ನಾನು ಅನುಭವಿಸಿದ್ದು ಇನ್ಯಾರಿಗೂ ಬೇಡ.. ಉದ್ಯಮಿಯಿಂದ ಕೇವಲ 1 ರೂಪಾಯಿಗೆ ಆಕ್ಸಿಜನ್ ಸಿಲಿಂಡರ್!

ಕಾಳಸಂತೆಯಲ್ಲಿ ಸದ್ಯ ಬರೋಬ್ಬರಿ ಒಂದು ಸಿಲಿಂಡರ್​ ಆಕ್ಸಿಜನ್​ 30 ಸಾವಿರ ರೂಪಾಯಿಗಳಿಗೆ ಮಾರಲಾಗುತ್ತಿದೆ. ಅಷ್ಟು ಹಣ ಕೊಡಲು ಸಾಧ್ಯವಾಗದ ಬಡವರು ದೂರದೂರುಗಳಿಂದ ಇಲ್ಲಿಗೆ ಆಗಮಿಸಿ ಆಕ್ಸಿಜನ್​ ಸಿಲಿಂಡರ್​ ಪಡೆಯುತ್ತಿದ್ದಾರೆ.

Businessman refills oxygen cylinders for just Re 1 in UPs Hamirpur

Businessman refills oxygen cylinders for just Re 1 in UPs Hamirpur

  • Share this:
ಲಖನೌ: ದೇಶದಲ್ಲಿ ಕೊರೋನಾ 2ನೇ ಅಲೆಯ ಭೀಕರತೆ ತಾಂಡವವಾಡುತ್ತಿದೆ. ಆಕ್ಸಿಜನ್​​​ ಕೊರತೆಯಿಂದ ಸೋಂಕಿತರು ಉಸಿರು ಚೆಲ್ಲುತ್ತಿದ್ದಾರೆ. ಆಕ್ಸಿಜನ್​ ಪೂರೈಕೆ ಸಮಸ್ಯೆಯನ್ನು ನೀಗಿಸಲು ಸರ್ಕಾರಗಳು ಹರಸಾಹಸಪಡುತ್ತಿವೆ. ಇಂಥ ಸಂಕಷ್ಟದ ಸಮಯದಲ್ಲಿ ಉದ್ಯಮಿಯೊಬ್ಬರು ಹೃದಯವೈಶಾಲ್ಯ ಮೆರೆದಿದ್ದಾರೆ. ಸದ್ಯ ಕಾಳಸಂತೆಯಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿಗಳಿಗೆ ಬಿಕರಿಯಾಗುತ್ತಿರುವ ಆಕ್ಸಿಜನ್​ ಸಿಲಿಂಡರ್​​ನ್ನು ಕೇವಲ 1 ರೂಪಾಯಿಗೆ ನೀಡುತ್ತಿದ್ದಾರೆ. ಉತ್ತರ ಪ್ರದೇಶದ ಹಮಿರ್​ಪುರ್​​ ಜಿಲ್ಲೆಯ ಉದ್ಯಮಿ ಮನೋಜ್​ ಗುಪ್ತಾ ಎಂಬುವವರು ಕೇವಲ 1 ರೂ.ಗೆ ಸಿಲಿಂಡರ್​ ರೀಫಿಲ್​ ಮಾಡಿಕೊಡುವ ಮೂಲಕ ಸೋಂಕಿತರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಮನೋಜ್​ ಗುಪ್ತಾರ ಮಾನವೀಯತೆಯಿಂದ ನಿತ್ಯ ಅದೆಷ್ಟೋ ಸೋಂಕಿತರು ಸಾವಿನ ದವಡೆಯಿಂದ ಪಾರಾಗುತ್ತಿದ್ದಾರೆ.

ಹಮೀರ್​ಪುರದಲ್ಲಿ ಕೈಗಾರಿಕೆಗಳನ್ನು ನಡೆಸುತ್ತಿರುವ ಗುಪ್ತಾ ಅವರು ಕೊರೋನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಸಹಾಯಕ್ಕೆ ಧಾವಿಸಿದ್ದಾರೆ. ಆಕ್ಸಿಜನ್​ಗೆ ಎಲ್ಲೆಲ್ಲೂ ಬೇಡಿಕೆ ಇರುವ ಸಮಯದಲ್ಲಿ ಯಾವುದೇ ಲಾಭದ ಉದ್ದೇಶವನ್ನು ನೋಡದೇ ನೆರವಾಗುತ್ತಿದ್ದಾರೆ. ಕೇವಲ 1 ರೂಪಾಯಿಗೆ ಆಕ್ಸಿಜನ್​ ತುಂಬಿಸಿಕೊಡುವ ಗುಪ್ತಾರ ನಿರ್ಧಾರ ಹಿಂದೆಯೂ ಒಂದು ಮನಕಲಕುವ ಘಟನೆಯಿದೆ.

ಕಳೆದ ವರ್ಷ ಮನೋಜ್​ ಗುಪ್ತಾ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ನಾನು ಅನುಭವಿಸಿದ ಯಾತನೆ ಮತ್ತೊಬ್ಬರು ಅನುಭವಿಸಬಾರದು ಎಂಬ ಉದ್ದೇಶದಿಂದಲೇ ಈ ಕೆಲಸಕ್ಕೆ ಮುಂದಾದೆ ಎಂದು ಗುಪ್ತಾ ಅವರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕಾರ್ಖಾನೆಯಲ್ಲಿ ನಿತ್ಯ 1 ಸಾವಿರ ಸಿಲಿಂಡರ್​ಗಳಿಗೆ ಆಕ್ಸಿಜನ್​ ತುಂಬಬಹುದು. ಕೇವಲ 1 ರೂಪಾಯಿ ಪಡೆದು ನಾನು ನಿತ್ಯ 1 ಸಾವಿರ ಸಿಲಿಂಡರ್​ಗಳಿಗೆ ಆಕ್ಸಿಜನ್​ ತುಂಬಿ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಗುಪ್ತಾ ಅವರು ಹೆಮ್ಮೆಯಿಂದ ತಿಳಿಸಿದರು.

ಇದನ್ನೂ ಓದಿ: ಕಳ್ಳರಲ್ಲೂ ಕರುಣೆ ಹುಟ್ಟಿಸಿದ ಕೊರೋನಾ.. ಕದ್ದ ವ್ಯಾಕ್ಸಿನ್​ ಬಾಕ್ಸನ್ನು ಹಿಂತಿರುಗಿಸಿ ಕ್ಷಮೆ ಕೇಳಿದ ಕಳ್ಳರು!

ಗುಪ್ತಾ ಅವರಿಂದ ಆಕ್ಸಿಜನ್​ ಸಿಲಿಂಡರ್​ಗಳನ್ನು ರೀಫಿಲ್​ ಮಾಡಿಸಿಕೊಳ್ಳಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಜನ ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ತಮ್ಮವರನ್ನು ಉಳಿಸಿಕೊಳ್ಳಲು ಆಕ್ಸಿಜನ್​ಗಾಗಿ ನೂರಾರು ಜನ ನಿತ್ಯ ಕಾರ್ಖಾನೆ ಬಳಿ ಜಮಾಯಿಸುತ್ತಿದ್ದಾರೆ. ಸೋಂಕಿತರ RTPCR ರಿಪೋರ್ಟ್​ ನೋಡಿ ಆಕ್ಸಿಜನ್​ ಸಿಲಿಂಡರ್​ ರಿಫೀಲ್​ ಮಾಡಿಕೊಡಲಾಗುತ್ತಿದೆ. ಕಾಳಸಂತೆಯಲ್ಲಿ ಸದ್ಯ ಬರೋಬ್ಬರಿ ಒಂದು ಸಿಲಿಂಡರ್​ ಆಕ್ಸಿಜನ್​ 30 ಸಾವಿರ ರೂಪಾಯಿಗಳಿಗೆ ಮಾರಲಾಗುತ್ತಿದೆ. ಅಷ್ಟು ಹಣ ಕೊಡಲು ಸಾಧ್ಯವಾಗದ ಬಡವರು ದೂರದೂರುಗಳಿಂದ ಇಲ್ಲಿಗೆ ಆಗಮಿಸಿ ಆಕ್ಸಿಜನ್​ ಸಿಲಿಂಡರ್​ ಪಡೆಯುತ್ತಿದ್ದಾರೆ. ಸಂಕಷ್ಟದಿಂದ ಬಂದ ಯಾರನ್ನೂ ಗುಪ್ತಾ ನಿರಾಸೆಗೊಳಿಸದೆ ಸಾಮರ್ಥ್ಯ ಇರುವಷ್ಟು ಆಕ್ಸಿಜನನ್ನು ರೀಫಿಲ್​ ಮಾಡಿ ಕೊಡುತ್ತಿದ್ದಾರೆ. ಆಕ್ಸಿಜನ್​​ ಕೊರತೆಯಿಂದ ಸಾವಿನ ಹಂಚಿನಲ್ಲಿದ್ದ ಅದೆಷ್ಟೋ ಸೋಂಕಿತರು ಇವರಿಂದ ಪಾರಾಗುತ್ತಿದ್ದಾರೆ.

ಕೊರೋನಾ ಸಂಕಷ್ಟದಲ್ಲಿ ಆಕ್ಸಿಜನ್​ ನೀಡಿ ನೆರವಾಗುತ್ತಿರುವ ಮನೋಜ್​ ಗುಪ್ತಾರಿಗೆ ಸಿಲಿಂಡರ್​ ಪಡೆದವರು ಸ್ಥಳದಲ್ಲೇ ಕೈ ಎತ್ತಿ ಮುಗಿದು ಕೃತಜ್ಞತೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿದೆ. ಎಲ್ಲದಕ್ಕೂ ಸರ್ಕಾರಗಳಿಗೆ ಕಾಯದೇ ನಮ್ಮನಮ್ಮಲ್ಲೇ ಸಹಾಯಕ್ಕೆ ನಿಂತರೆ ಈ ದುರ್ದಿನಗಳನ್ನು ಮೆಟ್ಟಿ ನಿಲ್ಲಬಹುದು ಎಂಬುವುದನ್ನು ಗುಪ್ತಾ ಅವರು ತೋರಿಸಿದ್ದಾರೆ.
Published by:Kavya V
First published: