ಮೊನ್ನೆ, ನಿನ್ನೆ ಬಸ್​ಗಳೆಲ್ಲ ಖಾಲಿ ಖಾಲಿ; ಆದರೆ, ಬೆಂಗಳೂರಿಗೆ ಹೋಗುವ ಬಸ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಇಂದು ಈವರೆಗೆ 11 ಬಸ್​ಗಳು ಬೆಂಗಳೂರಿಗೆ ಹೋಗಿವೆ. ಬೆಂಗಳೂರಿಗೆ ತೆರಳುತ್ತಿರುವ ಬಸ್​ ಗಳ ಟಿಕೆಟ್ ಗಳನ್ನು ಪ್ರಯಾಣಿಕರು ಬಹುತೇಕ ಆನ್​ಲೈನ್​ ನಲ್ಲಿಯೇ ಮಾಡಿದ್ದರಿಂದ ಎನ್ ಇ ಕೆ ಆರ್ ಟಿ ಸಿಗೂ ಅನುಕೂಲವಾಗಿದೆ.

ಪ್ರಯಾಣಿಕರು

ಪ್ರಯಾಣಿಕರು

  • Share this:
ವಿಜಯಪುರ(ಮೇ. 21): ಸುಮಾರು 55 ದಿನಗಳ ಲಾಕ್​ಡೌನ್ ನಂತರ ರಾಜ್ಯ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನಿನ್ನೆಯಿಂದ ಸರಕಾರಿ ಬಸ್​ಗಳ ಸೇವೆಯನ್ನು ಆರಂಭಿಸಿದೆ. ಆದರೆ ಮೊನ್ನೆ ಮತ್ತು ನಿನ್ನೆ ಮೊದಲ ದಿನ ಬಹುತೇಕ ಬಸ್​ಗಳು ಖಾಲಿಯಾಗಿಯೇ ಸಂಚರಿಸಿದ್ದವು. ಲಾಕ್​​ ಡೌನ್​ಗೂ ಮುಂಚೆ ಪ್ರಯಾಣಿಕರು ಬಸ್​ಗಳಿಗಾಗಿ ಕಾಯುತ್ತಿದ್ದರೆ ನಿನ್ನೆ ಮಾತ್ರ ಬಸ್​ಗಳು ಪ್ರಯಾಣಿಕರಿಗಾಗಿಯೇ ಕಾಯುತ್ತಿದ್ದವು. 

ಕೊರೋನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಆರೋಗ್ಯದ ಹಿತದೃಷ್ಠಿಯಿಂದ ಒಂದು ಬಸ್​ ನಲ್ಲಿ ಕೇವಲ 30 ಜನ ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಅಲ್ಲದೇ, ಚಾಲಕ ನಿರ್ವಾಹಕರ ಆರೋಗ್ಯವನ್ನೂ ತಪಾಸಣೆ ನಡೆಸಲು ಮತ್ತು ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರ ಧರ್ಮಲ್ ಸ್ಕ್ರೀನಿಂಗ್ ಮಾಡಲು ಸೂಚನೆ ನೀಡಿತ್ತು. ಅಷ್ಟೇ ಅಲ್ಲ, ಪ್ರತಿಯೊಬ್ಬ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಲು ನಿರ್ವಾಹಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ಮೊದಲ ದಿನ ಬಸ್​​ನ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರಿಗಾಗಿ ಕಾಯುವಂತಾಗಿತ್ತು. ಪ್ರತಿಯೊಂದು ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಅವಕಾಶವಿದ್ದರೂ, 30 ಬಿಡಿ 15 ಜನರೂ ಬಂದಿರಲಿಲ್ಲ. ಆಗ ವಿಜಯಪುರದ ಎನ್ ಇ ಕೆ ಆರ್ ಟಿ ಸಿ ಅಧಿಕಾರಿಗಳು ಕನಿಷ್ಠ 15 ಪ್ರಯಾಣಿಕರು ಬಂದ ಮೇಲಷ್ಟೇ ಬಸ್​ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.

ಇದೆಲ್ಲದರ ಮಧ್ಯೆ, ವಿಜಯಪುರ ಎನ್​ಇಕೆ​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ಬೆಂಗಳೂರಿಗೆ ಬಸ್​​ ಗಳನ್ನು ಓಡಿಸಲು ನಿರ್ಧರಿಸಿ ಆನಲೈನ್ ಮೂಲಕ ಬಸ್ ಬುಕ್ಕಿಂಗ್ ಗೆ ಅವಕಾಶ ಮಾಡಿದರು. ಆನ್​ಲೈನ್​ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದೇ ತಡ, ಬೇರೆ ಎಲ್ಲ ಊರುಗಳಿಗಿಂತ ಬೆಂಗಳೂರು ಬಸ್ಸುಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.   ನಿನ್ನೆ ಬೆಂಗಳೂರಿಗೆ 10 ಬಸ್ಸುಗಳು ತೆರಳಿದ್ದರೆ, ಇಂದು ಬೆಳಿಗ್ಗೆಯೇ 11 ಬಸ್ಸುಗಳು ತೆರಳಿವೆ.  ಇಂದು ಸಂಜೆ ಮತ್ತೆರೆಡು ಬಸ್ಸುಗಳು ವಿಜಯಪುರ ನಗರವೊಂದರಿಂದಲೇ ತೆರಳಲಿವೆ.  ಇದು ಸ್ವತಃ ಗಂಗಾಧರ ಅವರಿಗೆ ಅಚ್ಚರಿ ಮೂಡಿಸಿದೆ.

ಲಾಕ್​​ ಡೌನ್ ಗೂ ಮುಂಚೆ ವಿಜಯಪುರದಿಂದ ಬೆಂಗಳೂರಿಗೆ ನಾಲ್ಕು ಬಸ್ಸುಗಳು ಸಂಚರಿಸುತ್ತಿದ್ದವು. ಆದರೆ, ಈಗ ಒಂದೇ ದಿನ 13 ಬಸ್​ಗಳಲ್ಲಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನಿನ್ನೆ ಕೇವಲ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿ, ಹೊಸಪೇಟೆ ಮತ್ತು ಕಲಬುರಗಿ ಜಿಲ್ಲೆಗಳಿಗೆ ಬಸ್ಸುಗಳನ್ನು ಬಿಡಲಾಗಿತ್ತು. ಇಂದಿನಿಂದ ದೂರದ ಮಂಗಳೂರು, ಉಡುಪಿ, ಶಿವಮೊಗ್ಗಗಳಿಗೂ ಬಸ್​ಗಳು ಸಂಚಾರ ಆರಂಭಿಸಿವೆ

ನಿನ್ನೆ ವಿಜಯಪುರ ಜಿಲ್ಲಾದ್ಯಂತ 83 ಬಸ್ಸುಗಳ ಸಂಚಾರ ನಡೆಸಿದ್ದು, ವಿಜಯಪುರ ನಗರದಲ್ಲಿ 200 ಮತ್ತು ವಿಜಯಪುರ ಜಿಲ್ಲೆಯಲ್ಲಿ 118 ಟ್ರಿಪ್ ಓಡಾಡಿವೆ. ಒಟ್ಟಾರೆ 1500 ಜನ ಮಾತ್ರ ನಿನ್ನೆ ಬಸ್​ನಲ್ಲಿ ಸಂಚಾರ ಮಾಡಿದ್ದಾರೆ. ಇಂದು ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಮುಂಚೆ ಒಂದು ಬಸ್​ನಲ್ಲಿ ಸರಾಸರಿ 40 ಪ್ರಯಾಣಿಕರ ಸಂಚಾರ ಮಾಡುತ್ತಿದ್ದರು. ಈಗ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದರೂ, ನಿನ್ನೆ ಸರಾಸರಿ ಕೇವಲ 10 ರಿಂದ 11 ಜನ ಮಾತ್ರ ಈ ಬಸ್​ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಈ ಮುಂಚೆ ವಿಜಯಪುರ ಜಿಲ್ಲೆಗೆ ಬಸ್​ಗಳ ಓಡಾಟದಿಂದ ಪ್ರತಿದಿನ 75 ಸಾವಿರದಿಂದ ರಿಂದ 80 ಲಕ್ಷ ಆದಾಯ ಬರುತ್ತಿತ್ತು. ಆದರೆ, ವಿಜಯಪುರ ಜಿಲ್ಲೆಯಲ್ಲಿ 3ನೇ ದಿನ ಬಸ್ ಸಂಚಾರ ಮುಂದುವರೆದಿದೆ.

ಮೊನ್ನೆ 83 ಬಸ್​​ಗಳ ಸಂಚಾರ ನಡೆಸಿದ್ದವು. ಆಗ ಸುಮಾರು 1500 ಜನ ಪ್ರಯಾಣ ಮಾಡಿದ್ದರಿಂದ  1.50 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ನಿನ್ನೆ ಜಿಲ್ಲೆಯಲ್ಲಿ 117 ಬಸ್​ಗಳು ಸಂಚಾರ ನಡೆಸಿದ್ದರಿಂದ ಸುಮಾರು 1800 ರಿಂದ 2100 ವರೆಗೆ ಪ್ರಯಾಣಿಕರು ಸಂಚರಿಸಿದ್ದರು. ಇದರಿಂದ ಸುಮಾರು ರೂ. 4 ಲಕ್ಷ  ರೂಪಾಯಿ ಹಣ ಸಂಗ್ರಹವಾಗಿತ್ತು. ಇಂದು ಈವರೆಗೆ 11 ಬಸ್​ಗಳು ಬೆಂಗಳೂರಿಗೆ ಹೋಗಿವೆ. ಬೆಂಗಳೂರಿಗೆ ತೆರಳುತ್ತಿರುವ ಬಸ್​ ಗಳ ಟಿಕೆಟ್ ಗಳನ್ನು ಪ್ರಯಾಣಿಕರು ಬಹುತೇಕ ಆನ್​ಲೈನ್ ನಲ್ಲಿಯೇ ಮಾಡಿದ್ದರಿಂದ ಎನ್ ಇ ಕೆ ಆರ್ ಟಿ ಸಿಗೂ ಅನುಕೂಲವಾಗಿದೆ.

ಇದನ್ನೂ ಓದಿ : ತೆಲಂಗಾಣದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಉಡುಪಿ ಯುವತಿ

ಇಂದು ಒಂದು ನಾನ್ ಎಸಿ ಸ್ಲೀಪರ್ ಕೋಚ್, ಒಂದು ರಾಜಹಂಸ ಸೆಮಿ ಸ್ಲೀಪರ್ ಮತ್ತು 9 ಸಾಮಾನ್ಯ ಬಸ್​​ಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಿವೆ. ಇಂದು ಸಂಜೆ ಮತ್ತೆರಡು ಬಸ್​ ಗಳು ಬೆಂಗಳೂರಿಗೆ ತೆರಳಲಿವೆ. ಅಷ್ಟೇ ಅಲ್ಲ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ, ಇಂಡಿ ಮತ್ತು ಸಿಂದಗಿಗಳಿಂದಲೂ ಬೆಂಗಳೂರಿಗೆ ಬಸ್​ ಗಳನ್ನು ಓಡಿಸಲಾಗುವುದು ಎಂದು ವಿಜಯಪುರ ಎನ್ ಇ ಕೆ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
First published: