ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ಆಗಸ್ಟ್ 15 ರಂದು 5 ಸಾವಿರ ಮನೆಗಳ ಹಂಚಿಕೆಗೆ ನಿರ್ಧಾರ

ಕೇಂದ್ರದ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ಫಲಾನುಭವಿಗಳಿಗೆ ಶೇ.60 ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ 48,000 ರೂ. ಸಹಾಯಧನ ಲಭ್ಯವಿದೆ.

ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ

ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ

 • Share this:
   ಬೆಂಗಳೂರು, ಜುಲೈ 08: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು.

  ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ , ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ನಾಗಾಂಬಿಕಾ ದೇವಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ: ಬಸವರಾಜ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಕರ್ನಾಟಕ ಗೃಹ ಮಂಡಳಿ ಆಯುಕ್ತರು ಉಪಸ್ಥಿತರಿದ್ದರು.

  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು :

  1. ವಿವಿಧ ವಸತಿ ಯೋಜನೆಗಳ ಅಡಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆ ನಿರ್ಮಿಸಲು ನಿರ್ಧರಿಸಲಾಗಿದೆ.

  2. ಇವುಗಳಲ್ಲಿ ರಾಜ್ಯದ ವಸತಿ ಯೋಜನೆಗಳಡಿ ನಿರ್ಮಿಸುವ 5 ಲಕ್ಷ ಮನೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆ ಸೇರಿವೆ.

  3. ಮನೆ ನಿರ್ಮಿಸಲು ಪರಿಶಿಷ್ಟ ಫಲಾನುಭವಿಗಳಿಗೆ 1.75 ಲಕ್ಷ ಮತ್ತು ಇತರರಿಗೆ 1.20 ಲಕ್ಷ ರೂ. ಸಹಾಯಧನ ದೊರೆಯುತ್ತದೆ.

  4. ಕೇಂದ್ರದ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ಫಲಾನುಭವಿಗಳಿಗೆ ಶೇ.60 ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ 48,000 ರೂ. ಸಹಾಯಧನ ಲಭ್ಯವಿದೆ.

  5. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 100 ಮನೆಗಳನ್ನು ಹಂಚಿಕೆ ಮಾಡಲಾಗುವುದು.

  6. ಪ್ರಸ್ತುತ ನಿರ್ಮಾಣದ ವಿವಿಧ ಹಂತಗಳಲ್ಲಿರುವ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ಡಾ: ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜು ಅರಸು ವಸತಿ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗಳಡಿ ಮನೆಗಳನ್ನು ಪೂರ್ಣ ಮಾಡಲು 6,200 ಕೋಟಿ ರೂ.ಗಳ ಅಗತ್ಯವಿದೆ. ಹಂತ ಹಂತವಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದರು.


  ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ಬಹು ಮಹಡಿ ಯೋಜನೆಯಡಿ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 5 ಸಾವಿರ ಮನೆಗಳ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

  ಇದನ್ನೂ ಓದಿ: Corona: 23 ಸಾವಿರ ಕೋಟಿ ತುರ್ತು ಪ್ಯಾಕೇಜ್​ ಘೋಷಿಸಿದ ಕೇಂದ್ರ ಸರ್ಕಾರ

  ಕೊರೋನಾ ಸಂದರ್ಭದಲ್ಲಿ ಈ ಯೋಜನೆ ಘೋಷಿಸಿರುವುದು ಮಹತ್ವ ಪಡೆದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸೂರಿಲ್ಲದವರಿಗೆ ಆಸರೆಯಾಗಲು ಹತ್ತು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇರಿಸಿಕೊಂಡಿತ್ತು. ಆದರೆ, ಇದರ ಅನುಷ್ಠಾನ ಮಾತ್ರ ನಿರೀಕ್ಷಿತ ರೀತಿಯಲ್ಲಿ ಆಗಿರಲಿಲ್ಲ.  ವಸತಿ ಇಲಾಖೆಗೆ ಸಚಿವರಾಗಿ ವಿ.ಸೋಮಣ್ಣ ಅಧಿಕಾರ ಸ್ವೀಕರಿಸಿದ ವೇಳೆ, ರಾಜ್ಯದಲ್ಲಿ ನೆರೆಹಾನಿ ವ್ಯಾಪಕವಾಗಿ ಸಂಭವಿಸಿದ ಕಾರಣ ವಸತಿ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದ್ದವು. ಈಗ ಮತ್ತೆ ಯೋಜನೆಗೆ ವೇಗ ನೀಡಿದ್ದು ಮುಂದಿನ ದಿನಗಳಲ್ಲಿ ಹೇಗೆ ಅನುಷ್ಠಾನಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ, ಗುಂಪು ಗೂಡುವುದನ್ನು ಆದಷ್ಟು ತಪ್ಪಿಸಿ.
  Published by:HR Ramesh
  First published: