‘ಸಂಪೂರ್ಣ ತೆರಿಗೆ ವಿನಾಯ್ತಿ ನೀಡಿ, ಇಲ್ಲದಿದ್ದರೆ 6 ತಿಂಗಳು ಬಸ್​​ ಬೀದಿಗಿಳಿಯಲ್ಲ‘ - ಬಸ್ ಮಾಲೀಕರ ಒಕ್ಕೂಟ ಘೋಷಣೆ

ಬಸ್ ಮಾಲೀಕರ ಬೇಡಿಕೆ ಹಾಗೂ ಪಟ್ಟಿನಿಂದ ಸರ್ಕಾರ ಕಂಗಾಲಾಗಿದೆ. ಏಕೆಂದರೆ 1 ಲಕ್ಷದ 5 ಸಾವಿರದಷ್ಟು ಬಸ್ ಗಳ ಮೇಲೆಯೂ ನಿರ್ಧರಿತವಾಗಿರುವ ಆದಾಯ ಮತ್ತು ತೆರಿಗೆ ಒಂದು ವೇಳೆ ಬಸ್​ಗಳ ಸಂಚಾರ ಸ್ಥಗಿತವಾಗಿದ್ದೇ ಆದಲ್ಲಿ ನಿಂತೋಗುವ ಸಾಧ್ಯತೆಯಿದೆ. ಅಲ್ಲದೇ ಪ್ರಯಾಣಿಕರಿಗೂ ಸಾಕಷ್ಟು ತೊಂದರೆಯಾಗೋದು ಗ್ಯಾರಂಟಿ. ಈ ಸಂದರ್ಭದಲ್ಲಿ ಸರ್ಕಾರ ಯಾವ್ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನೋದು ಕೂಡ ತೀವ್ರ ಕುತೂಹಲ ಮೂಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಮೇ.18): "ಬಸ್ ಓಡಿಸೊಲ್ಲ.. ಮೂರು ತಿಂಗಳಲ್ಲ, ಇನ್ನೂ ಆರು ತಿಂಗಳು ಬಸ್ ಓಡಿಸೊಲ್ಲ. ಆಮೇಲೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಬಸ್​ಗಳನ್ನೇ ಸರ್ಕಾರದ ಸುಪರ್ದಿಗೆ ಒಪ್ಪಿಸ್ತೇವೆ. ನಾವೆಲ್ಲಾ ವಿಷ ಕುಡಿದು ಸಾಯ್ತೇವೆ. ನಮ್ಮ ಸಮಾಧಿಗಳ ಮೇಲೆ ಸರ್ಕಾರ ಬಸ್​ಗಳನ್ನು ಓಡಿಸಲಿ" ಎನ್ನುವುದು ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚಿನ ಪ್ರೈವೇಟ್ ಬಸ್ ಮಾಲೀಕರ ಎಚ್ಚರಿಕೆ.

ಹೌದು, ಲಾಕ್ ಡೌನ್ ಸಮಯದಲ್ಲಿ ಎಲ್ಲರ ನೆರವಿಗೆ ಬರುತ್ತಿರುವ ಸರ್ಕಾರ ಕೋಟ್ಯಾಂತರ ರೂಗಳ ನೆರವಿನ  ಪ್ಯಾಕೇಜ್ ಘೋಷಿಸ್ತಿದೆ. ಆದರೆ, ಸಾರ್ವಜನಿಕರಿಗೆ ಉತ್ತಮ  ಸಾರಿಗೆ ವ್ಯವಸ್ಥೆ ನೀಡುತ್ತಿರುವ ಖಾಸಗಿ ಬಸ್ ಮಾಲೀಕರ ಹಿತ ಕಾಯೋ ಒಂದೇ ಒಂದು ಘೋಷಣೆಯನ್ನು ಈವರೆಗೂ ಮಾಡಿಲ್ಲ. ಈ ಕಾರಣಕ್ಕೇನೆ ಸರ್ಕಾರದ ವಿರುದ್ದ ಕೆಂಡಾಮಂಡಲವಾಗಿರುವ ಖಾಸಗಿ ಬಸ್ ಮಾಲೀಕರು ಇನ್ನಾರು ತಿಂಗಳು ಯಾವುದೇ ಬಸ್ ಗಳನ್ನು ರಸ್ತೆಗಿಳಿಸದಿರಲು ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಹತ್ತಿರತ್ತಿರ  1ಲಕ್ಷ 5 ಸಾವಿರ  ಖಾಸಗಿ  ಬಸ್ ಗಳಿವೆ. ಸ್ಟೇಟ್ ಕ್ಯಾರೇಜ್ ಹಾಗೂ ಪ್ರೈವೇಟ್ ಕ್ಯಾರೇಜ್ ಗಳಾಗಿ ಕಾರ್ಯಾಚರಣೆ ಮಾಡುವ ಬಸ್ ಗಳ ಮಾಲೀಕರೆಲ್ಲಾ ಒಕ್ಕೊರಲಿನಿಂದ ಇನ್ನಾರು ತಿಂಗಳು ಬಸ್ ರಸ್ತೆಗಿಳಿಸದಿರಲು ತೀರ್ಮಾನಿಸಿದ್ದಾರೆ. ಈ ಮುನ್ನ ಬೇರೆ ಬೇರೆಯಾಗಿದ್ದ ಸ್ಟೇಜ್ ಹಾಗೂ ಪ್ರೈವೇಟ್ ಕ್ಯಾರೇಜ್ ಬಸ್ ಗಳ ಮಾಲೀಕರು ಇದೀಗ ಪ್ರೈವೇಟ್ ಬಸ್ ಆಪರೇಟರ್ ಕಾನ್ಪಿಡರೇಷನ್ ಅಡಿಯಲ್ಲಿ ಒಂದಾಗಿದ್ದು, ಎಲ್ಲರೂ ತಮ್ಮ ಬೇಡಿಕೆಗಳು ಈಡೇರೋವರೆಗೂ ಬಸ್ ಓಡಿಸದಿರಲು ತೀರ್ಮಾನಿಸಿದ್ದಾರೆ.

ಈ ಬಗ್ಗೆ ನ್ಯೂಸ್-18 ಕನ್ನಡದ ಜತೆ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಟರಾಜ್ ಶರ್ಮಾ, ನಾವು ಈಗ ಬಸ್ ಗಳನ್ನು ರಸ್ತೆಗಿಳಿಸಿದ್ರೂ ಪ್ರಯೋಜನವಿಲ್ಲ. ಏಕೆಂದ್ರೆ ಈಗ್ಲೇ ಲಾಸ್ ಆಗಿದೀವಿ. ಬಸ್​ಗಳನ್ನು ಓಡಿಸಿದ್ರೆ ಮತ್ತಷ್ಟು ಲಾಸ್ ಆಗ್ತೇವೆ. ನಮ್ಮೆಲ್ಲರ ಬವಣೆಗಳು ಅಷ್ಟೊಂದಿವೆ. ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು ಈವರೆಗೂ ಈಡೇರಿಲ್ಲ. ಪದೇ ಪದೇ ಭರವಸೆ ಕೊಟ್ಟು ಕಾಲಹರಣ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿವೆ. ನಮ್ಮ ದಶಕಗಳ ಸಮಸ್ಯೆ ಬಗೆಹರಿಯದೆ ನನೆಗುದಿಗೆ ಬಿದ್ದಿದೆ. ಇಂಥಾ ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಹೋರಾಡದೆ ಬೇರೆ ವಿಧಿಯಿಲ್ಲ. ಹಾಗಾಗಿ ಬೇಡಿಕೆ ಮುಂದಿಟ್ಟಿದ್ದೇವೆ ಎನ್ನುತ್ತಾರೆ.

ನಾವು, ನಮ್ಮ ಬಸ್​ಗಳಿಂದ ಬರುವ ಆದಾಯದಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲೇ  6,210 ಕೋಟಿ ಹಣವನ್ನು ಪಾವತಿಸುತ್ತೇವೆ. ದೊಡ್ಡ ಮಟ್ಟದ ತೆರಿಗೆ ಪಾವತಿದಾರರಲ್ಲಿ ನಾವೂ ಒಬ್ಬರು. ನಮ್ಮಿಂದ ತೆರಿಗೆ ರೂಪದಲ್ಲಿ ಹಣ ಬೇಕು. ಆದರೆ ನಮ್ಮ ಬೇಡಿಕೆ ಈಡೇರಿಸಿ ಎಂದಾಗ ಕಾಲಹರಣ ಮಾಡುತ್ತಿದೆ ಸರ್ಕಾರ. ನಾವೂ ಟೈಮ್ ಕೊಟ್ಟೂ ಕೊಟ್ಟೂ ಸಾಕಾಗಿದೆ. ಹಾಗಾಗಿ ಅಂತಿಮವಾಗಿ ಬಸ್​ಗಳನ್ನು ಆರು ತಿಂಗಳು ರಸ್ತೆಗಿಳಿಸದಿರಲು ನಿರ್ಧರಿಸಿದ್ದೇವೆ. ಅದಕ್ಕೂ ಬಗ್ಗದಿದ್ದರೆ ಬಸ್​ಗಳನ್ನೇ ಸರ್ಕಾರಕ್ಕೆ ಹ್ಯಾಂಡೋವರ್ ಮಾಡ್ತೇವೆ. ಅವರೇ ಓಡಿಸಿಕೊಳ್ಳಲಿ, ನಾವೆಲ್ಲಾ ವಿಷ ಕುಡಿದು ಸಾಯ್ತೇವೆ ಎನ್ನುತ್ತಾರೆ ನಟರಾಜ ಶರ್ಮಾ.

ಇದನ್ನೂ ಓದಿ: ಲಾಕ್​​ಡೌನ್​​-4: ಕರ್ನಾಟಕದಲ್ಲಿ ನಾಳೆಯಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ; ಏನಿರಲಿದೆ? ಏನಿಲ್ಲ?

ಆರು ತಿಂಗಳ ಸಂಪೂರ್ಣ  ತೆರಿಗೆ ವಿನಾಯ್ತಿಗೆ ಅವಕಾಶ ಕೊಡಬೇಕು, ಅಷ್ಟೇ ಅಲ್ಲ,  ನಂತರದ ಅವಧಿಯ 6 ತಿಂಗಳಿಗೆ ಅರ್ಧ ತೆರಿಗೆ ವಿನಾಯ್ತಿ ನೀಡಬೇಕು. ಮುಂಗಡ ತೆರಿಗೆ ಪಾವತಿಸಲು 15 ದಿನಗಳ ಗಡುವನ್ನು 30 ದಿನಗಳಿಗೆ ವಿಸ್ತರಿಸಬೇಕು. ಬೇರೆ ರಾಜ್ಯಗಳಲ್ಲಿ ಈಗಾಗಲೇ ಇದು ಜಾರಿಯಲ್ಲಿದೆ. ಅದನ್ನೇ ಇಲ್ಲಿಯೂ ವಿಸ್ತರಿಸಬೇಕು. ಇವು ಸರ್ಕಾರ ಈಡೇರಿಸಲಿಕ್ಕೆ ಸಾಧ್ಯವಾಗದಂಥ ಬೇಡಿಕೆಗಳೇನು ಅಲ್ಲ. ಆದರೆ ಸರ್ಕಾರ ಈಡೇರಿಸಲು ಮೀನಾಮೇಷ ಎಣಿಸುತ್ತಿದೆ ಅಷ್ಟೇ. ನಾವೂ ತಾಳ್ಮೆಯಿಂದ ಇದ್ದು ಸಾಕಾಗಿದೆ. ಹಾಗಾಗಿನೇ ಈ ಬಾರಿ ಇಂಥ ನಿರ್ದಾರ ತೆಗೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಈಗಾಗ್ಲೇ ಸಾರಿಗೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಗಿದೆ. ನಾಳೆಯೂ ಒಂದು ಎಚ್ಚರಿಕೆ ಮನವಿ ಕೊಡ್ತೇವೆ. ಸ್ಪಂದಿಸಿದ್ರೆ ವೆಲ್ ಎಂಡ್ ಫೈನ್ ಆಗೋದಿಲ್ಲ ಎಂದ್ರೆ ಬಸ್​ಗಳನ್ನೆಲ್ಲಾ ಸರ್ಕಾರಕ್ಕೆ ಕೊಟ್ಟು ನೀವೇ ಓಡಿಸಿಕೊಳ್ಳಿ ಎಂದು ಹೇಳಿ ಕೈ ತೊಳೆದುಕೊಳ್ತೇವೆ ಎನ್ನುತ್ತಾರೆ ಬಸ್​ಗಳ ಮಾಲೀಕರೂ ಆಗಿರುವ ಶರ್ಮಾ.

ಬಸ್ ಮಾಲೀಕರ ಬೇಡಿಕೆ ಹಾಗೂ ಪಟ್ಟಿನಿಂದ ಸರ್ಕಾರ ಕಂಗಾಲಾಗಿದೆ. ಏಕೆಂದರೆ 1 ಲಕ್ಷದ 5 ಸಾವಿರದಷ್ಟು ಬಸ್ ಗಳ ಮೇಲೆಯೂ ನಿರ್ಧರಿತವಾಗಿರುವ ಆದಾಯ ಮತ್ತು ತೆರಿಗೆ ಒಂದು ವೇಳೆ ಬಸ್​ಗಳ ಸಂಚಾರ ಸ್ಥಗಿತವಾಗಿದ್ದೇ ಆದಲ್ಲಿ ನಿಂತೋಗುವ ಸಾಧ್ಯತೆಯಿದೆ. ಅಲ್ಲದೇ ಪ್ರಯಾಣಿಕರಿಗೂ ಸಾಕಷ್ಟು ತೊಂದರೆಯಾಗೋದು ಗ್ಯಾರಂಟಿ. ಈ ಸಂದರ್ಭದಲ್ಲಿ ಸರ್ಕಾರ ಯಾವ್ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನೋದು ಕೂಡ ತೀವ್ರ ಕುತೂಹಲ ಮೂಡಿಸಿದೆ.

ಖಾಸಗಿ ಬಸ್ ಮಾಲೀಕರ ಬೇಡಿಕೆಗಳು ಮಾತ್ರ ಹೀಗಿವೆ..

  • ಆರು ತಿಂಗಳ ಸಂಪೂರ್ಣ  ತೆರಿಗೆ ವಿನಾಯ್ತಿಗೆ ಅವಕಾಶ ಕೊಡಬೇಕು.

  • ನಂತರದ ಅವಧಿಯ 6 ತಿಂಗಳಿಗೆ ಅರ್ಧ ತೆರಿಗೆ ವಿನಾಯ್ತಿ ನೀಡಬೇಕು

  • ಬೇರೆ ರಾಜ್ಯಗಳಲ್ಲಿರುವ ಮುಂಗಡ ತೆರಿಗೆ ಪಾವತಿ ವ್ಯವಸ್ಥೆ ಜಾರಿ ಮಾಡಬೇಕು

  • ಮುಂಗಡ ತೆರಿಗೆ ಪಾವತಿಸಲು 15 ದಿನಗಳ ಗಡುವನ್ನು 30 ದಿನಗಳಿಗೆ ವಿಸ್ತರಿಸಬೇಕು


First published: