ಬೆಂಗಳೂರು; ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19ಗೆ ಚಿಕಿತ್ಸೆ ನೀಡುವ ಸಂಬಂಧ ಖಾಸಗಿ ಆಸ್ಪತ್ರೆಗಳ ಮಾಲೀಕರು, ವ್ಯವಸ್ಥಾಪಕರೊಂದಿಗೆ ಸರ್ಕಾರ ಇಂದು ಸಭೆ ನಡೆಸಿದ್ದು, ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.
ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಕೋವಿಡ್ 19ಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ಸರ್ಕಾರ ಕೇಳಿದಷ್ಟು ಹಾಸಿಗೆ ಕೊಡದಿದ್ದರೆ, ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದಿದ್ದರೆ ಖಾಸಗಿ ಆಸ್ಪತ್ರೆ ಗಳ ವಿರುದ್ಧ ಬ್ರಹ್ಮಾಸ್ತ್ರಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಹಂತವಾಗಿ ವಿದ್ಯುತ್, ನೀರು, ಮೂಲಭೂತ ಸೌಕರ್ಯ ಬಂದ್ ಮಾಡಲು ಯೋಚಿಸಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಡಿಸಿ ಮೂಲಕ ಕಾನೂನಿನ ಅಸ್ತ್ರ ಬಳಸಿಕೊಳ್ಳಲು ಮೌಖಿಕ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಬೆಸ್ಕಾಂ, ಬೆಂಗಳೂರು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಂದ ಅನೌಪಚಾರಿಕೆ ಸಭೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆ ಯವರು ಹಾಸಿಗೆ ಕೊಡಲು ನಿರಾಕರಿಸಿದರೆ ಮೊದಲ ಹಂತದಲ್ಲಿ ವಿದ್ಯುತ್ , ನೀರು ಬಂದ್ ಮಾಡಿ. ಇಷ್ಟಕ್ಕೂ ಜಗ್ಗದಿದ್ದರೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ವಶಕ್ಕೆ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಗೌಪ್ಯವಾಗಿ ಕಾರ್ಯಸೂಚಿಯನ್ನು ಸರ್ಕಾರ ಸಿದ್ಧಮಾಡಿಕೊಂಡಿದೆ. ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲೂ ಪ್ರಕರಣ ದಾಖಲಿಸಲು ನಿರ್ಧಾರ ಮಾಡಿದೆ.
ಸರ್ಕಾರದ ಜೊತೆ ನೀವು ಕೈ ಜೋಡಿಸಿದರೆ ಮಾತ್ರ ಈ ಪಿಡುಗನ್ನು ತೊಲಗಿಸಲು ಸಾಧ್ಯ. ಇಲ್ಲವಾದಲ್ಲಿ ಕಷ್ಟ ಆಗುತ್ತೆ. ಜನರ ಕಷ್ಟ ಅರಿತುಕೊಂಡು ನೀವು ಸರ್ಕಾರದ ಜೊತೆ ಕೈ ಜೋಡಿಸಬೇಕು. ನಿಮಗೇ ಏನು ಬೇಕೋ ಅಗತ್ಯ ನೆರವು ಕೊಡಲು ನಾವು ಸಿದ್ದರಿದ್ದೇವೆ. ಆದರೆ ಕೋವಿಡ್ಗೆ ನೀವು ಚಿಕಿತ್ಸೆ ಕೊಡಲೇಬೇಕು. ನಾವು ಹೇಳಿರುವಷ್ಟು ಬೆಡ್ಗಳನ್ನು ಮೀಸಲಿಡಬೇಕು. ನಿಮ್ಮ ಏನೇ ಸಮಸ್ಯೆಗಳು ಇದ್ದರೂ ಅದನ್ನು ತಿಳಿಸಿ. ನಮ್ಮ ಸಚಿವರ ಜೊತೆ ಸಮಸ್ಯೆ ಬಗ್ಗೆ ತಿಳಿಸಿ. ಆ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇವೆ. ಆದರೆ ಕೊವೀಡ್ ತಡೆಗೆ ಸಂಪೂರ್ಣವಾದ ಸಹಕಾರ ಕೊಡಬೇಕು ಎಂದು ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಸಿಎಂ ಬಿಎಸ್ವೈ ಮನವಿ ಕೂಡ ಮಾಡಿದರು.
ಇದನ್ನು ಓದಿ: ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೋನಾ ಕಡಿಮೆಯಾಗಿದೆ; ಸಿಎಂ ಬಿಎಸ್ ಯಡಿಯೂರಪ್ಪ
ಸರ್ಕಾರದ ಮನವಿಗೆ ನಾಳೆ ಉತ್ತರ ಹೇಳುವುದಾಗಿ ಹೇಳಿದ ಖಾಸಗಿ ಆಸ್ಪತ್ರೆಗಳ ಮೇಲೆ ಸಿಎಂ ಬಿಎಸ್ವೈ ಗರಂ ಆಗಿದ್ದಾರೆ. ನಾಳೆವರೆಗೆ ಆಗಲ್ಲ, ಇಂದೇ ತಿಳಿಸಿ. ಸದ್ಯ ನಿಮ್ಮ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಗಳಿವೆ...? ಇವಾಗ ಎಷ್ಟು ಮಾಡಬಹುದು..? ನಾವು ಹೇಳಿದಂತೆ ಶೇಕಡ 50 ರಷ್ಟು ಬೆಡ್ ಮೀಸಲಿಡಿ. ಈ ಬಗ್ಗೆ ಇಂದೇ ತಮ್ಮ ನಿರ್ಧಾರ ತಿಳಿಸಿ. ನಾಳೆವರೆಗೂ ನಾವು ಕಾಯೋಕೆ ಆಗಲ್ಲ. ನಾನು ಇವಾಗ ಮತ್ತೆ ಬರ್ತೇನೆ, ಅದೇನು ಚರ್ಚಿಸಿ ತಿಳಿಸಿ ಎಂದು ಹೇಳಿ ಸಿಎಂ ಬಿಎಸ್ ಯಡಿಯೂರಪ್ಪ ಸಭೆಯಿಂದ ಹೊರಬಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ