ಬೆಂಗಳೂರು(ಜೂ.18): ಇಂತದ್ದೊಂದು ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿಯಲ್ಲಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗುತ್ತದೆ ಎಂದರೆ ಅದಕ್ಕಿಂತಲೂ ದುರಂತ ಸಂಗತಿ ಇನ್ನೊಂದಿಲ್ಲ. ಎಂಡಿಯಾಗಿರುವ ಶಿಖಾ ಮೇಡಂ ಇಂಥಾ ವ್ಯವಸ್ಥೆ ಬದಲಿಸದೇ ಅದೇಕೇ ಸುಮ್ಮಾನಿದ್ದಾರೋ ಗೊತ್ತಾಗುತ್ತಿಲ್ಲ.
ಹೌದು, ಲಾಕ್ಡೌನ್ ಸಂದರ್ಭದಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಮಹಿಳಾ ಕಂಡಕ್ಟರ್ ಕೊಟ್ಟ ಒಂದು ಹೇಳಿಕೆ ಇವತ್ತು ಆಕೆಯನ್ನು ಅಮಾನತುಗೊಳಿಸಲಿಕ್ಕೆ ಕಾರಣವಾಗಿದೆ. ಮಹಿಳೆಯನ್ನು ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಿದ ಬಿಎಂಟಿಸಿ ಆಡಳಿತ ಮಂಡಳಿ ಎಷ್ಟು ನಿಷ್ಕರುಣಿಯಾಗಿದೆ ಎನ್ನೋದು ಗೊತ್ತಾಗುತ್ತಿದೆ. ಕೆಮ್ಮಂಗಿಲ್ಲ, ಸೀನಂಗಿಲ್ಲ, ಎದುರಿಗೆ ಸಿಕ್ಕರೆ ನೋಡಂಗಿಲ್ಲ. ಅದಕ್ಕೂ ಬೇಕಾದರೇ ಮೆಮೋ ಜಡಿದು ಅಮಾನತುಗೊಳಿಸಿಬಿಡ್ತಾರೆ ಈ ಅಧಿಕಾರಿಗಳು. ಬಿಎಂಟಿಸಿಯಲ್ಲಿ ಆಗ್ತಿರೋದು ಅದೇ. ಇದಕ್ಕೆ ಮಹಿಳಾ ಕಂಡಕ್ಟರ್ ಮತ್ತೊಂದು ಸೇರ್ಪಡೆ ಅಷ್ಟೇ.
16ನೇ ಡಿಪೋದಲ್ಲಿ ನೇತ್ರಾವತಿ ಅದೋನಿ ಎನ್ನುವ ಮಹಿಳೆ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಮಾಧ್ಯಮಗಳು ಬಿಎಂಟಿಸಿಯಲ್ಲಿ ಕೈಗೊಳ್ಳಲಾಗಿರುವ ಸುರಕ್ಷತೆ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸುವಂತೆ ನೇತ್ರಾವತಿ ಅದೋನಿ ಎಂಬ ನಿರ್ವಾಹಕಿಯನ್ನು ಕೇಳಿವೆ. ಅದೇನ್ ಒತ್ತಾಯಪೂರ್ವಕವಾಗಿಯೇನೂ ಅಲ್ಲ. ಅದಕ್ಕೆ ಆಕೆ ಮುಜುಗರಪಡದೆ, ಸಂಸ್ಥೆ ವಿರುದ್ಧವೂ ಮಾತನಾಡದೆ ನಮ್ಮ ಸುರಕ್ಷತೆ ನಾವ್ ಮಾಡ್ಕೊತಿದೀವಿ ಎಂದಿದ್ದಾರೆ. ಹೀಗೆ ಹೇಳಿದ್ದೇ ತಡ ಅಧಿಕಾರಿಗಳು ಆಕೆ ಸಂಸ್ಥೆ ವಿರುದ್ಧ ಮಾತನ್ನಾಡಿದ್ದಾಳೆಂದು ತಕ್ಷಣ ಅಮಾನತುಗೊಳಿಸಿದ್ದಾರೆ.
ಮಾಧ್ಯಮಗಳಿಗೆ ನೌಕರ ಸಿಬ್ಬಂದಿ ಹೇಳಿಕೆ ಕೊಡಬಾರದೆನ್ನುವ ನಿಯಮವಿದೆ. ಒಪ್ಪಿಕೊಳ್ಳೋಣ, ಆದರೆ ಸಂಸ್ಥೆ ವಿರುದ್ಧ ಮಾತನಾಡಬಾರದು ಎನ್ನುವುದನ್ನು ಅಧಿಕಾರಿಗಳೇ ಒಪ್ಪಿಕೊಳ್ತಾರೆ. ಅಂತದ್ದರಲ್ಲಿ ನೇತ್ರಾವತಿ ಸಂಸ್ಥೆ ವಿರುದ್ದವೂ ಮಾತನಾಡಿಲ್ಲ. ಲೋಕಾಭಿರಾಮವಾಗಿ ಹೇಳಿಕೆ ಕೊಟ್ಟಿದ್ದಾರಷ್ಟೇ. ಅದಕ್ಕೆ ಏನೋ ಮಹಾಪರಾಧವಾಗಿದೆ ಎನ್ನುವ ರೇಂಜಲ್ಲಿ ಆಕೆಯನ್ನು ಅಮಾತುಗೊಳಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸ್ತಾರೆ ನೌಕರ ಯೂನಿಯನ್ ಮುಖಂಡರು.
ಇದನ್ನೂ ಓದಿ: ‘ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲೊರಟ ಬಿಜೆಪಿ ವಿರುದ್ಧ ಹೋರಾಟ ಅನಿವಾರ್ಯ‘ - ಸಿದ್ದರಾಮಯ್ಯ
ಲಾಕ್ಡೌನ್ ಸಮಯದಲ್ಲಿ ತಮ್ಮ ಕುಟುಂಬ-ಪ್ರಾಣ ಲೆಕ್ಕಿಸದೆ ದುಡಿದವರಲ್ಲಿ ನೌಕರ ಸಿಬ್ವಂದಿ ಕೂಡ ಒಬ್ರು. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಲೋಕಾಭಿರಾಮವಾಗಿ ಉತ್ತರಿಸಿದ್ದೇ ಅಧಿಕಾರಿಗಳಿಗೆ ಘನಘೋರ ಅಪರಾಧವಾಗಿ ಕಂಡಿದೆ. ಆಕೆಯನ್ನು ಕರೆದು ವಾರ್ನ್ ಮಾಡುವ ಕೆಲಸವನ್ನು ಪಶ್ಚಿಮ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಮಾಡಬಹುದಾಗಿತ್ತು. ಅದನ್ನು ಬಿಟ್ಟು ಅಮಾನತು ಆದೇಶ ಹೊರಡಿಸಿದ್ದು ಯಾವ ನ್ಯಾಯ. ಇದರ ಕಲ್ಪನೆಯೂ ಇರದ ನೇತ್ರಾವತಿಗೆ ಆಕಾಶವೇ ಕಳಚಿಬಿದ್ದಂತ ಅಘಾತ.
ಈ ಬಗ್ಗೆ ಕೇಳಿದ್ರೆ ಮೇಲಾಧಿಕಾರಿಗಳಿಂದ ಯಾವುದೇ ಸಮರ್ಪಕ ಉತ್ತರ ಸಿಕ್ಕಿಲ್ಲ. ಎಂಡಿ ಶಿಖಾ ಮೇಡಮ್ ಕಚೇರಿ ಎಡತಾಕಿದರೂ ಅಲ್ಲಿಂದ್ಲೂ ಸ್ಪಂದನೆ ಸಿಕ್ಕಿಲ್ಲ. ನೇತ್ರಾವತಿಗೆ ಈಗ ದಿಕ್ಕೇ ತೋಚದಂತಾಗಿದೆ. ಬಿಎಂಟಿಸಿಯಲ್ಲಿ ಕೆಳಹಂತದ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಮತ್ತೊಂದು ಭಾಗವಾಗಿ ನೇತ್ರಾವತಿ ಅದೋನಿ ಅವರ ಸಸ್ಪೆಂಡ್ ಆಗಿದೆ.
ಅಧಿಕಾರಿಗಳು ಮನುಷ್ಯತ್ವ ಇಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಲೇ ಇದ್ದಾರೆ. ನೌಕರರ ಬವಣೆ-ನೋವು-ಅಸಹಾಯಕತೆ-ಸಮಸ್ಯೆ ಅರ್ಥನೇ ಮಾಡಿಕೊಂಡಿಲ್ಲ. ಕೊರೋನಾ ವಾರಿಯರ್ಸ್ಗಳಾಗಿ ಕೆಲಸ ಮಾಡಿದ ಸಿಬ್ಬಂದಿಯನ್ನು ಕ್ಷುಲ್ಲಕ ಕಾರಣಕ್ಕೆ ಟಾರ್ಗೆಟ್ ಮಾಡಿ ಕೆಲಸದಿಂದ ಅಮಾನತುಗೊಳಿಸೋದು. ಕಾರಣ ಕೇಳಿ ನೊಟೀಸ್ ನೀಡುವಂಥ ಕೆಲಸ ಮಾಡ್ತಿರೋದು ನಿಜಕ್ಕೂ ನಾಗರಿಕ ಸಮಾಜ ಒಪ್ಪುವಂಥ ಕೆಲಸನಾ ಇದು ಎಂದು ಜನರು ಪ್ರಶ್ನಿಸ್ತಿದ್ದಾರೆ.
ಇನ್ನು ತನ್ನ ಅಧಿಕಾರದ ವ್ಯಾಪ್ತಿಯಲ್ಲೇ ಸಿಬ್ಬಂದಿಯನ್ನು ಅದ್ರಲ್ಲೂ ಮಹಿಳಾ ಸಿಬ್ಬಂದಿಯನ್ನು ಅಮಾತುಗೊಳಿಸುವಂಥ ಕೆಲಸವನ್ನು ಅಧಿಕಾರಿಗಳು ಕ್ಷುಲ್ಲಕ ಕಾರಣಕ್ಕೆ ಮಾಡಿರುವುದನ್ನು ಓರ್ವ ಎಂಡಿಯಾಗಿ ಶಿಖಾ ಮೇಡಂ ಪ್ರಶ್ನಿಸಬಹುದಿತ್ತು. ಆದರೆ, ಎಸಿ ಕಚೇರಿಯಲ್ಲಿ ಕುತ್ಕೊಂಡಿರುವ ಅವರಿಗೆ ನೌಕರರ ಬವಣೆ ಹೇಗೆ ಅರ್ಥವಾಗ್ಬೇಕು ಹೇಳಿ. ಕೊರೋನಾ ಸ್ಪೆಷಲ್ ಡ್ಯೂಟಿ ಎಂದು ಅಲ್ಲಿಗೆ ಶಿಫ್ಟ್ ಆದ ಅವರಿಗೆ ಅದನ್ನು ವಿಚಾರಿಸುವ ವ್ಯವಧಾನವೂ ಇಲ್ಲ..
ತಪ್ಪೇ ಮಾಡದ ಕಾರಣಕ್ಕೆ ಅಮಾನತ್ತಾಗಿರುವ ಕಂಡಕ್ಟರ್ ನೇತ್ರಾವತಿ ಅದೋನಿ ದಿನಂಪ್ರತಿ ಎಂಡಿ ಕಚೇರಿ, ಶಿಸ್ತು ವಿಭಾಗದ ಅಧಿಕಾರಿಗಳ ಕಚೇರಿಯನ್ನು ಎಡತಾಕುತ್ತಲೇ ಇದ್ದಾರೆ. ಆದರೆ, ಅವರಿಗೆ ಸರಿಯಾದ ಸ್ಪಂದನೆನೂ ಸಿಗ್ತಿಲ್ಲ. ಅಧಿಕಾರಿಗಳು ಏನಾಗಿದೆ ಎಂದು ವಿಚಾರಿಸುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಬಿಎಂಟಿಸಿಯಲ್ಲಿ ಪರಿಸ್ಥಿತಿ ಇಷ್ಟು ಹದಗೆಟ್ಟುಹೋಗಿದೆಯೇ. ಮಾನವೀಯತೆ-ಮನುಷ್ಯತ್ವ ಸತ್ತೋಗಿದೆಯೇ ಗೊತ್ತಾಗ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ