HOME » NEWS » Coronavirus-latest-news » BOLLYWOOD SINGER KANIKA KAPOOR AMONG 4 NEW CORONAVIRUS CASES IN LUCKNOW RH

ಬಾಲಿವುಡ್ ಸಿಂಗರ್ ಕನಿಕಾ ಕಪೂರ್​ಗೂ ತಗುಲಿದ ಮಾರಕ ಕೊರೋನಾ ವೈರಸ್ ಸೋಂಕು!

ವಿದೇಶದಲ್ಲಿ ನೆಲೆಸಿರುವ ಗಾಯಕಿ ಕನಿಕಾ ಕಪೂರ್ ಕೆಲವು ವೈಯಕ್ತಿಕ ಕೆಲಸಗಳಿಗಾಗಿ ತನ್ನ ಊರಾದ ಲಕ್ನೋಗೆ ಬಂದು ರಾಜ್ಯ ರಾಜಧಾನಿಯ ಮಹಾನಗರ ಎಂಬ ಪ್ರದೇಶದಲ್ಲಿ ವಾಸವಿದ್ದರು.

news18-kannada
Updated:March 20, 2020, 3:54 PM IST
ಬಾಲಿವುಡ್ ಸಿಂಗರ್ ಕನಿಕಾ ಕಪೂರ್​ಗೂ ತಗುಲಿದ ಮಾರಕ ಕೊರೋನಾ ವೈರಸ್ ಸೋಂಕು!
ಬಾಲಿವುಡ್ ಗಾಯಕಿ ಕನಿಕಾ ಕಪೂರ್.
  • Share this:
ಲಕ್ನೋ: ಶುಕ್ರವಾರ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಸಿದ ಕೊರೋನಾ ವೈರಸ್ ಪರೀಕ್ಷೆಯಲ್ಲಿ ನಾಲ್ವರಲ್ಲಿ ಮಾರಕ ಸೋಂಕು ಪತ್ತೆಯಾಗಿದೆ. ಇವರಲ್ಲಿ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಸಹ ಒಬ್ಬರಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ನಾಲ್ಕು ಪ್ರಕರಣಗಳು ಸೇರಿ ಉತ್ತರಪ್ರದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 23ಕ್ಕೇರಿದೆ.

ವಿದೇಶದಲ್ಲಿ ನೆಲೆಸಿರುವ ಗಾಯಕಿ ಕನಿಕಾ ಕಪೂರ್ ಕೆಲವು ವೈಯಕ್ತಿಕ ಕೆಲಸಗಳಿಗಾಗಿ ತನ್ನ ಊರಾದ ಲಕ್ನೋಗೆ ಬಂದು ರಾಜ್ಯ ರಾಜಧಾನಿಯ ಮಹಾನಗರ ಎಂಬ ಪ್ರದೇಶದಲ್ಲಿ ವಾಸವಿದ್ದರು. ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇವರಿಗೆ ಮಾರಕ ಸೋಂಕು ತಗುಲಿರುವುದು ದೃಢಪಟ್ಟಿತು.

ಕೊರೋನಾ ವೈರಸ್ ಸೋಂಕಿತ ಗಾಯಕಿ ಕನಿಕಾ ಕಪೂರ್ ಎರಡು ಪಾರ್ಟಿಗಳಿಗೆ ಸಹ ಭೇಟಿ ನೀಡಿದ್ದರು. ಅಲ್ಲಿ ಅನೇಕ ಅತಿಥಿಗಳು ಹಾಜರಿದ್ದರು. ಒಂದು ಪಾರ್ಟಿಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಮತ್ತು ನಿವೃತ್ತ ನ್ಯಾಯಾಧೀಶರು ಸಹ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಉತ್ತರಪ್ರದೇಶ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಾಯಕಿ ತಂಗಿದ್ದ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಇತರ ನಿವಾಸಿಗಳಿಗೆ ಐಸೋಲೇಶನ್ ಮಾಡಿಕೊಳ್ಳಲು ಆದೇಶಿಸಿದ್ದಾರೆ. ಅಲ್ಲದೆ ಗಾಯಕಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾದ ಕೆಲವು ಜನರನ್ನು ಮತ್ತು ಪಾರ್ಟಿಯಲ್ಲಿದ್ದ ಅತಿಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕಪೂರ್ ಜೊತೆಗೆ, ರಾಜ್ಯದ ಮೂರು ಜನರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕೆಜಿಎಂಯುನಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ವೈದ್ಯರ ಮೂವರು ಸಂಬಂಧಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಕೆಲ ದಿನಗಳ ಹಿಂದೆ ಕೆಜಿಎಂಸಿಯಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದ ವೈದ್ಯಕೀಯ ತಂಡದಲಿದ್ದ ವೈದ್ಯರಲ್ಲಿ ಸಹ ಕೊರೋನಾ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಯ ಔಷಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರನ್ನು ಈಗ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಮಂಗಳವಾರ, ಉತ್ತರ ಪ್ರದೇಶದ ಎಲ್ಲಾ ಸ್ಪರ್ಧಾತ್ಮಕ ಮತ್ತು ಶೈಕ್ಷಣಿಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಮತ್ತು ಶಿಕ್ಷಣ ಸಂಸ್ಥೆಗಳು ಏಪ್ರಿಲ್ 2 ರವರೆಗೆ ಮುಚ್ಚುವಂತೆ ಯೋಗಿ ಆದಿತ್ಯನಾಥ್ ಸರ್ಕಾರವು ಆದೇಶಿಸಿದೆ.ಇದನ್ನು ಓದಿ: ಮಾ.22ರ ಭಾನುವಾರ ಜನರು ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು; ಈ ವೇಳೆ ಯಾರೊಬ್ಬರು ಮನೆಯಿಂದ ಹೊರಗೆ ಬರಬಾರದು; ಪ್ರಧಾನಿ ಮೋದಿ ಕರೆ

ಕೊರೋನಾ ವೈರಸ್ ಎಲ್ಲೆಡೆ ಹರಡುತ್ತಿರುವುದರಿಂದ ಮಾರ್ಚ್ 31 ರವರೆಗೆ ಎಲ್ಲಾ ಪ್ರವಾಸಿ ಸ್ಥಳಗಳನ್ನು ಮುಚ್ಚಲಾಗಿದೆ. ಅಲ್ಲದೇ ಮಲ್ಟಿಪ್ಲೆಕ್ಸ್‌ಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳನ್ನು ಏಪ್ರಿಲ್ 2 ರವರೆಗೆ ಮುಚ್ಚಲಾಗುವುದು. ದೇವಾಲಯಗಳು, ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚುಗಳಲ್ಲಿ ಹೆಚ್ಚಿನ ಜನ ಸೇರದಂತೆ ತಪ್ಪಿಸುವಂತೆ ಧಾರ್ಮಿಕ ಮುಖಂಡರಿಗೆ ಮನವಿ ಮಾಡಿಲಾಗಿದೆ. ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ತಹಸಿಲ್ ದಿವಸ್ ಮತ್ತು ಜನತ ದರ್ಶನವನ್ನು ಏಪ್ರಿಲ್ 2 ರವರೆಗೆ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.

ದೇಶದಾದ್ಯಂತ ಕೊರೋನಾ ವೈರಸ್ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಜನರು ಮನೆಯಿಂದ ಅನಗತ್ಯವಾಗಿ ಹೊರಬಾರದಂತೆ ಸೂಚನೆಯನ್ನು ನೀಡಲಾಗಿದೆ.

  • ವರದಿ: ಸಂಧ್ಯಾ ಎಂ


First published: March 20, 2020, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories