Booster Dose: ಇಂದಿನಿಂದ ದೇಶಾದ್ಯಂತ ಬೂಸ್ಟರ್ ಡೋಸ್​ ವಿತರಣೆ, ಯಾರು ಪಡೆಯಲು ಅರ್ಹರು, ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ

ಬೂಸ್ಟರ್ ಡೋಸ್ ಲಸಿಕೆ ವೇಳೆ ಮಿಕ್ಸ್ ಡೋಸ್ ನೀಡಲು ಅವಕಾಶವಿಲ್ಲ. ಈ ಹಿಂದೆ ಮೊದಲ, ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಜ.10): ದೇಶದಲ್ಲಿ ಕೊರೋನಾ(Corona) ಮತ್ತು ಓಮೈಕ್ರಾನ್(Omicron) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಇಂದಿನಿಂದ ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ(Frontline Workers) ಮೂರನೇ ಡೋಸ್(Third Dose) ಲಸಿಕೆ ನೀಡಲಾಗುತ್ತದೆ. ಕೊರೋನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ(PM Narendra Modi) ಶೀಘ್ರದಲ್ಲೇ ಮುನ್ನೆಚ್ಚರಿಕಾ ಮೂರನೇ ಡೋಸ್(Precautionary 3rd Dose) ನೀಡುವುದಾಗಿ ಕಳೆದ ತಿಂಗಳು ಘೋಷಿಸಿದ್ದರು.

ಭಾರತದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಹಾಘೂ ಅದಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡ್ ಜನರಿಗೆ ಕೊರೋನಾ ವೈರಸ್​ ವಿರುದ್ಧ ಮುನ್ನೆಚ್ಚರಿಕಾ ಡೋಸ್​​ನ್ನು ಇಂದಿನಿಂದ ನೀಡಲಾಗುತ್ತದೆ.

ಯಾರ್ಯಾರಿಗೆ ಲಸಿಕೆ ನೀಡಲಾಗುತ್ತೆ?

ಪಂಚ ರಾಜ್ಯ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರನ್ನಾಗಿ ಪರಿಗಣಿಸಿರುವುದರಿಂದ ಅವರು ಬೂಸ್ಟರ್ ಡೋಸ್‌ ಪಡೆಯಲು ಅರ್ಹರಾಗಿರುತ್ತಾರೆ.

ಲಸಿಕೆ ಪಡೆಯುವುದು ಹೇಗೆ?

ಮುನ್ನೆಚ್ಚರಿಕೆಯ ಲಸಿಕೆ ಡೋಸ್‌ಗಳಿಗೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅರ್ಹರು ನೇರವಾಗಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು ಅಥವಾ ಯಾವುದೇ ಲಸಿಕಾ ಕೇಂದ್ರಕ್ಕೆ ಹೋಗಬಹುದು. ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್‌ಗಳ ಕುರಿತು ಇನ್ನೂ ಸಹ ಯಾವುದೇ ನಿರ್ಧಾರವಿಲ್ಲ.

ಇದನ್ನೂ ಓದಿ: Covid ಹೆಚ್ಚಾಗುತ್ತಿರುವ ಹಿನ್ನೆಲೆ ಮಹತ್ವದ ಸಭೆ ನಡೆಸಿದ PM Modi.. ಶೀಘ್ರವೇ CMಗಳ ಜೊತೆ ಮೀಟಿಂಗ್

ಇವರೂ ಸಹ ಲಸಿಕೆ ಪಡೆಯಲು ಅರ್ಹರು

ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮಾತ್ರವಲ್ಲದೇ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಂತಹ ಅಸ್ವಸ್ಥತೆ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯ ಮೇರೆಗೆ "ಮುನ್ನೆಚ್ಚರಿಕೆ ಡೋಸ್" ಅನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ. ಬೂಸ್ಟರ್ ಡೋಸ್​​​ಗಳಿಗೆ ಅರ್ಹರಾಗಿರುವವರು, ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಮಾತ್ರ ಅವುಗಳನ್ನು ಪಡೆಯಬೇಕು.

ಬೂಸ್ಟರ್ ಡೋಸ್ ಲಸಿಕೆ ಮಿಶ್ರಣ ಇಲ್ಲ

ಬೂಸ್ಟರ್ ಡೋಸ್ ಬಗ್ಗೆ ಇದ್ದ ಗೊಂದಲಕ್ಕೆ ಕೊನೆಗೂ ಕೇಂದ್ರ ಸರ್ಕಾರ ತೆರೆ ಎಳೆಯುವ ಕೆಲಸ ಮಾಡಿದೆ. ಬೂಸ್ಟರ್ ಡೋಸ್ ಮಿಶ್ರಣ ಯಾವುದೇ ಕಾರಣಕ್ಕೂ ಮಿಶ್ರಣ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಮೊದಲು ಕೊಟ್ಟಂತೆಯೇ ಬೂಸ್ಟರ್ ಲಸಿಕೆ ನೀಡಲಾಗುತ್ತದೆ ಬೂಸ್ಟರ್ ಡೋಸ್ ಲಸಿಕೆ ವೇಳೆ ಮಿಕ್ಸ್ ಡೋಸ್ ನೀಡಲು ಅವಕಾಶವಿಲ್ಲ. ಈ ಹಿಂದೆ ಮೊದಲ, ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು. ಕೋವಿಶೀಲ್ಡ್, ಕೋವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದವರು, ಬೂಸ್ಟರ್ ಡೋಸ್​ನ್ನೂ ಕೂಡ ಅವುಗಳನ್ನೇ ಪಡೆಯಬೇಕು. ಮಿಕ್ಸ್ ಬೂಸ್ಟರ್ ಡೋಸ್ ನೀಡಲು ಅನುಮತಿಸುವುದಿಲ್ಲ. ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಆರೋಗ್ಯ ಸೇವಕರು, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಕೇಂದ್ರ ನೀತಿ ಆಯೋಗದ ಸದಸ್ಯ ಡಾ.ವಿಕೆ ಪಾಲ್ ಸ್ಪಷ್ಟನೆ ನೀಡಿದ್ದಾರೆ.

ಇದರರ್ಥ ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಯನ್ನು ಎರಡು ಡೋಸ್‌ ಪಡೆದ ವ್ಯಕ್ತಿಗಳು ಮೂರನೇ ಡೋಸ್​​ಅನ್ನು ಪಡೆಯುತ್ತಾರೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪಡೆದವರಿಗೆ ಅದರ ಮೂರನೇ ಡೋಸ್​ ಸಿಗುತ್ತದೆ.

ಪ್ರಧಾನಿ ಮೋದಿ ಬೂಸ್ಟರ್ ಡೋಸ್ ಘೋಷಣೆ

ಓಮೈಕ್ರಾನ್ ಆತಂಕವನ್ನು ಗಮನದಲ್ಲಿಟ್ಟುಕೊಂಡು ಬೂಸ್ಟರ್ ಡೋಸ್‌ಗಳ ನಿರಂತರ ಬೇಡಿಕೆಗಳ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು "ಮುನ್ನೆಚ್ಚರಿಕೆ ಡೋಸ್" ಅನ್ನು ಘೋಷಿಸಿದ್ದರು. "ದೇಶವನ್ನು ಸುರಕ್ಷಿತವಾಗಿಡುವಲ್ಲಿ ಕೊರೋನಾ ವಾರಿಯರ್ಸ್​, ಆರೋಗ್ಯ ರಕ್ಷಣೆ ಮತ್ತು ಮುಂಚೂಣಿಯ ಕಾರ್ಯಕರ್ತರು ಭಾರೀ ಕೊಡುಗೆಯನ್ನು ನೀಡಿದ್ದಾರೆ. ಆದ್ದರಿಂದ, ಮುನ್ನೆಚ್ಚರಿಕೆಯ ದೃಷ್ಟಿಯಿಂದ, ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ "ಮುನ್ನೆಚ್ಚರಿಕೆ ಡೋಸ್" ಅನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ" ಎಂದು ಪ್ರಧಾನಿ ಮೋದಿ ಡಿಸೆಂಬರ್ 25ರಂದು ಹೇಳಿದ್ದರು.

ಇದನ್ನೂ ಓದಿ: Gangasagar Mela: ಕೊರೊನಾ ಭೀತಿ ಮಧ್ಯೆ ಗಂಗಾಸಾಗರ ಮೇಳ ನಡೆಸಲು ಕೋರ್ಟ್ ಅನುಮತಿ!

ಆದರೆ ಈಗಾಗಲೇ, ಓಮೈಕ್ರಾನ್- ಕೋವಿಡ್ ಉಲ್ಬಣದೊಂದಿಗೆ, ಅನೇಕ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಈ ಸೋಂಕು ತಗುಲಿದೆ. ಅವರಲ್ಲಿ ಹಲವರಿಗೆ ಎರಡನೇ ಬಾರಿಗೆ ಕೊರೋನಾ ಸೋಂಕು ಬಂದಿದೆ. ಮಹಾನಗರಗಳ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗಿದೆ.

ಸೋಂಕಿನ ತೀವ್ರತೆಯನ್ನು ಕುಗ್ಗಿಸುತ್ತದೆ

‘‘ಭಾರತ, ಇಸ್ರೇಲ್, ಯುಎಸ್, ಯುರೋಪ್, ಯುಕೆ ಅಥವಾ ಚೀನಾದಿಂದ ಬಂದ ಎಲ್ಲಾ ಕೋವಿಡ್​ ಲಸಿಕೆಗಳು ಪ್ರಾಥಮಿಕವಾಗಿ ರೋಗ-ಮಾರ್ಪಾಡು ಮಾಡುತ್ತವೆ. ಅವು ಸೋಂಕನ್ನು ತಡೆಯುವುದಿಲ್ಲ. ಮುನ್ನೆಚ್ಚರಿಕೆಯ ಡೋಸ್ ಪ್ರಾಥಮಿಕವಾಗಿ ಸೋಂಕಿನ ತೀವ್ರತೆಯನ್ನು ತಗ್ಗಿಸಲು, ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವನ್ನು ತಡೆಯಲು ನೀಡಲಾಗುತ್ತದೆ" ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಹೇಳಿದ್ದಾರೆ.

ಮೂರನೇ ಡೋಸ್ ಲಸಿಕೆಯು ಓಮೈಕ್ರಾನ್ ರೂಪಾಂತರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ವಿರುದ್ಧ ಶೇಕಡಾ 88 ರಷ್ಟು ರಕ್ಷಣೆ ನೀಡುತ್ತದೆ ಎಂದು ಯುಕೆ ಅಧ್ಯಯನವು ಕಂಡುಹಿಡಿದಿದೆ.
Published by:Latha CG
First published: