ನವದೆಹಲಿ, ಜ. 9: ಓಮೈಕ್ರಾನ್ ಕೋವಿಡ್ ಸೋಂಕು ಸಿಕ್ಕಾಪಟ್ಟೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಡೋಸ್ ಅಥವಾ ಬೂಸ್ಟರ್ ಡೋಸ್ (Booster dose) ಅಗತ್ಯ ಇದೆಯಾ ಇಲ್ಲವಾ ಎಂಬ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ಬೂಸ್ಟರ್ ಡೋಸ್ ಪರಿಣಾಮಕಾರಿ ಅಲ್ಲ, ಅನಗತ್ಯ ಎಂಬುದು ಕೆಲ ತಜ್ಞರ ವಾದ. ಆದರೆ, ವಿಶ್ವದ ಕೆಲ ದೇಶಗಳಲ್ಲಿ ಬೂಸ್ಟರ್ ಡೋಸ್ಗಳನ್ನ ಹಾಕಲು ನಿರ್ಧರಿಸಲಾಗಿದೆ. ಭಾರತದಲ್ಲೂ ನಾಳೆಯಿಂದ ಹೆಚ್ಚುವರಿ ವ್ಯಾಕ್ಸಿನ್ ಡೋಸ್ಗಳನ್ನ ಆಯ್ದ ಜನವರ್ಗಕ್ಕೆ ಹಾಕಲಾಗುತ್ತಿದೆ. ಪೂರ್ವದಲ್ಲೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ (Comorbidities) 60 ವರ್ಷ ಮೇಲ್ಪಟ್ಟ ವಯೋಮಾನದ ಜನರಿಗೆ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ.
ನಿನ್ನೆಯೇ ಹೆಚ್ಚುವರಿ ಡೋಸ್ಗಳನ್ನ ಪಡೆಯಲು ನೊಂದಣಿ ಕಾರ್ಯ ಆರಂಭವಾಗಿದೆ. ಹಾಗೆಯೇ, ನಿಗದಿತ ಕೇಂದ್ರಗಳಲ್ಲಿ ಅರ್ಹ ಜನರು ನೇರವಾಗಿ ತೆರಳಿ ವ್ಯಾಕ್ಸಿನ್ ಪಡೆದುಕೊಳ್ಳಬಹುದು.
ಏನಿದು ಬೂಸ್ಟರ್ ಡೋಸ್?
ಭಾರತದಲ್ಲಿ ಸದ್ಯಕ್ಕೆ ನೀಡಲಾಗುತ್ತಿರುವ ಪ್ರಮುಖ ಲಸಿಕೆಗಳೆಂದರೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್. ಇವೆರಡೂ ಕೂಡ ಡಬಲ್ ಡೋಸ್ ಲಸಿಕೆಗಳಾಗಿವೆ. ನಿರ್ದಿಷ್ಟ ಅಂತರದಲ್ಲಿ ಎರಡು ಡೋಸ್ ಪಡೆದುಕೊಂಡರೆ ವ್ಯಾಕ್ಸಿನೇಟೆಡ್ ಎನಿಸುತ್ತದೆ. ಈಗ ಈ ಎರಡು ಡೋಸ್ ಆದ ಬಳಿಕ ಹೆಚ್ಚುವರಿಯಾಗಿ ಒಂದು ಡೋಸ್ ಹಾಕಿಸಿಕೊಳ್ಳುವುದು ಬೂಸ್ಟರ್ ಡೋಸ್ ಎನಿಸುತ್ತದೆ.
ಬೂಸ್ಟರ್ ಡೋಸ್ಗೆ ಯಾರು ಅರ್ಹರು?
ಕೇಂದ್ರ ಸರ್ಕಾರದ ಲಸಿಕಾ ಅಭಿಯಾನ ಆರಂಭವಾದಾಗ ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಕೆಲ ಜನವರ್ಗಗಳಿಗೆ ಮೊದಲಿಗೆ ಲಸಿಕೆ ಹಾಕಲಾಗಿತ್ತು. ಈಗಲೂ ಅದೇ ಸೂತ್ರ ಅನುಸರಿಸಲಾಗುತ್ತಿದೆ. ಪೂರ್ವದಲ್ಲೇ ಗಂಭೀರ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟ ವಯೋಮಾನದವರು ಬೂಸ್ಟರ್ ಡೋಸ್ ಪಡೆಯಬಹುದು. ಹಾಗೆಯೇ, ಆರೋಗ್ಯ ಕಾರ್ಯಕರ್ತರು, ಫ್ರಂಟ್ಲೈನ್ ವರ್ಕರ್ಸ್ (ಸಾರ್ವಜನಿಕರೊಂದಿಗೆ ಭೌತಿಕ ಸಂಪರ್ಕದಲ್ಲಿರುವ ಪೊಲೀಸ್ ಇತ್ಯಾದಿ ಇಲಾಖೆ ಸಿಬ್ಬಂದಿ) ಇವರೂ ಬೂಸ್ಟರ್ ಡೋಸ್ಗೆ ಅರ್ಹರಾಗಿದ್ದಾರೆ.
ಇದನ್ನೂ ಓದಿ: Snowstorm: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾರೀ ಹಿಮಪಾತ: 22 ಜನ ಸಾವು
ಎರಡನೇ ಡೋಸ್ಗೂ ಮೂರನೇ ಡೋಸ್ಗೂ ಎಷ್ಟು ಸಮಯ ಅಂತರ ಇರಬೇಕು?
ಎರಡನೇ ಡೋಸ್ ಪಡೆದು 39 ವಾರ ಬಳಿಕ, ಅಂದರೆ 9 ತಿಂಗಳ ಬಳಿಕ ಮೂರನೇ ಡೋಸ್ ಪಡೆಯಬಹುದು ಎಂದು ಸದ್ಯಕ್ಕೆ ಇರುವ ಸೂಚನೆ. 2021 ಮಾರ್ಚ್-ಏಪ್ರಿಲ್ ತಿಂಗಳಷ್ಟರಲ್ಲಿ ವ್ಯಕ್ತಿಗಳು ಎರಡನೇ ಡೋಸ್ ಲಸಿಕೆ ಪಡೆದಿರುವವರು ಈ ತಿಂಗಳು ಬೂಸ್ಟರ್ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅಡ್ಡಿ ಇಲ್ಲ.
ವ್ಯಾಕ್ಸಿನ್ ಮಿಕ್ಸಿಂಗ್ ಇದೆಯಾ?
ಬೇರೆ ಬೇರೆ ಲಸಿಕೆಗಳ ಸಂಯೋಗ ಪಡೆದುಕೊಂಡರೆ ಹೆಚ್ಚು ಪರಿಣಾಮಕಾರಿ ಎಂಬ ಅನಿಸಿಕೆಗಳನ್ನ ನೀವು ಕೇಳಿರಬಹುದು. ಆದರೆ, ಸರ್ಕಾರ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯ ಹಿಂದೆ ಎರಡು ಡೋಸ್ಗೆ ಯಾವ ಲಸಿಕೆ ತೆಗೆದುಕೊಳ್ಳಲಾಗಿತ್ತೋ ಅದೇ ಲಸಿಕೆಯ ಮೂರನೇ ಡೋಸ್ ತೆಗೆದುಕೊಳ್ಳಬೇಕು. ಅಂದರೆ ಮೂರೂ ಡೋಸ್ ಲಸಿಕೆಯೂ ಒಂದೇ ಆಗಿರಬೇಕು.
ಇದನ್ನೂ ಓದಿ: Court: ದೇವರ ಮೂರ್ತಿಯನ್ನು ತಪಾಸಣೆಗೆ ತರುವಂತೆ ಆದೇಶಿಸಿದ್ದ ನ್ಯಾಯಾಲಯ! ಮುಂದೆ?
ಕೋಮಾರ್ಬಿಟೀಸ್ ಯಾವುವು?
ಪೂರ್ವದಲ್ಲೇ ನಿರ್ದಿಷ್ಟ ಗಂಭೀರ ಆರೋಗ್ಯ ಸಮಸ್ಯೆ ಇರುವುದಕ್ಕೆ ಕೋಮಾರ್ಬಿಟಿಸ್ ಎನ್ನುತ್ತಾರೆ. ಹೃದಯಸಂಬಂಧಿ ಕಾಯಿಲೆ, ಡಯಾಬಿಟಿಸ್, ಕಿಡ್ನಿ, ಲಿವರ್, ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್ ಪಡೆದವರು, ಕ್ಯಾನ್ಸರ್ ಇತ್ಯಾದಿ ಆರೋಗ್ಯ ಸಮಸ್ಯೆ ಇದ್ದವರು ಬೂಸ್ಟರ್ ಡೋಸ್ ಪಡೆಯಬೇಕು.
ನೊಂದಣಿಗೆ ದಾಖಲೆಗಳು?
Co-Win ಪ್ಲಾಟ್ಫಾರ್ಮ್ ಮೂಲಕ ಮೂರನೇ ಡೋಸ್ಗೆ ನೊಂದಾಯಿಸಬಹುದು. ಎರಡನೇ ಡೋಸ್ ಪಡೆದ ದಿನಾಂಕದ ಆಧಾರದ ಮೇಲೆ ಬೂಸ್ಟರ್ ಡೋಸ್ನ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.
ಮೊದಲೆರಡು ಡೋಸ್ಗಳಂತೆಯೇ ಬೂಸ್ಟರ್ ಡೋಸ್ ಪಡೆಯಲು ಆಧಾರ್ ನಂಬರ್ ಇದ್ದರೆ ಸುಲಭ. ಆಧಾರ್ ಕಾರ್ಡ್ ಇಲ್ಲದಿದ್ದರೆ ವೋಟರ್ ಐಡಿ, ಪಾಸ್ಪೋರ್ಟ್, ಡ್ರೈವಿಂಗ್ ಲೆಸೆನ್ಸ್, ಪಾನ್ ಕಾರ್ಡ್, ಪಿಂಚಣಿ ದಾಖಲೆ ಇತ್ಯಾದಿ ಇದ್ದರೂ ಸಾಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ