ಬ್ಲಾಕ್​ ಫಂಗಸ್​: ಭಾರತದ ನೀತಿಯನ್ನು ಪ್ರಶ್ನಿಸಿ ಕೇಂದ್ರದ ಎದುರು 3 ಪ್ರಶ್ನೆಗಳನ್ನಿಟ್ಟ ರಾಹುಲ್ ಗಾಂಧಿ!

Black Fungus: ಕಪ್ಪು ಫಂಗಸ್‌‌ ಬಗ್ಗೆ ರಾಹುಲ್ ಗಾಂಧಿ ಹಿಂದಿ ಭಾಷೆಯಲ್ಲಿ ಟ್ವಿಟರ್‌ನಲ್ಲಿ ಕೇಂದ್ರದೊಂದಿಗೆ ಪ್ರಶ್ನೆ ಕೇಳಿದ್ದು, ಸಾಂಕ್ರಮಿಕದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬ್ಲ್ಯಾಕ್​ ಫಂಗಸ್

ಬ್ಲ್ಯಾಕ್​ ಫಂಗಸ್

 • Share this:
  ನವ ದೆಹಲಿ (ಜೂನ್ 01); ದೇಶದಲ್ಲಿ ಕೊರೋನಾ ವೈರಸ್​ ಕಾಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೋನಾವನ್ನು ನಿಯಂತ್ರಿಸುವುದೇ ಸರ್ಕಾರಕ್ಕೆ ಭಾರೀ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈ ನಡುವೆ ಬ್ಲಾಕ್​ ಪಂಗಸ್​ ಸಹ ದಿನದಿಂದ ದಿನಕ್ಕೆ ಏರಿಯಾಗುತ್ತಿದ್ದು, ಈಗಾಗಲೇ ಈ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಅಂಗೀಕರಿಸಲಾಗಿದೆ. ಅಲ್ಲದೆ, ನೂರಾರು ಜನ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ನಡುವೆ ದೇಶದಲ್ಲಿ ಕಪ್ಪು ಫಂಗಸ್‌‌ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಬ್ಲಾಕ್ ಫಂಗಸ್​ ನಿಯಂತ್ರಣಕ್ಕೆ ಕೇಂದ್ರ ಕೈಗೊಂಡಿರುವ ನೀತಿ ಏನು ಎಂದು ಪ್ರಶ್ನಿಸಿ ಸರ್ಕಾರದ ಎದುರು ಮೂರು ಮಹತ್ವದ ಪ್ರಶ್ನೆಗಳನ್ನಿಟ್ಟಿದ್ದಾರೆ. ಅಲ್ಲದೆ, ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದೂ ತಾಕೀತು ಮಾಡಿದ್ದಾರೆ.

  ಕಪ್ಪು ಫಂಗಸ್‌‌ ಬಗ್ಗೆ ರಾಹುಲ್ ಗಾಂಧಿ ಹಿಂದಿ ಭಾಷೆಯಲ್ಲಿ ಟ್ವಿಟರ್‌ನಲ್ಲಿ ಕೇಂದ್ರದೊಂದಿಗೆ ಪ್ರಶ್ನೆ ಕೇಳಿದ್ದು, ಸಾಂಕ್ರಮಿಕದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.  "ಒಂದನೆಯದಾಗಿ ಸೋಂಕಿಗೆ ಬಳಸುವ ಆಂಫೊಟೆರಿಸಿನ್-ಬಿ ಔಷಧದ ಕೊರತೆಗೆ ಸರ್ಕಾರ ಏನು ಮಾಡುತ್ತಿದೆ. ಎರಡನೆಯದ್ದು ಈ ಔಷಧಿಯನ್ನು ರೋಗಿಗಳಿಗೆ ತಲುಪಿಸುವ ವಿಧಾನವೇನು? ಮೂರನೆಯದಾಗಿ, ಚಿಕಿತ್ಸೆ ನೀಡುವ ಬದಲು ಮೋದಿ ಸರ್ಕಾರವು ಜನತೆಯನ್ನು ಔಪಚಾರಿಕತೆಗೆ ಯಾಕೆ ಸಿಲುಕಿಸುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.  ಇಷ್ಟೇ ಅಲ್ಲದೆ ನಿರುದ್ಯೋಗ ಹೆಚ್ಚಳ ಮತ್ತು ಜಿಡಿಪಿ ಇಳಿಕೆಯ ಬಗ್ಗೆಯು ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗ ಹಚ್ಚಳದ ಚಾರ್ಟ್ ಅನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು "ಪ್ರಧಾನ ಮಂತ್ರಿಯ ‘ಹಾಲ್‌ ಆಫ್‌ ಶೇಮ್‌’, ಕನಿಷ್ಠ ಜಿಡಿಪಿ ಮತ್ತು ಗರಿಷ್ಠ ನಿರುದ್ಯೋಗ" ಎಂದು ಅವರು ಹೇಳಿದ್ದಾರೆ.

  ದೇಶಾದ್ಯಂತ ಕೊರೊನಾ ಸೋಂಕು ಪ್ರಚೋದಿತ ಕಪ್ಪು ಫಂಗಸ್‌ ಪ್ರಕರಣವು ಗಮನಾರ್ಹವಾಗಿ ಹೆಚ್ಚಳಗೊಂಡಿದೆ, ಫಂಗಸ್‌ನಿಂದ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾದೆ. ಕರ್ನಾಟಕದಲ್ಲಿ ಇದುವರೆಗೆ 1,250 ಪ್ರಕರಣಗಳು ಪತ್ತೆಯಾಗಿದ್ದು, 39 ಸಂಬಂಧಿತ ಸಾವುಗಳು ವರದಿಯಾಗಿವೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸೋಂಕಿನಿಂದ 39 ಜನರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶುಕ್ರವಾರ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಒಟ್ಟು 147 ಕಪ್ಪು ಫಂಗಸ್‌ ಪ್ರಕರಣಗಳು ವರದಿಯಾಗಿವೆ.

  ಭಾರತದಲ್ಲಿ ಕೊರೋನಾ ಸ್ಥಿತಿ:

  ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿದ್ದ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗುವ ಲಕ್ಷಣಗಳು ಗೋಚರಿಸತೊಡಗಿವೆ. 54 ದಿನದ ಬಳಿಕ 1.27 ಲಕ್ಷ ಕೇಸುಗಳು ದಾಖಲಾಗಿರುವುದು ಇಂಥದೊಂದು ಆಶಾವಾದ ಮೂಡಿಸಿದೆ. ಅಲ್ಲದೆ 43 ದಿನಗಳ ಬಳಿಕ ಮೊದಲ ಬಾರಿಗೆ ಸಕ್ರೀಯ ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕಿಂತ ಕಡಿಮೆ ಆಗಿರುವುದು ಮತ್ತು ಒಂದೇ ದಿನ 1,30,572 ಸಕ್ರೀಯ ಪ್ರಕರಣಗಳು ಇಳಿಕೆ ಆಗಿರುವುದು ತುಸು ಸಮಾಧಾನ ಮೂಡಿಸಿದೆ.

  ಇದನ್ನೂ ಓದಿ: Corona 3rd Wave: ಮಕ್ಕಳಿಗೆ ಬೆದರಿಕೆಯಾಗಲಿರುವ ಕೊರೋನಾ ಮೂರನೇ ಅಲೆ; ಶೀಘ್ರದಲ್ಲೇ ಸರ್ಕಾರದಿಂದ ಮಕ್ಕಳಿಗೆ ಮಾರ್ಗಸೂಚಿ-ಲಸಿಕೆ!

  ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು. ಮೇ 30ರಂದು ಕೇಸುಗಳ ಸಂಖ್ಯೆ ಒಂದೂವರೆ ಲಕ್ಷದ (1,52,734) ಸಮೀಪ ಬಂದಿದೆ. ಈಗ ಮೇ 31ರಂದು 1,27,510 ಪ್ರಕರಣಗಳು ಪತ್ತೆ ಆಗಿವೆ.

  ಇದನ್ನೂ ಓದಿ: ಕೋವಿಡ್​ ರೋಗಿಗಳಿಗೆ 2-ಡಿಜಿ ಔಷಧಿ ಬಳಕೆಯ ನಿರ್ದೇಶನಗಳನ್ನು ನೀಡಿದ ಡಿಆರ್​ಡಿಒ: ಇದನ್ನು ಬಳಸುವುದು ಹೇಗೆ? ಯಾವಾಗ?

  ಮಂಗಳವಾರ 1,27,510 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,81,75,044ಕ್ಕೆ ಏರಿಕೆ ಆಗಿದೆ.‌ ಮಂಗಳವಾರ 2,795 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,31,895ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 21 ಕೋಟಿ ದಾಟಿದೆ.‌ ಈವರೆಗೆ 21,60,46,638 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ.

  ದೇಶದಲ್ಲಿ ಇನ್ನೂ 20,26,092 ಆಕ್ಟಿವ್ ಕೇಸುಗಳಿವೆ. ಈವರೆಗೆ 2,59,47,629 ಮಂದಿ ಕೊರೋನಾದಿಂದ ಗುಣಮುಖ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,55,287 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸತತವಾಗಿ 19ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ಗುಣ ಆಗುವವರ ಸಂಖ್ಯೆ ಹೆಚ್ಚಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ 9.04ರಷ್ಟಾಗಿದೆ‌.‌ ದೈನಂದಿನ ಪಾಸಿಟಿವಿಟಿ ದರ 6.62ರಷ್ಟಾಗಿದ್ದು ಸತತವಾಗಿ 8 ದಿನಗಳವರೆಗೆ ಶೇಕಡಾ 10ಕ್ಕಿಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌.
  Published by:MAshok Kumar
  First published: