Coronavirus Effect: ಕೊರೊನಾಘಾತಕ್ಕೆ ವಾಣಿಜ್ಯ ಕೇಂದ್ರಿತ ಪ್ರದೇಶಗಳ ಸಾವಿರಾರು ಕೋಟಿ ವಹಿವಾಟು ಬುಡಮೇಲು

ಚಿಕ್ಕಪೇಟೆಯೊಂದರಲ್ಲೇ  ಚಿನ್ನಬೆಳ್ಳಿ ವ್ಯಾಪಾರದ ವಹಿವಾಟೇ ಒಂದು ಸಾವಿರ ಕೋಟಿ. ಇನ್ನು ರೇಷ್ಮೆ ಸೀರೆ ಮಾರಾಟದಿಂದ ಆಗು ಕಮಾಯಿ  ದಿನಕ್ಕೆ ಇಪ್ಪತ್ತೈದು ಲಕ್ಷ.  ಚಿಕ್ಕಪೇಟೆ ಹಾಗೂ ಸುತ್ತಮುತ್ತಲ ವಾಣಿಜ್ಯ ಪ್ರದೇಶಗಳೇ ಬಿಬಿಎಂಪಿಯ ತೆರಿಗೆಗೆ ಹತ್ತಿರತ್ತಿರ ಒಂದು ಸಾವಿರ ಕೋಟಿಯಷ್ಟು ವರಮಾನವನ್ನು ತಂದುಕೊಡುತ್ತಿದ್ದವು.

news18-kannada
Updated:July 7, 2020, 8:32 PM IST
Coronavirus Effect: ಕೊರೊನಾಘಾತಕ್ಕೆ ವಾಣಿಜ್ಯ ಕೇಂದ್ರಿತ ಪ್ರದೇಶಗಳ ಸಾವಿರಾರು ಕೋಟಿ ವಹಿವಾಟು ಬುಡಮೇಲು
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಕಾರಣದಿಂದಾಗಿ ವಾಣಿಜ್ಯ ಚಟುವಟಿಕೆಗಳು ಈಗಾಗಲೇ ಬುಡಮೇಲಾಗಿದೆ. ಅನೇಕ ಉದ್ದಿಮೆಗಳು ಈಗಾಗಲೇ ಬಾಗಿಲು ಮುಚ್ಚಿಕೊಂಡಿವೆ ಇದನ್ನೇ ನಂಬಿ ಬದುಕುತ್ತಿದ್ದ ಕಾರ್ಮಿಕರ ಜೀವನಗಳು ಮೂರಾಬಟ್ಟೆಯಾಗಿವೆ ಇದೆಲ್ಲದರ ನಡುವೆ ಅತಿ ಹೆಚ್ಚು ಲಾಭವನ್ನು ತಂದು ಕೊಡುತ್ತಿದ್ದ ವಾಣಿಜ್ಯ ಪ್ರದೇಶಗಳಲ್ಲಿ ಕೊರೋನಾ ತನ್ನ ವಿಧ್ವಂಸಕತೆ ಮೆರೆಯುತ್ತಿರುವುದರಿಂದ, ಆರ್ಥಿಕತೆ ಮತ್ತಷ್ಟು ಪಾತಾಳಕ್ಕಿಳಿದಿದೆ.

ರಾಜಧಾನಿಯ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಎಂಜಿ ರಸ್ತೆ ಹಾಗೂ ಅದಕ್ಕೆ ಹೊಂದಿಕೊಂಡಂತ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ವ್ಯಾಪಾರಿಗಳು ಪತರುಗುಟ್ಟಿ ಹೋಗಿದ್ದಾರೆ. ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹೆಚ್ಚು ವರಮಾನ ತಂದು ಕೊಡುತ್ತಿರುವ ಅನೇಕ ಪ್ರದೇಶಗಳು ಬೆಂಗಳೂರಿನಲ್ಲಿವೆ‌.

ಅವುಗಳಲ್ಲಿ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚಿಕ್ಕಪೇಟೆ, ಮಲ್ಲೇಶ್ವರಂ ,ಗಾಂಧಿನಗರ, ಜಯನಗರ,ಕೆಆರ್ ಮಾರುಕಟ್ಟೆ, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ಪ್ರದೇಶ ಬಸವಪುರ ಪ್ರಮುಖವಾಗಿದ್ದವು. ಆದರೆ, ಈ ಭಾಗಗಳಲ್ಲೇ ಅತಿ ಹೆಚ್ಚಿನ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿವೆ.

ಇವುಗಳ ಪೈಕಿ ಅತಿ ಹೆಚ್ಚು ವಾಣಿಜ್ಯ ಚಟುವಟಿಕೆ ನಡೆಯುವ ಪ್ರದೇಶಗಳನ್ನು ಒಳಗೊಂಡಿರುವ ಶಾಂತಲಾನಗರ ವಾರ್ಡ್ ಗೆ ಅತಿ ಹೆಚ್ಚಿನ ಎಫೆಕ್ಟ್ ಉಂಟಾಗಿದೆ. ಕೋಟ್ಯಂತರ ವಹಿವಾಟು ನಡೆಯುವ ಈ ವಾರ್ಡ್ ನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದರಿಂದ ವ್ಯಾಪಾರಿಗಳು ವ್ಯಾಪಾರಕ್ಕೆ ಹಿಂದೇಟು ಹಾಕುತ್ತಿದ್ದರೆ, ಗ್ರಾಹಕರು ಕೂಡ ಆತಂಕದಿಂದ ಈ ಕಡೆ ಸುಳಿಯುತ್ತಿಲ್ಲ.

ಲಕ್ಷಾಂತರ ವಹಿವಾಟು ನಡೆಯುತ್ತಿದ್ದ ಈ ಸ್ಥಳಗಳಲ್ಲಿ ವ್ಯಾಪಾರದ ಪ್ರಮಾಣ ಕೆಲವೇ ಕೆಲವು ಸಾವಿರಗಳಿಗೆ ಬಂದು ನಿಂತಿದೆ. ಪರಿಸ್ಥಿತಿ ಹೀಗಾದರೆ ಹೇಗೆ ಬಾಡಿಗೆ ಕಟ್ಟುವುದು? ಕಾರ್ಮಿಕರಿಗೆ ಹೇಗೆ ಸಂಬಳ ಕೊಡುವುದು? ಇತರೆ ಖರ್ಚುಗಳನ್ನು‌ ಹೇಗೆ ನಿಭಾಯಿಸುವುದು? ಎನ್ನುವುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿ ಪ್ರೇಮ್ ಚಂದ್ ಜೈನ್.

ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಶಾಂತಲಾನಗರ ವಾರ್ಡ್ ನಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಭಾನುವಾರ ಒಂದೇ ದಿನ ಈ ವಾರ್ಡ್ ನಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 60 ಕ್ಕೂ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುವುದಾದರೂ ಹೇಗೆ? ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು? ಎನ್ನುವುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ವಾರ್ಡ್ ನ ಕಾರ್ಪೋರೇಟರ್ ಎಂ. ದ್ವಾರಕಾನಾಥ್‌.

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಈ‌ ಭಾಗದಲ್ಲಿ ಒಂದಷ್ಟು ಸಣ್ಣಪುಟ್ಟ ಅಂಗಡಿಗಳು ಬೀಗ ಜಡಿದುಕೊಂಡಿದ್ದವು. ಲಾಕ್‌ಡೌನ್ ರಿಲ್ಯಾಕ್ಸ್ ಆದ ನಂತರದಲ್ಲಿ ಹೇಗೋ ಬದುಕಬಹುದು. ಉಸಿರಾಡಬಹುದು ಎಂದು ಭಾವಿಸಿದ್ದ ವ್ಯಾಪಾರಿಗಳಿಗೆ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿನ ಪ್ರಕರಣಗಳು ಮತ್ತೆ ದೊಡ್ಡ ತಲೆ ನೋವನ್ನು ಉಂಟು ಮಾಡಿವೆ.ಗ್ರಾಹಕರೇ ಕೊರೋನಾಗೆ ಹೆದರಿ ಹೊರಬಾರದ ಪರಿಸ್ಥಿತಿ ಇದೆ. ಇಂಥ ಸನ್ನಿವೇಶದಲ್ಲಿ ಹೆಚ್ಚು ದಿನ‌ ಇರೊಕ್ಕೆ ಸಾಧ್ಯವಿಲ್ಲ. ಹೀಗೇ ಮುಂದುವರೆದರೆ ತಾವು ಶಾಶ್ವತವಾಗಿ‌ ಅಂಗಡಿಗಳನ್ನು ಮುಚ್ಚಿಕೊಂಡು‌ ಮನೆಗಳಿಗೆ ಹೋಗ ಬೇಕಾಗುತ್ತದೇನೋ? ಎನ್ನುವ ಆತಂಕ‌ ಬೃಹತ್ ವ್ಯಾಪಾರಿಗಳದ್ದು.

ಕೊರೋನಾ ಇಡೀ ವಿಶ್ವವನ್ನೇ ತಲ್ಲಣಿಸಿರುವಾಗ ಮನುಕುಲವನ್ನು ವಿಚಲಿತಗೊಳಿಸಿ ರುವಾಗ ಉದ್ಯಮ ವಹಿವಾಟುಗಳನ್ನೆಲ್ಲ ಬುಡಮೇಲುಗೊಳಿಸಿದೆ. ಎಲ್ಲರಂತೆ ಇವರ ಬದುಕುಗಳು ಕೂಡ ಅತಂತ್ರಗೊಂಡಿವೆ. ಹಾಗಂತ ಪ್ರತ್ಯೇಕವಾಗಿ ಇವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಅಂತಹ ಅವಕಾಶಗಳು ಕೂಡ ನಮ್ಮ ವ್ಯಾಪ್ತಿಯಲ್ಲಿಲ್ಲ. ಆದರೂ ಮಾನವೀಯತೆಯ ದೃಷ್ಟಿಯಿಂದ ಅವರಿಗೆ ಆಗಬೇಕಾದ ಒಂದಷ್ಟು ಸವಲತ್ತುಗಳನ್ನು ಪೂರೈಸಲು ಶ್ರಮಿಸಬಹುದು ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ,ಚರ್ಚ್ ಸ್ಟ್ರೀಟ್ ಭಾಗದ ವ್ಯಾಪಾರಿಗಳ ಕಥೆ ಹೀಗಾದ್ರೆ ಧರ್ಮರಾಯಸ್ವಾಮಿ ದೇವಸ್ಥಾನ, ಚಿಕ್ಕಪೇಟೆ ಸುತ್ತಮುತ್ತಲಿನ ವ್ಯಾಪಾರಿಗಳ ಗೋಳು ಮತ್ತೊಂದು ರೀತಿಯದು. ಲಾಕ್‌ಡೌನ್, ಸೀಲ್ ಡೌನ್ ಆದ ಮೇಲಂತೂ ತಮ್ಮ ಗೋಳನ್ನು ಕೇಳುವವರಿಲ್ಲ. ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕೋ ಗೊತ್ತಾಗ್ತಿಲ್ಲ‌. ಇದೆಲ್ಲವನ್ನು ಸಹಿಸಿಕೊಳ್ಳೋದಕ್ಕಿಂತ ಆತ್ಮಹತ್ಯೆ ಮಾಡಿಕೊಂಡು ಸಾಯಬೇಕೆನಿಸುತ್ತೆ ಎನ್ನುತ್ತಾರೆ ವ್ಯಾಪಾರಿಗಳು.

ಚಿಕ್ಕಪೇಟೆಯೊಂದರಲ್ಲೇ  ಚಿನ್ನಬೆಳ್ಳಿ ವ್ಯಾಪಾರದ ವಹಿವಾಟೇ ಒಂದು ಸಾವಿರ ಕೋಟಿ. ಇನ್ನು ರೇಷ್ಮೆ ಸೀರೆ ಮಾರಾಟದಿಂದ ಆಗು ಕಮಾಯಿ  ದಿನಕ್ಕೆ ಇಪ್ಪತ್ತೈದು ಲಕ್ಷ.  ಚಿಕ್ಕಪೇಟೆ ಹಾಗೂ ಸುತ್ತಮುತ್ತಲ ವಾಣಿಜ್ಯ ಪ್ರದೇಶಗಳೇ ಬಿಬಿಎಂಪಿಯ ತೆರಿಗೆಗೆ ಹತ್ತಿರತ್ತಿರ ಒಂದು ಸಾವಿರ ಕೋಟಿಯಷ್ಟು ವರಮಾನವನ್ನು ತಂದುಕೊಡುತ್ತಿದ್ದವು. ಜಯನಗರ ವಾರ್ಡ್ ನಲ್ಲೂ ಕೂಡ  ಸುಮಾರು  ಹತ್ತು ಕೋಟಿಯಷ್ಟು ಆದಾಯ ಬಿಬಿಎಂಪಿ ಬೊಕ್ಕಸಕ್ಕೆ ಸಂದಾಯವಾಗುತ್ತಿತ್ತು.

ಇದನ್ನೂ ಓದಿ : ಕೋವಿಡ್‌-19; ಮುಂದಿನ ಶೈಕ್ಷಣಿಕ ವರ್ಷಕ್ಕೆ 9-12 ತರಗತಿಗಳಿಗೆ ಸಿಬಿಎಸ್‌ಇ ಪಠ್ಯಕ್ರಮ ಶೇ.30ರಷ್ಟು ಕಡಿತ

ಆದರೆ, ದಿನೇ ದಿನೇ ಸೋಂಕಿನ‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ  ವ್ಯಾಪಾರಿಗಳು ಕಂಗಾಲಾಗಿ ಹೋಗಿದ್ದಾರೆ.ವಾಣಿಜ್ಯ ಚಟುವಟಿಕೆ ಕೇಂದ್ರಿತ ಪ್ರದೇಶಗಳಲ್ಲಿ ವ್ಯಾಪಾರ ಒಂದೇ ಅಲ್ಲ ಆದಾಯವೂ ನೆಲ ಕಚ್ಚಿಹೋಗಿದೆ. ಹೀಗೆಯೇ ಆದ್ರೆ ಮುಂದಿನ ದಿನಗಳು ಹೇಗೆ? ಎನ್ನುವ ಚಿಂತೆಯಲ್ಲಿದ್ದಾರೆ ವ್ಯಾಪಾರಿಗಳು.
Published by: MAshok Kumar
First published: July 7, 2020, 8:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading