ಪ್ರಯಾಣಿಕರಿಗೆ ಕೊರೋನಾ ಸೋಂಕಿನ ಭಯ ಬೇಡ; ಮೆಟ್ರೋದಂತೆ ಸ್ಮಾರ್ಟ್ ಆಗಲಿದೆ ಬಿಎಂಟಿಸಿ ಟಿಕೆಟ್

ಪ್ರಯಾಣಿಕರ ಸುರಕ್ಷತೆ ಹಾಗೂ ಆರೋಗ್ಯ ಕಾಳಜಿ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ ತೋರುತ್ತಿರುವ ಆಸಕ್ತಿ ಹಾಗೂ ಅದಕ್ಕಾಗಿ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ಇದರ ಜೊತೆಗೇನೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸುವ ಕೆಲಸ ಮಾಡುತ್ತಿರುವ ಡ್ರೈವರ್ಸ್-ಕಂಡಕ್ಟರ್ಸ್ ಹಾಗೂ ಇತರೆ ಸಿಬ್ಬಂದಿಯ ಜೀವವೂ ಅಮೂಲ್ಯ-ಅವರನ್ನು ನಂಬಿಕೊಂಡು ಹಲವು ಜೀವಗಳು ಬದುಕುತ್ತಿವೆ. ಅವರಿಗೂ ಏನಾದರೂ ಮಾಡೋಣ ಎಂಬ ಕಾಳಜಿಯನ್ನು ಅವರು ತೋರಲಿ ಎಂಬುದು ಸಿಬ್ಬಂದಿಯ ಆಕಾಂಕ್ಷೆಯಾಗಿದೆ.

ಬಿಎಂಟಿಸಿ ಬಸ್

ಬಿಎಂಟಿಸಿ ಬಸ್

  • Share this:
ಬೆಂಗಳೂರು: ಕೊರೋನಾ ಸೋಂಕಿನ ಭೀತಿಯಲ್ಲಿ ಬಿಎಂಟಿಸಿ ತನ್ನ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಮಾರ್ಟ್ ಮಾಡೊಕೆ ಹೊರಟಿದೆ. ಟಿಕೆಟ್ ಇನ್ಮುಂದೆ ಡಿಜಿಟಿಲೀಕರಣಗೊಳ್ಳಲಿದೆ. ಟಿಕೆಟ್ ಕೊಳ್ಳುವ ರಗಳೆನೇ ಪ್ರಯಾಣಿಕರಿಗೆ ಇರೊಲ್ಲ. ಆದರೆ ಪ್ರಯಾಣಿಕರ ಸುರಕ್ಷತೆಗೆ ನೀಡುತ್ತಿರುವ ಆದ್ಯತೆಯನ್ನು ಸಂಸ್ಥೆಯ ಸಿಬ್ಬಂದಿಗೆ ನೀಡದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.

ಟಿಕೆಟ್ ಮೂಲಕವೂ ಕೊರೋನಾ ಹರಡುವ ಭೀತಿ ಬಿಎಂಟಿಸಿಯನ್ನು ಕಾಡುತ್ತಿರುವುದು ಸುಳ್ಳಲ್ಲ. ನಿತ್ಯ ಬಸ್​ಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಸೋಂಕಿತರು ಯಾರಿರುತ್ತಾರೊ ಗೊತ್ತಿಲ್ಲ. ಇದರ ನಡುವೆ ಟಿಕೆಟ್ ಮೂಲಕ ಕೊರೋನಾ ಹರಡುವ ಆತಂಕವನ್ನು ಮನಗಂಡೇ ಆಡಳಿತ ಮಂಡಳಿ ಟಿಕೆಟ್ ಸಹವಾಸವೇ ಬೇಡ ಎಂದು ಸಂಪೂರ್ಣ ಡಿಜಿಟಲೈಸ್ ಮಾಡಲು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತಾದಾರೆ ಟಿಕೆಟ್ ರಹಿತ ಸಂಚಾರ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ.

ಸದ್ಯ ಬಿಎಂಟಿಸಿಯಲ್ಲಿ ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟ್ ಮೆಷಿನ್) ಮೂಲಕ ಟಿಕೆಟ್ ವಿತರಿಸುವ ವ್ಯವಸ್ಥೆಯನ್ನೂ ಕೈ ಬಿಡಲಾಗಿದೆ. ನಿತ್ಯ ಟಿಕೆಟ್ ಕೊಡುವ ಗೋಜೇ ಬೇಡ ಎಂದು ದಿನದ ಹಾಗೂ ಮಾಸಿಕ ಪಾಸ್ ನೀಡಲಾಗಿದೆ. ಪಾಸ್ ಇದ್ದರೆ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕೆಲಸ ನಡೆಯಲಿದೆ. ಇದರಿಂದಾಗಿ ನೌಕರರ ಇನ್ಸೆಂಟಿವ್​ಗೆ ಕೊಕ್ಕೆ ಬಿದ್ದಿದೆ. ಇನ್ನು ಡಿಜಿಟಲೈಸ್ ಗೊಂಡರೆ ಪ್ರಯಾಣಿಕರು ತಮಗೆ ವಿತರಿಸಲಾಗುವ ಕಾರ್ಡ್​ಗಳನ್ನು ಸ್ವೈಪ್ ಮಾಡಿ ಪ್ರಯಾಣವನ್ನು ಅನಾಯಾಸಗೊಳಿಸಿಕೊಳ್ಳಬಹುದಾಗಿದೆ. ಬೇಕಾದಷ್ಟು ಹಣವನ್ನು ಕಾರ್ಡ್ ಗೆ ಭರ್ತಿ ಮಾಡಿಕೊಂಡು ಮೆಟ್ರೋ ರೀತಿಯಲ್ಲಿ ಪ್ರಯಾಣಿಸಬಹುದಾಗಿದೆ.

ಮೆಟ್ರೋ ಮಾದರಿಯಲ್ಲಿ ಸ್ಮಾರ್ಟ್ ಆಗಿ ಸಂಚಾರ ಬಿಎಂಟಿಸಿಯಲ್ಲೂ ಶೀಘ್ರವೇ ಆರಂಭವಾಗುವ ಸಾಧ್ಯತೆಯನ್ನು ಬಿಎಂಟಿಸಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳು ಆರಂಭವಾಗಿದವೆ. ಪೇಟಿಎಂ, ಗೂಗಲ್ ಪೇ ಮೂಲಕವೂ ಹಣ ಪಾವತಿಸುವ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ.

ಇದೆಲ್ಲಾ ಸರಿ, ಪ್ರಯಾಣಿಕರ ಹಿತದೃಷ್ಟಿಯಿಂದ ಇದೆಲ್ಲಾ ಮಾಡಲಾಗುತ್ತಿದೆ ನಿಜ. ಆದರೆ ಸಂಸ್ಥೆಯಲ್ಲಿ ಕೊರೋನಾ ಆರಂಭವಾದ ಮೊದಲ ದಿನದಿಂದಲೂ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ತಮ್ಮ ಕಾಳಜಿಯನ್ನೇ ಆಡಳಿತ ಮಂಡಳಿ ಮರೆತಿದೆ ಎನ್ನುವ ಅಳಲು ನೌಕರರದ್ದಾಗಿದೆ. ನಿತ್ಯ ಪ್ರಯಾಣಿಕರನ್ನು ಕೊಂಡೊಯ್ಯುವ ಸಿಬ್ಬಂದಿ ಸತ್ತಿದ್ದಾರೋ, ಬದುಕಿದ್ದಾರೋ ಎನ್ನುವುದನ್ನು ವಿಚಾರಿಸುವ ಗೋಜಿಗೂ ಹೋಗಿಲ್ಲವಂತೆ. ಕೆಲವೇ ಕೆಲವು ಕಡೆ ಬಿಟ್ಟರೆ ಬಹುತೇಕ ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ಇವತ್ತಿನವರೆಗೂ  ಆರೋಗ್ಯ ತಪಾಸಣೆಯೇ  ಆಗಿಲ್ಲವಂತೆ. ಡ್ರೈವರ್ಸ್-ಕಂಡಕ್ಟರ್ಸ್​ಗಳ ಜೀವಕ್ಕೆ ಬೆಲೆಯನ್ನೇ ಕೊಡ್ತಿಲ್ಲ ಎಂದು ಸಾರಿಗೆ ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರೊಂದಿಗೆ ನಿತ್ಯ ಕೆಲಸ ಮಾಡುವ ಡ್ರೈವರ್ಸ್ ಹಾಗೂ ಕಂಡಕ್ಟರ್ಸ್ ಗಳಿಗೆ ಡಿಪೋಗಳಲ್ಲಿ ಗ್ಲೌಸ್-ಮಾಸ್ಕ್-ಸ್ಯಾನಿಟೈಸರ್ ಗಳ ಪೂರೈಕೆಯೇ ಆಗುತ್ತಿಲ್ಲವಂತೆ. ಬಸ್​ಗಳಿಗೆ ಫ್ಯೂಮಿಗೇಷನ್ನೂ ಮಾಡ್ತಿಲ್ಲ. ಅವರಲ್ಲಿ ಎಷ್ಟು ಜನಕ್ಕೆ ಕೊರೋನಾ ಇದೆಯೋ ಎಂಬ ಭಯದಲ್ಲೇ  ಡ್ಯೂಟಿ ಮಾಡುತ್ತಿದ್ದಾರೆ ಸಿಬ್ಬಂದಿ. ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುತ್ತಿರುವ ನೌಕರರ ಬಗ್ಗೆ ಒಬ್ಬ ಜವಾಬ್ದಾರಿಯುತ ಎಂಡಿಯಾಗಿ ಶಿಖಾ ಅವರು ಇಷ್ಟೊಂದು ನಿಷ್ಕಾಳಜಿ-ನಿರ್ಲಕ್ಷ್ಯ ತೋರೋದು ಒಳ್ಳೇದಲ್ಲ ಎನ್ನುತ್ತಾರೆ  ಕೆಎಸ್ಸಾರ್ಟಿಸಿ ಸಾರಿಗೆ ಯೂನಿಯನ್ ಮುಖಂಡ ಅನಂತ ಸುಬ್ಬರಾವ್.

ಕೊರೋನಾ ಸೋಂಕು ಪ್ರಾರಂಭವಾದಾಗಿನಿಂದಲೂ ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನೇ ಮಾಡಿಸಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ಎಸಿ ಕಚೇರಿಯಲ್ಲಿ ಕುತ್ಕೊಂಡು ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವುದನ್ನುಅಭ್ಯಾಸ ಮಾಡಿಕೊಂಡಿರುವ ಹಿರಿಯ ಅಧಿಕಾರಿಗಳಿಗೆ ಏನು ಗೊತ್ತಾಗ್ಬೇಕು ನೌಕರರ ಬವಣೆ, ಕಷ್ಟು ಎಂದು ಸುಬ್ಬರಾವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಎಸಿಪಿ ಪ್ರಭುಶಂಕರ್‌-ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿರುದ್ದದ ಸುಲಿಗೆ ಪ್ರಕರಣ; ಎಸಿಬಿ ತನಿಖೆಗೆ ವರ್ಗಾಯಿಸಿ ಆದೇಶ

ಪ್ರಯಾಣಿಕರ ಸುರಕ್ಷತೆ ಹಾಗೂ ಆರೋಗ್ಯ ಕಾಳಜಿ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ ತೋರುತ್ತಿರುವ ಆಸಕ್ತಿ ಹಾಗೂ ಅದಕ್ಕಾಗಿ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ಇದರ ಜೊತೆಗೇನೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸುವ ಕೆಲಸ ಮಾಡುತ್ತಿರುವ ಡ್ರೈವರ್ಸ್-ಕಂಡಕ್ಟರ್ಸ್ ಹಾಗೂ ಇತರೆ ಸಿಬ್ಬಂದಿಯ ಜೀವವೂ ಅಮೂಲ್ಯ-ಅವರನ್ನು ನಂಬಿಕೊಂಡು ಹಲವು ಜೀವಗಳು ಬದುಕುತ್ತಿವೆ. ಅವರಿಗೂ ಏನಾದರೂ ಮಾಡೋಣ ಎಂಬ ಕಾಳಜಿಯನ್ನು ಅವರು ತೋರಲಿ ಎಂಬುದು ಸಿಬ್ಬಂದಿಯ ಆಕಾಂಕ್ಷೆಯಾಗಿದೆ.
First published: