಕ್ಸಿ.

ಏರ್​ಪೋರ್ಟ್​ ಟಾಕ್ಸಿ.

  • Share this:
ಮಹಾಮಾರಿ ಕೊರೋನಾ ಭಾರತಕ್ಕೂ ಕಾಲಿಟ್ಟಿದೆ, ಬೆಂಗಳೂರನ್ನೂ ಆವರಿಸಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿದಾಕ್ಷಣ ಕೇಂದ್ರ ಸರ್ಕಾರ ಮಾಡಿದ ಮೊದಲ ಕಾರ್ಯ ಏರ್​ಪೋರ್ಟ್​ಗಳ ಮೇಲೆ ಕಟ್ಟೆಚ್ಚರ ವಹಿಸಿದ್ದು. ಕಳೆದ ಎರಡು ದಿನಗಳಿಂದ ಪ್ರತಿಯೊಂದು ಏರ್​ಪೋರ್ಟ್​ಗಳಲ್ಲಿ ವೈದ್ಯಕೀಯ ಘಟಕ ಸ್ಥಾಪಿಸಿ ಎಲ್ಲಾ ಪ್ರಯಾಣಿಕರನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ. ಅಲ್ಲದೆ, ಯಾವ ದೇಶದಿಂದ ಪ್ರಯಾಣಿಕರು ಭಾರತ ಪ್ರವೇಶಿಸಬಹುದು? ಮತ್ತು ಯಾರು ಪ್ರವೇಶಿಸುವಂತಿಲ್ಲ ಎಂಬ ವಿದೇಶಿ ಪ್ರವಾಸ ಸಲಹಾ ಪಟ್ಟಿಯನ್ನು (Travel Advisory) ಬಿಡುಗಡೆ ಮಾಡಲಾಗಿದೆ. 

ಚೀನಾದಿಂದ ಆರಂಭವಾದ ಮಾರಣಾಂತಿಕ ಕೊರೋನಾ ವೈರಸ್ ನಂತರ ದಕ್ಷಿಣ ಕೋರಿಯಾ, ಥಾಯ್ಲೆಂಡ್, ಇರಾನ್, ಮಲೇಷಿಯಾ, ಸಿಂಗಾಪುರ್, ಕಾಂಬೋಡಿಯಾ ಮತ್ತು ಜಪಾನ್ ಸೇರಿದಂತೆ ಸುಮಾರು 70ಕ್ಕೂ ಅಧಿಕ ರಾಷ್ಟ್ರಗಳಿಗೆ ಹರಡಿದೆ. 3,000 ಸಾವಿರಕ್ಕೂ ಅಧಿಕ ಜನರ ಪ್ರಾಣ ಬಲಿ ಪಡೆದಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಅಮೆರಿಕ ಜೊತೆಗೆ ಭಾರತವೂ ಇದೆ ಎಂಬುದೇ ಆಘಾತಕಾರಿ ವಿಚಾರ.

ಭಾರತದಲ್ಲಿ ಈಗಾಗಲೇ 28 ಜನರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಈ ಪೈಕಿ ಬೆಂಗಳೂರಿನಲ್ಲೇ ಸುಮಾರು 6 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಮತ್ತು 1,690 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ ವಿಶೇಷ ಘಟಕವನ್ನು ಆರಂಭಿಸಲಾಗಿದೆ.

ಅಸಲಿಗೆ ಕೊರೋನಾ ಎಂಬ ಮಹಾಮಾರಿ ಭಾರತವನ್ನು ಪ್ರವೇಶಿಸಿದ್ದೇ ವಿದೇಶದಿಂದ ಮತ್ತು ಏರ್​ಪೋರ್ಟ್​ಗಳ​ ಮೂಲಕ. ಚೀನಾ ಮತ್ತು ಇತರೆ ವಿದೇಶಗಳಿಂದ ಭಾರತಕ್ಕೆ ಆಗಮಿಸಿದ್ದ ಪ್ರವಾಸಿಗಳು ಮತ್ತು ವಿದ್ಯಾರ್ಥಿಗಳಿಂದಲೇ ದೇಶದಲ್ಲಿ ಕೊರೋನಾ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಹೀಗಾಗಿ ಇಷ್ಟು ದಿನ ಏರ್​ಪೋರ್ಟ್​ ಡ್ಯೂಟಿ ಎಂದಾಕ್ಷಣ ಎದ್ದುಬಿದ್ದು ಓಡುತ್ತಿದ್ದ ಕ್ಯಾಬ್​ ಡ್ರೈವರ್​ಗಳು ಇಂದು ಏರ್​ಪೋರ್ಟ್​ಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಇದರಿಂದ ಪ್ರಯಾಣಿಕರು ಸಾಕಷ್ಟು ತಾಪತ್ರಯಗಳನ್ನು ಅನುಭವಿಸುವಂತಾಗಿದೆ.

ಒಂದು ದಿನಕ್ಕೆ ವಿಮಾನ ನಿಲ್ದಾಣ ತಲುಪುವ ಜನರೆಷ್ಟು ಗೊತ್ತಾ? ಕ್ಯಾಬ್ ಉದ್ಯಮದ ಆದಾಯದ ಮಾಹಿತಿ ಇದೆಯಾ?

ದೇಶದ ಪ್ರತಿಷ್ಠಿತ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಒಂದು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ ನೀಡುವ ಅಂಕಿ ಅಂಶಗಳ ಪ್ರಕಾರ ಒಂದು ದಿನಕ್ಕೆ ನಗರದಿಂದ ವಿಮಾನ ನಿಲ್ದಾಣದಿಂದ ಸುಮಾರು 660 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಮತ್ತು ಪ್ರತಿನಿತ್ಯ ಸುಮಾರು 90,000 ಕ್ಕೂ ಅಧಿಕ ಪ್ರಯಾಣಿಕರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವಲಂಭಿಸಿದ್ದಾರೆ.

ಹೀಗಾಗಿ 90 ಸಾವಿರ ಪ್ರಯಾಣಿಕರನ್ನು ಪ್ರತಿನಿತ್ಯ ಏರ್​​ಪೋರ್ಟ್​ಗೆ ತಲುಪಿಸುವ ಮತ್ತು ಅಲ್ಲಿಂದ ಪಿಕಪ್ ಮಾಡಿ ನಗರದ ಇತರೆಡೆ ಡ್ರಾಪ್ ಮಾಡುವ ಒಂದು ದೊಡ್ಡ ಟ್ರಾನ್ಸ್​ಪೋರ್ಟ್​ ಉದ್ಯಮ ಜಾಲವೇ ವಿಮಾನ ನಿಲ್ದಾಣಕ್ಕೆ ಪೂರಕವಾಗಿ ಬೆಳೆದು ನಿಂತಿದೆ.

ಪ್ರಸ್ತುತ ಬೆಂಗಳೂರು ಮಹಾನಗರ ಒಂದರಲ್ಲೇ ಸುಮಾರು 1.66 ಲಕ್ಷ ಟ್ಯಾಕ್ಸಿಗಳು ಹಾಗೂ 1.11 ಲಕ್ಷ ಕ್ಯಾಬ್​ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಶೇ 30 ರಷ್ಟು ವಾಹನಗಳು ಪ್ರತಿನಿತ್ಯ ಏರ್ಪೋರ್ಟ್ ಪಿಕಪ್ ಡ್ರಾಪ್ ಕೆಲಸದಲ್ಲೇ ನಿರತವಾಗಿವೆ ಎನ್ನುತ್ತಿವೆ ಅಂಕಿಅಂಶಗಳು. ಅಂದರೆ, ಏರ್​ಪೋರ್ಟ್​ ಡ್ಯೂಟಿಗೆಂದು ಪ್ರತಿನಿದಿನ ನಿಯೋಜಿಸಲಾಗುವ ವಾಹನಗಳ ಸಂಖ್ಯೆ ಬರೋಬ್ಬರಿ 20 ರಿಂದ 30 ಸಾವಿರ. ಇದನ್ನು ನಿರ್ವಹಿಸಲು ಹತ್ತಾರು ಟ್ರಾನ್ಸ್​ಪೋರ್ಟ್​ ಕಂಪೆನಿಗಳು ಸಹ ತಲೆ ಎತ್ತಿವೆ. ಹೇಗೇ ನೋಡಿದರೂ ಇದು ನೂರಾರು ಕೋಟಿ ವ್ಯವಹಾರದ ಉದ್ಯಮ ಎನ್ನಲಡ್ಡಿಯಿಲ್ಲ.

ಈ ಮೇಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಸಾಕು ಒಂದು ದಿನದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಷ್ಟು ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಮತ್ತು ಎಷ್ಟು ಜನ ಈ ವಿಮಾನ ನಿಲ್ದಾಣವನ್ನು ಅವಲಂಭಿಸಿದ್ದಾರೆ ಎಂಬುದು ತಿಳಿಯುತ್ತದೆ.

ಆದರೆ, ಕೊರೋನಾ ಭೀತಿಯಿಂದ ಕಳೆದ ಎರಡು ದಿನಗಳಿಂದ ಬೆಂಗಳೂರಿಗೆ ಆಗಮಿಸುವ ವಿಮಾನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಇನ್ನೂ ಚೀನಾ, ಇರಾನ್, ಕೋರಿಯಾ, ಥಾಯ್ಲೆಂಡ್, ಜಪಾನ್ ನಂತರ ರಾಷ್ಟ್ರಗಳಿಂದ ಭಾರತಕ್ಕೆ ಪ್ರಯಾಣಿಕರ ವಿಮಾನ ಪ್ರವೇಶಕ್ಕೆ ಸರ್ಕಾರವೇ ನಿಷೇಧ ಹೇರಿದೆ. ಆದರೆ, ಕೊರೋನಾ ಪ್ರಭಾವ ಇಲ್ಲದ ದೇಶದಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರನ್ನು ಪಿಕಪ್ ಮಾಡಲೂ ಸಹ ಇದೀಗ ಕ್ಯಾಬ್ ಡ್ರೈವರ್ಗಳು ವಿಮಾನ ನಿಲ್ದಾಣಕ್ಕೆ ಹೋಗುತ್ತಿಲ್ಲ.

ಕೊರೋನಾ ಎಂಬ ಮಹಾಮಾರಿ ಆ ಪರಿ ಎಲ್ಲರನ್ನೂ ಬಯದಲ್ಲಿರುವಂತೆ ಮಾಡಿದೆ. ಪರಿಣಾಮ ಪ್ರಯಾಣಿಕರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಇನ್ನೂ ನೂರಾರು ಕೋಟಿಯ ಟ್ರಾನ್ಸ್​ಪೋರ್ಟ್​ ಉದ್ಯಮ ಕೊರೋನಾ ಭೀತಿಯಿಂದಾಗಿ ನಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ : ಕೊರೋನಾ ಪ್ರಹಾರಕ್ಕೆ 3 ಸಾವಿರ ಬಲಿ; ಇಲ್ಲಿದೆ ಜಗತ್ತಿನ ಮಾರಕ ವೈರಸ್​ಗಳ ಟಾಪ್​5 ಪಟ್ಟಿ!

 
First published: