ಕೊರೋನಾ ವಿರುದ್ಧದ ಹೋರಾಟಕ್ಕೆ ಒಂದು ವರ್ಷದ ಸಂಬಳವನ್ನೇ ದೇಣಿಗೆಯಾಗಿ ನೀಡಿದ ಸಿಎಂ ಬಿಎಸ್​ವೈ

ಸಾಕಷ್ಟು ಉದ್ಯಮಿಗಳು ನೂರಾರು ಕೋಟಿ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆಯಾಗಿ ನೀಡುತ್ತಿದ್ದಾರೆ. ಈಗ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಒಂದು ವರ್ಷದ ವೇತನವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಮುಡಿಪಿಟ್ಟಿದ್ದಾರೆ.

news18-kannada
Updated:April 1, 2020, 2:30 PM IST
ಕೊರೋನಾ ವಿರುದ್ಧದ ಹೋರಾಟಕ್ಕೆ ಒಂದು ವರ್ಷದ ಸಂಬಳವನ್ನೇ ದೇಣಿಗೆಯಾಗಿ ನೀಡಿದ ಸಿಎಂ ಬಿಎಸ್​ವೈ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಏ.1): ಕೊರೋನಾ ವೈರಸ್​ ವಿರುದ್ಧ ಹೋರಾಡಲು ವಿಶ್ವವೇ ಒಂದಾಗಿದೆ. 21 ದಿನಗಳ ಲಾಕ್​ಡೌನ್​ ಆದೇಶ ಹೊರಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು, ಸಾಕಷ್ಟು ಉದ್ಯಮಿಗಳು ನೂರಾರು ಕೋಟಿ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆಯಾಗಿ ನೀಡುತ್ತಿದ್ದಾರೆ. ಈಗ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಒಂದು ವರ್ಷದ ವೇತನವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಮುಡಿಪಿಟ್ಟಿದ್ದಾರೆ. ಈ ಮೂಲಕ ಉಳಿದ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮನವಿ ಮಾಡಿರುವ ಅವರು, “ನನ್ನ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್​-19ಕ್ಕೆ ನೀಡುತ್ತಿದ್ದೇನೆ. ಅದರಂತೆ ಸಂಪುಟ ಸಹೋದ್ಯೋಗಿಗಳು, ಶಾಸಕರು  ಸಂಸದರು, ಅಧಿಕಾರಿಗಳು ಕೈಲಾದಷ್ಟು ಸಹಾಯ ಮಾಡಿ,” ಎಂದಿದ್ದಾರೆ.

ಇನ್ನು ಲಾಕ್​ಡೌನ್​ ಪೂರ್ಣಗೊಳ್ಳಲು 14 ದಿನಗಳು ಬಾಕಿ ಉಳಿದಿವೆ. ಈ ಬಗ್ಗೆ ಮಾತನಾಡಿರುವ ಬಿಎಸ್​ವೈ, “ಈ ದಿನಗಳು ಅತ್ಯಂತ ನಿರ್ಣಾಯಕ ದಿನಗಳಾಗಿವೆ. ಈ ದಿನಗಳಂದು ನಾವು ಬಹಳ ಕಟ್ಟುನಿಟ್ಟಾಗಿ ಇರಬೇಕು. ಮನೆಯಿಂದ ಹೊರಗೆ ಬರಬಾರದು. ನಾವೆಲ್ಲರೂ ಕಟ್ಟು ನಿಟ್ಟಾಗಿ ಲಾಕ್ ಡೌನ್ ಪಾಲನೆ ಮಾಡಬೇಕು.  ಕೋವಿಡ್ ವಿರುದ್ಧ ಹೋರಾಟದಲ್ಲಿ ಯಶಸ್ವಿ ಯಾಗಬೇಕಾದರೇ ಸರ್ಕಾರಕ್ಕೆ ಸಾರ್ವಜನಿಕರು ಸಹಕಾರ ಬೇಕೆ ಬೇಕು,"  ಎಂದು ಮನವಿ ಮಾಡಿದ್ದಾರೆ.

ಇದುವರೆಗೂ ರಾಜ್ಯದಲ್ಲಿ 101 ಪ್ರಕರಣ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಪೈಕಿ ಬೆಂಗಳೂರು- 45, ಮೈಸೂರು- 14, ಚಿಕ್ಕಬಳ್ಳಾಪುರ- 9,  ದಕ್ಷಿಣ ಕನ್ನಡ- 8, ಉತ್ತರ ಕನ್ನಡ- 8, ಕಲಬುರಗಿ- 4, ದಾವಣಗೆರೆ- 3, ಉಡುಪಿ- 3, ಕೊಡಗು- 1, ಧಾರವಾಡ- 1, ತುಮಕೂರಿನಲ್ಲಿ ಇಬ್ಬರಿಗೆ ಸೋಂಕು ಬಂದಿದೆ. ಇದರಲ್ಲಿ 8 ರೋಗಿಗಳು ಆಸ್ಪತ್ರೆಯಿಂದ‌ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು, ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಲೇ ಇದ್ದು,   ಸೋಮವಾರ ಒಂದೇ ದಿನ 146 ಸೋಂಕಿತ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. ಒಟ್ಟು ಈವರೆಗೂ 1417 ಪ್ರಕರಣಗಳು ದಾಖಲಾಗಿವೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading